ವರದಕ್ಷಿಣೆಯಾಗಿ 21 ಆಮೆಗಳು, ಕಪ್ಪುನಾಯಿಯ ಸಹಿತ ಹಲವು ವಸ್ತುಗಳಿಗೆ ವಿಚಿತ್ರ ಬೇಡಿಕೆ ಇಟ್ಟ ವರಮಹಾಶಯ !!
ಮುಂಬೈ: ಭಾರತದಲ್ಲಿ ವರದಕ್ಷಿಣೆ ಪಡೆಯುವುದಿರಲಿ, ಕೊಡುವುದು ಕೂಡಾ ಕೇಳುವುದೇ ಅಪರಾಧ. ವರದಕ್ಷಿಣೆಯನ್ನು ಕೊಟ್ಟು ವಧುವನ್ನು ವರನ ಮನೆಗೆ ಕೊಡುವವರು ತಮ್ಮ ಮಗಳ ಪ್ರಾಣದ ಜತೆ ಆಟವಾಡುವುದಲ್ಲದೆ ಮತ್ತೇನಲ್ಲ. ಒಬ್ಬರಿಗೆ ಕೊಟ್ಟು ತೃಪ್ತಿಪಡಿಸಲು ಆಗುವುದಿಲ್ಲ ಮತ್ತು ಆ ರೀತಿ ಕೊಟ್ಟದ್ದು ಶಾಶ್ವತವಲ್ಲ, ತೆಗೆದುಕೊಂಡವರು ಮತ್ತಷ್ಟು ಬೇಡಿಕೆಯನ್ನು ಇಡುತ್ತಲೆ ಹೋಗುತ್ತಾರೆ. ಇದು ಹೆಚ್ಚಿನ ಸಂದರ್ಭಗಳಲ್ಲಿ ನಿಜವಾಗಿದೆ.
ಕೆಲವರು ಹಣ ಕೇಳಿದರೆ, ಇನ್ನು ಕೆಲವರು ಬಂಗಲೆ, ಚಿನ್ನ, ದುಬಾರಿ ಕಾರು, ಉಳ್ಳವರು ಸೈಟು ಆಸ್ತಿ ಮುಂತಾದವುಗಳನ್ನು ಕೇಳುತ್ತಾರೆ. ಇದರಲ್ಲಿ ಅಚ್ಚರಿಯೇನಿಲ್ಲ. ಆದರೆ, ಮಹಾರಾಷ್ಟ್ರದ ಔರಂಗಬಾದ್ ನಲ್ಲಿರುವ ಕುಟುಂಬವೊಂದು ವಿಚಿತ್ರ ವರದಕ್ಷಿಣೆ ಕೇಳಿ ಸುದ್ದಿಯಾಗಿದ್ದಾರೆ.
ಔರಂಗಬಾದ್ ಮೂಲದ ಯುವಕನೊಂದಿಗೆ ಯುವತಿಯೊಬ್ಬಳಿಗೆ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಆಗಿತ್ತು. ಈ ಸಮಯದಲ್ಲಿ ವರದಕ್ಷಿಣೆಯಾಗಿ ವಧುವಿನ ಪಾಲಕರು 2 ಲಕ್ಷ ರೂಪಾಯಿ ನಗದು ಮತ್ತು ಚಿನ್ನವನ್ನು ನೀಡಿದ್ದರು. ಇದಾದ ಬಳಿಕ ಮದುವೆ ತಯಾರಿ ನಡೆಯುತ್ತಿತ್ತು. ಎಲ್ಲವು ಸರಿಯಾಗಿ ಸಾಗುತ್ತಿದೆ, ಇನ್ನೇನು ಮದುವೆ ಆಗಬೇಕು ಎನ್ನುವಷ್ಟರಲ್ಲಿ ವರ ತನ್ನ ವಿಚಿತ್ರ ಬೇಡಿಕೆಯನ್ನು ಮುಂದಿಟ್ಟಿದ್ದಾನೆ. ಇದನ್ನು ಕೇಳಿದ ವಧುವಿನ ಮನೆಯವರಿಗೆ ತಲೆ ಸುತ್ತು ಬಂದಿದೆ.
ಹೀಗಿದೆ ನೋಡಿ ಆ ವರ ವಧುವಿನ ಮನೆಯವರ ಮುಂದಿಟ್ಟ ವಿಚಿತ್ರ ಬೇಡಿಕೆ ಏನೆಂದರೆ ಆತ, 10 ಲಕ್ಷ ರೂಪಾಯಿ ನಗದು ಹಣ. ಇಷ್ಟಕ್ಕೆ ಸುಮ್ಮನಾಗಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಹೇಗೋ ಕುಟುಂಬ ದುಡ್ಡು ಹೊಂದಿಸಿ ಕೊಡುತ್ತಿತ್ತೋ ಏನೋ. ಆದರೆ ವರನು, ತನಗೆ 21 ಆಮೆಗಳು, ಒಂದು ಕಪ್ಪು ಬಣ್ಣದ ಲಾಬ್ರಡರ್ ನಾಯಿ, ಒಂದು ಬುದ್ಧನ ಗೊಂಬೆ ಮತ್ತು ರಾಬಿಟ್ ಲ್ಯಾಂಪ್ ಅನ್ನು ಕೇಳಿದ್ದಾನೆ. ಇವಿಷ್ಟನ್ನು ನೀಡಿದರೆ ಮದುವೆ ಬಳಿಕ ನಿಮ್ಮ ಮಗಳಿಗೆ ಒಳ್ಳೆಯ ಕೆಲಸ ಸಿಗುತ್ತದೆ ಎಂದು ನಂಬಿರುವುದಾಗಿ ವರ ಹೇಳಿದ್ದಾರೆ.
ವರನ ವಿಚಿತ್ರ ಬೇಡಿಕೆ ಕೇಳಿದ ವಧು ಮತ್ತು ಪಾಲಕರಿಗೆ ಶಾಕ್ ಆಗುತ್ತದೆ. ವಧುವಿನ ಮನೆಯವರು ಸಹ ಕೇಳಿದ್ದನ್ನೆಲ್ಲ ಕೊಡಲು ಯತ್ನಿಸುತ್ತಾರೆ. ಆದರೆ, ಅದು ಸಾಧ್ಯವಾಗದಿದ್ದಾಗ ವರನಿಗೆ ಮನವರಿಕೆ ಮಾಡಲು ಮುಂದಾಗುತ್ತಾರೆ. ಕೇಳಿದ್ದನ್ನು ಕೊಡದಿದ್ದರೆ ಮದುವೆ ಆಗುವುದಿಲ್ಲ ಎಂದು ವರ ಹೇಳುತ್ತಾನೆ. ಮಾವನ ಮನೆಯವರು ಏನು ಹೇಳಿದರೂ ಕೇಳದ ಸ್ಥಿತಿಯಲ್ಲಿರುವ ವರನಿಗೆ ಕೊನೆಗೆ, ಏನು ಮಾಡಬೇಕೆಂದು ದಿಕ್ಕು ತೋಚದ ವಧುವಿನ ಮನೆಯವರು ಪೋಲಿಸ್ ಬಳಿ ದೂರು ನೀಡುತ್ತಾರೆ. ಈಗ ವಂಚನೆ ಪ್ರಕರಣ ದಾಖಲಿಸುವ ಪೊಲೀಸರು ವರನನ್ನು ಬಂಧಿಸಿದ್ದಾರೆ.