ಚಪ್ಪಲಿ ಹಾಕದವರ ಅಸೋಸಿಯೇಶನ್ ಉಂಟು ; ‘ನಿಧಾನಕ್ಕೆ ಮಾಡು’ ವವರದು ಇನ್ನೊಂದು ಸಂಘ | ಬನ್ನಿ ಒಂದು ಸುತ್ತು ಹಾಕ್ಕೊಂಡು ಬರೋಣ !
? ಸುದರ್ಶನ್ ಬಿ.ಪ್ರವೀಣ್, ಬೆಳಾಲು
ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸವಿರುತ್ತದೆ. ಒಬ್ಬರಿಗೆ ಹಳೆಯ ಕಾಯಿನ್ ಕಲೆಕ್ಷನ್ ಮಾಡುವ ಹವ್ಯಾಸ ಅಥವಾ ಹಳೆಯ ಸ್ಟಾಂಪ್ ಕಲೆಕ್ಷನ್ ಮಾಡುವ ಅಭ್ಯಾಸ ಇರಬಹುದು. ಅಂತವರನ್ನು ಕಂಡಾಗ ನಮಗೆ ಏನನಿಸುತ್ತದೆ. ಇದರಿಂದ ಏನಪ್ಪಾ ಉಪಯೋಗ ಅಂತ ಅನ್ನಿಸುತ್ತಾ? ಅಥವಾ, ಇವೆಲ್ಲ ಬೋರಿಂಗ್ ಹವ್ಯಾಸಗಳು ಅಂತ ಅನ್ನಿಸುತ್ತಿಲ್ಲವ? ಇಂತಹ ಹಲವು ಹವ್ಯಾಸಗಳನ್ನು ಜನ ಇಟ್ಟುಕೊಂಡು, ಅದಕ್ಕೆ ತಮ್ಮದೇ ಕಮ್ಯುನಿಟಿ ಮಾಡಿಕೊಂಡು ತಮ್ಮ ಏಕತಾನತೆಯ ಜೀವನವನ್ನು ಒಂದಷ್ಟು ಎಸ್ಟ್ರೊವರ್ಟ್ ಮಾಡಿಕೊಳ್ಳುತ್ತಾ ಬದುಕುತ್ತಿದ್ದಾರೆ. ಅದರಲ್ಲಿ ಅವರಿಗೆ ಒಂದಷ್ಟು ಕ್ರಿಯೇಟಿವಿಟಿ ಇನ್ನೊಂದಷ್ಟು ಇನ್ವಾಲ್ವ್ ಮೆಂಟ್ ಆಗಿ, ನೇತ್ಯಾತ್ಮಕತೆಗೆ ಮನಸ್ಸು ಹೋಗದಂತೆ ಹಿಡಿದಿಟ್ಟುಕೊಳ್ಳಲೊಂದು ಈ ಹವ್ಯಾಸಗಳು ಮಾರ್ಗವಷ್ಟೇ.
ಸ್ಟ್ಯಾಂಪ್, ನಾಣ್ಯ ಸಂಗ್ರಹದಂತಹ ಬೋರಿಂಗ್ ಹವ್ಯಾಸಕ್ಕಿಂತ ಭಿನ್ನವಾದ, ಆಸಕ್ತಿದಾಯಕ ಹವ್ಯಾಸಗಳೂ ಅವುಗಳನ್ನು ಫಾಲೋ ಮಾಡುವ ಕಮಿನಿಟಿ ಮಂದಿಯೂ ಇದ್ದಾರೆ. ಹೂಗಳ ಸುತ್ತು ಒಂದು ಸಣ್ಣ ರೌಂಡ್.
