ಆಗತಾನೇ ಹುಟ್ಟಿದ ವೈಲ್ಡ್ ಬೀಸ್ಟ್ ನ ಕರುವಿಗೆ ಅಟ್ಯಾಕ್ ಮಾಡಿದ ಸಿಂಹಿಣಿಯನ್ನೇ ಅಮ್ಮನೆಂದುಕೊಂಡು ಕೆಚ್ಚಲು ಹುಡುಕಿದ ಕರು !| ವೈರಲ್ ಯೂ ಟ್ಯೂಬ್ ನೋಡಿ !

ಅದು ಪ್ರವಾಸಿಗಳ ಸ್ವರ್ಗದಂತಿರುವ ಪ್ರದೇಶ. ಆದರೆ ಅದು ಹಲವು ಕಾಡು ಪ್ರಾಣಿಗಳ ವಾಸದ ಮನೆ. ಮುಂಗಾರು ಮೋಡ ಆಕಾಶದಲ್ಲಿ ಗುಂಪುಗಾರಿಕೆ ಮಾಡಿಕೊಂಡು, ಒಂದಕ್ಕೊಂದು ಬಡಿದಾಡಿ ಕೊಂಡು ಸಿಡಿಲು ಮಿಂಚು ಮೂಡಿ ಮಳೆಯ ಮೊದಲ ಹನಿ ಭೂಮಿಗೆ ಬಿದ್ದಾಗ ಜೀವ ಸಂಚಾರ ದ್ವಿಗುಣ.

 


ಅಲ್ಲಿ ವೈಲ್ಡ್ ಬೀಸ್ಟ್ ಎನ್ನುವ ಪ್ರಾಣಿಗಳಿಗೆಯೇನೂ ಕಮ್ಮಿ ಇಲ್ಲ. ಸಾವಿರ ಸಾವಿರ ಸಂಖ್ಯೆಯಲ್ಲಿ, ಗುಂಪು-ಗುಂಪಾಗಿ ಚಲಿಸುವ ಮೋಡಗಳಂತೆ ಆ ಪ್ರಾಣಿಗಳು ಆಹಾರ ಹುಡುಕಿಕೊಂಡು ಬಯಲಿಂದ ಬಯಲಿಗೆ ಚಲಿಸುತ್ತಿರುತ್ತವೆ. ಅವುಗಳ ಚಲನವಲನವನ್ನು ಒಂದು ಹೆಣ್ಣು ಸಿಂಹವು ಪತ್ತೆದಾರಳ ಫೋಕಸ್ ನಿಂದ ಕಾದುಕುಳಿತು ಗಮನಿಸುತ್ತಿದ್ದಳು.

ಅಷ್ಟರಲ್ಲಿ ಒಂದು ಗಬ್ಬದ ವೈಲ್ಡ್ ಬೀಸ್ಟ್ ಗೆ ಪ್ರಸವದ ಬೇನೆ ಶುರುವಾಗಿತ್ತು. ಆಕೆಯ ಮಗು ಅದಾಗಲೇ ಗರ್ಭದಿಂದ ಹೊರಗೆ ಮುಖ ಮಾತ್ರ ಇಣುಕಿ ನೋಡಿ ಭೂಮಿಯನ್ನು ಕಣ್ಣು ಪಿಳುಕಿಸಿ ನೋಡಲು ಶುರುಮಾಡಿತ್ತು. ಅಮ್ಮ ಮಾತ್ರ ತನ್ನ ಪ್ರಯಾಣದಲ್ಲಿ ಮಗ್ನ.  ಇನ್ನೊಂದೈದು ನಿಮಿಷಗಳಲ್ಲಿ ಹೆರಿಗೆಯಾಗಿತ್ತು. ಹುಟ್ಟಿದ ತಕ್ಷಣ ಮರಿ ಭೂಮಿಯಲ್ಲಿ ಬದುಕಲು ಪ್ರಾಕ್ಟೀಸ್ ಶುರು ಮಾಡಿದ್ದ. ತಡವರಿಸುವ ಕಾಲುಗಳಲ್ಲಿ ತಕ್ಷಣ ಭೂಮಿಯ ನಿಂತಿದ್ದ. ಅಷ್ಟರಲ್ಲೇ ನಾಲ್ಕು ತಪ್ಪು ಹೆಜ್ಜೆ, ಅಮ್ಮನ ಕಾಲಿಗೆ ಅಂಟಿಕೊಂಡೇ ಬೀಸು ನಡಿಗೆ.