ಬರಿಗಾಲಿನ ದಾಸರು ( bare footers) :
ನಾವು ಇವರನ್ನು ಬರಿಗಾಲ ದಾಸರೆಂದು ಅಥವಾ ಬರಿಗಾಲ ಫಕೀರರೆಂದೋ ಎಂದು ಕರೆಯೋಣ. ಉಷ್ಣ ವಲಯದ ದೇಶಗಳಲ್ಲಿ ಇವರು ಕಂಡು ಬರುತ್ತಾರೆ. ಬರಿಗಾಲಲ್ಲಿ ನಡೆಯುವುದೇ ಇವರ ಪ್ರತಿಜ್ಞೆ. ಶೂ ಚಪ್ಪಲಿ ಮಾರುವ ಅಂಗಡಿಗಳು ಇವರ ಪಾಲಿನ ವೈರಿಗಳು. ಚಪ್ಪಲಿ ಧರಿಸುವುದರಿಂದ ಕಾಲು ಪಾದಗಳು ತುಂಬಾ ಮೆದುವಾಗುತ್ತದೆ, ದುರ್ಬಲವಾಗುತ್ತವೆ. ಬರಿಗಾಲಿನಿಂದ ನಡೆದರೆ ಕಾಲು, ಪಾದ ಬಲಶಾಲಿಯಾಗುತ್ತದೆ. ಉತ್ತಮ ಆರೋಗ್ಯ ಮತ್ತು ಫ್ಲೆಕ್ಸಿಬಿಲಿಟಿ ಉಂಟಾಗುತ್ತದೆ ಎಂಬುದು ಇವರ ವಾದ. ಪಾದಗಳನ್ನು ಸೂರ್ಯ ರಶ್ಮಿಗೆ ಒಡ್ಡಿಕೊಳ್ಳುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂಬುಡು ಇವರ ನಂಬಿಕೆ.
ಇವರ ಯೋಚನೆಯಲ್ಲಿ ಅಂತಹ ತಪ್ಪು ಏನೂ ಕಾಣಿಸುವುದಿಲ್ಲ. ಆದರೆ ನಮ್ಮ ದೇಶದಲ್ಲಿ ಜನರು ಎಲ್ಲಿ ಬೇಕಾದರಲ್ಲಿ ಬೀರು ಬಾಟಲಿ ಬಿಸಾಕ್ತಾರೆ. ರಾಜ ರಸ್ತೆ, ಮನೆ ಮುಂದೆನೇ ಕ್ಯಾಕರಿಸಿ ಉಗಿದು ಹಾಕುತ್ತಾರೆ. ಕಬ್ಬಿಣ-ಕಸ ಹಾಕಲು ನಮಗೆ ರಸ್ತೆಗಿಂತ ಬೇರೆ ಪ್ರಶಸ್ತ ಜಾಗ ಎಲ್ಲಿದೆ ? ರಸ್ತೆಗಳೇ ತಾನೇ ನಮ್ಮ ಡಿಸ್ಫೋಸಲ್ ಪಾಯಿಂಟ್ಸ್?
ಬರಿಗಾಲ ಬಂಟರು ಇಲ್ಲಿ ಬಂದು ಎರಡು ದಿನ ಇದ್ದು ಹೋದರೆ ಸೀದಾ ರಸ್ತೆಯಿಂದಲೇ ಆಸ್ಪತ್ರೆಗೆ ಪ್ಯಾಕಪ್. ಆಮೇಲೆ ಅವರು ಆಸ್ಪತ್ರೆಯಿಂದಲೇ bare footers ಅಸೋಸಿಯೇಷನ್ನಿಗೆ ಗುಡ್ ಬಾಯ್ ಹೇಳುವುದು ಗ್ಯಾರಂಟಿ.