ಆಗ ಹೊರಗೆ ಬಂದಿತ್ತು ಹಸಿದ ಸಿಂಹಿಣಿ. ಸಾವಕಾಶವಾಗಿ ಮೇಯುತ್ತಾ ಸಾಗುತ್ತಿದ್ದ ವೈಲ್ಡ್ ಬೀಸ್ಟ್ ಗಳು ದಿಕ್ಕಾಪಾಲಾಗಿ ಓಡಿ ಹೋಗಿದ್ದು, ಆ ಕರುವಿನ ಅಮ್ಮ ಕೂಡ ತಮ್ಮವರ ಗುಂಪಿನಲ್ಲಿ ಓಡಿ ತಪ್ಪಿಸಿಕೊಂಡಿದ್ದಳು. ಹಿಂತಿರುಗಿ ನೋಡಿದರೆ ಸಿಂಹಿಣಿಯ ಬಲಿಷ್ಠ ಪಂಜಾಗಳ ಮಧ್ಯೆ ಮಗು ಕರು ಸಿಕ್ಕಿಹಾಕಿಕೊಂಡಿತ್ತು. ಆ ಕರುವಿನ ಅಮ್ಮನಿಗೆ ಎದುರಿಗೆ ಬಂದು ಸಿಂಹವನ್ನು ಏಕಾಏಕಿ ಎದುರಿಸುವ ಧೈರ್ಯ ಇಲ್ಲ. ಆದರೂ ಸಿಂಹದ ಸುತ್ತಮುತ್ತ ದೂರದಿಂದ ಸುಳಿದಾಡಿ ಮಗುವಿಗಾಗಿ ಹಂಬಲಿಸುತ್ತಿತ್ತು. ಸಿಂಹದ ಬಳಿಯಿಂದ ಅತ್ತಿತ್ತ ಕದಲದಂತೆ ಸಿಂಹವು ಕರುವನ್ನು ನೆಲದ ಮೇಲೆ ಕೆಡವಿತ್ತು. ಒಂದೆರಡುಬಾರಿ ಕರುವಿನ ಕುತ್ತಿಗೆಗೆ ಬಾಯಿಹಾಕಿ ಕಚ್ಚಿದಂತೆ ಮಾಡಿತ್ತು, ಆದರೆ ಕಚ್ಚಿರಲಿಲ್ಲ.


ಕರುವಿಗೆ ತನ್ನ ಪಕ್ಕ ಇರುವ ಸಿಂಹವು ತನ್ನನ್ನು ಹಿಡಿದು ತಿನ್ನಲು ಕಾದು ಕೂತಿದೆ ಎಂಬ ಬಗ್ಗೆ ಅರಿವಿರಲಿಲ್ಲ. ಹುಟ್ಟಿದ ತಕ್ಷಣ ಕರು ಹುಡುಕುವುದು ಒಂದು ಬೆಚ್ಚನೆಯ ಮೈಯ್ಯನ್ನು. ಆನಂತರ ಬಾಯಿ ಹಾಕಿ ಚೀಪಲು ಒಂದು ಕೆಚ್ಚಲನ್ನು ! ಅದರಂತೆ ಆ ಕರುವು ಆ ಸಿಂಹವನ್ನೇ ತನ್ನ ತಾಯಿಯೆಂದು ಭ್ರಮಿಸಿ, ಸಿಂಹದ ಹಣೆಗೆ ಮುತ್ತಿಟ್ಟಿದೆ. ನಂತರ ಹಾಲು ಕುಡಿಯಲು ಮೊಲೆ ತೊಟ್ಟು ಹುಡುಕಿದೆ. ಕರು ಈ ರೀತಿ ಮಾಡಿದರೂ ಹೆಣ್ಣು ಸಿಂಹವು ಕೋಪಗೊಂಡಿಲ್ಲ. ಕರುವನ್ನು ಸಾಯಿಸಿಲ್ಲ.

ಸ್ವಲ್ಪ ಸಮಯದ ನಂತರ ಸಿಂಹದ ಗಮನ ಬೇರೆ ಪ್ರೌಢ ಪ್ರಾಣಿಗಳ ಮೇಲೆ ಹರಿದಿತ್ತು. ಕರುವನ್ನು ಬಿಟ್ಟು ಅದು ದೂರ ತನ್ನ ಬೇಟೆಯ ದಾರಿಯಲ್ಲಿ ನಡೆದಿತ್ತು. ಇದೇ ಸಂದರ್ಭಕ್ಕಾಗಿ ಕಾದು ಕೂತಿದ್ದ ಅಮ್ಮ ಕರುವಿನ ಬಳಿ ಬಂದು ವಿರುದ್ಧ ದಿಕ್ಕಿನಲ್ಲಿ ಕರುವಿನ ಜೊತೆ ತಪ್ಪಿಸಿಕೊಂಡಿದ್ದಳು.

ಇಂತಹ ಅಪರೂಪದ ದೃಶ್ಯವೊಂದನ್ನು ಅವತ್ತು ವೈಲ್ಡ್ ಲೈಫ್ ಫೋಟೋಗ್ರಾಫರುಗಳು ಸೆರೆಹಿಡಿದಿದ್ದರು. ಸಿಂಹ ಕರುವನ್ನು ಯಾಕೆ ಕೊಂದಿಲ್ಲ ಎನ್ನುವ ಬಗ್ಗೆ ವೀಕ್ಷಕರು ನೂರಾರು ಕಾಮೆಂಟ್ಗಳನ್ನು ಇದೀಗ ಮಾಡುತ್ತಿದ್ದಾರೆ.

ಸಿಂಹವು, ನಾನು ಕೂಡ ಒಂದು ಬಾರಿ ಮಗುವನ್ನು ಹೆತ್ತ ತಾಯಿ. ಆದುದರಿಂದ ಇನ್ನೊಂದು ಪ್ರಾಣಿಯ ನವ ಜಾತ ಮಗುವನ್ನು ಕೊಂದಿಲ್ಲ ಎನ್ನುವುದು ಒಬ್ಬರ ಅಭಿಪ್ರಾಯ. ಆ ಕರುವು ಸಿಂಹದ ಕಿವಿಯಲ್ಲಿ ಮೆಲ್ಲಗೆ, ನಾನು ಕೋವಿಡ್ 19 ಎಂದು ಉಸುರಿತ್ತು. ಅದಕ್ಕಾಗೇ ಸಿಂಹ ಕರುವನ್ನು ಕೊಂದಿಲ್ಲ ಎನ್ನುವುದು ಒಬ್ಬರ ತಮಾಷೆ.
ಕರುವಿನ ಮೈ ಮೇಲೆ ಹುಟ್ಟಿದ ತಕ್ಷಣ ಇರುವ ಪ್ಲಾಸೆಂಟ ದ ವಾಸನೆ ಇದೆ. ಆದುದರಿಂದ ಸಿಂಹಕ್ಕೆ ಕರುವನ್ನು ಕೊಂದು ತಿನ್ನಲು ಆಗಿಲ್ಲ ಎನ್ನುವುದು ಒಬ್ಬರ ಸೈಂಟಿಫಿಕ್ ಮಾತು. ಕೆಲವೊಮ್ಮೆ ಪ್ರಾಣಿಗಳು ಇಂತಹ ನಿಗೂಢ ವಿವರಿಸಲಾಗದ ರೀತಿಯಲ್ಲಿ ವರ್ತಿಸುತ್ತವೆ ಎನ್ನುವುದು ಪ್ರಾಣಿಶಾಸ್ತ್ರಜ್ಞರ ಹೇಳಿಕೆ.
ಒಂದು ಮಾತಂತೂ ನಿಜ. ಪ್ರಾಣಿಗಳು ಹಸಿವಿಲ್ಲದೆ ವಿನಾ ಕಾರಣ ಕೊಲೆ ಮಾಡುವುದಿಲ್ಲ. ಅದೇ ಕಾರಣವೇ ಅಥವಾ ಹೆಣ್ಣು ಸಿಂಹದ ಅಮ್ಮನ ಮನಸ್ಸು ಸಣ್ಣ ಕರುವಿಗಾಗಿ ಮರುಗಿತೇ ?!

Leave A Reply

Your email address will not be published.