ಸ್ಲೋ ಮೂವ್ ಮೆಂಟ್ :
ಇವರು ನಿಧಾನಸ್ಥರು. ಈ ನಿಧಾನಸ್ಥರು ಬಿಡಿ, ನಮ್ಮನ್ನು ಹೇರಳವಾಗಿ ಸಿಗುತ್ತಾರೆ. ನಮ್ಮಲ್ಲಿ ಇವರನ್ನು ನೋಡಬೇಕೆಂದರೆ ಸೀದಾ ಗವರ್ನಮೆಂಟ್ ಆಫೀಸುಗಳಿಗೆ ಹೋಗಬೇಕು. ಸಮಯವಿದ್ದರೆ ಅವರ ಮನೆಯಿಂದಲೇ ಅವರನ್ನು ಫಾಲೋ ಮಾಡಿ. ಅವರು ನಿಧಾನವಾಗಿ ಏಳುತ್ತಾರೆ. ಜಾಗಿಂಗು ಮಾಡೋಣ ಅಂತ ಹೊರಡುತ್ತಾರೆ. ಆದರೆ ಅವರ ನಿಧಾನವಾದ ಜಾಗಿಂಗಿಗೆ ನಮ್ಮ ಸುತ್ತಲ ಸಮಾಜ ವಾಕಿಂಗ್ ಅನ್ನುತ್ತದೆ. ಬೆಳಗ್ಗೆ 9 ಕ್ಕೆ ತಿಂಡಿ 10:30 ರ ಮೇಲೆ ಆಫೀಸು. ಆಫೀಸಿನಲ್ಲಿ ಫೈಲುಗಳೋ ಇವರಿಗಿಂತ ನಿಧಾನ. ನಾನಿಲ್ಲಿ ಹೇಳಹೊರಟದ್ದು ಇವರ ದಿನಚರಿಯ ಬಗ್ಗೆಯಲ್ಲ. ಅದು ನಿಧಾನಸ್ಥರ ಬಗ್ಗೆ ಇರುವ ಸ್ಲೋ ಮೂವ್ ಮೆಂಟ್ ನ ಆಂದೋಲನದ ಬಗ್ಗೆ.
ದಿನನಿತ್ಯದ ಸಮಯಬದ್ಧ ಬಿರುಸಿನ ಜೀವನಶೈಲಿಗೆ ವಿರುದ್ಧವಾಗಿ ನಾವು ಮಾಡುವ ಎಲ್ಲಾ ಕೆಲಸಗಳನ್ನೂ ನಿಧಾನವಾಗಿ, ಜಾಸ್ತಿ ಶ್ರಮವಿಲ್ಲದೆ, ಮನಸ್ಸನ್ನು ಉದ್ವೇಗಗೊಳಿಸಿಕೊಳ್ಳದೆ, ಅವರಿವರ ಜೊತೆ ಸ್ಪರ್ಧೆಗೆ ಬೀಳದೆ, ಕಾಲದ ಜೊತೆ ಹೆಜ್ಜೆ ಹಾಕಿ ಕುಣಿಯದೆ ನಡೆಸಿಕೊಂಡು ಹೋಗಬೇಕು. ಇದು ನಿಧಾನಸ್ಥರ ನಿಲುವು. ನಿಧಾನವಾಗಿ ಕೆಲಸ ಮಾಡಬೇಕು, ನಿಧಾನಕ್ಕೆ ವ್ಯಾಯಾಮ, ಸ್ಲೋವಾಗಿ ಸೆಕ್ಸು, ಆರಾಮವಾಗಿ ಪ್ರಯಾಣ, ನಿಧಾನವಾದ ಓದು, ನಿಧಾನಕ್ಕೇ ಬೇಕಾದರೆ ಸೇದು, ಹಾಬಿಗಳೂ ಕೂಡಾ ನಿಧಾನವಾಗಿ.
ಅಷ್ಟಕ್ಕೂ ಸ್ಲೋ ಮೂವ್ ಮೆಂಟ್ ಗಿಂತ ಮುಂಚೆ, ಈಗಿರುವ ಫಾಸ್ಟ್ ಫುಡ್ ಕಲ್ಚರ್ ಗೆ ವಿರುದ್ಧವಾಗಿ ಸ್ಲೋ ಫುಡ್ ಅನ್ನುವ ಆಂದೋಳನವನ್ನು ಪ್ರಾರಂಭಿಸಿದವನು ಇಟಲಿಯ ಕಾರ್ಲೊ ಪೇಟ್ರಿನಿ, 1986 ರಲ್ಲಿ.
ಅದರ ಉದ್ದೇಶ ಸ್ಥಳೀಯವಾಗಿ ದೊರೆಯುವ ಹಣ್ಣು ಹಂಪಲು, ತರಕಾರಿಗಳು ಮತ್ತು ಧಾನ್ಯಗಳನ್ನು ಕುಟುಂಬಸ್ಥರು ಮತ್ತು ಗೆಳೆಯ-ಗೆಳತಿಯರೊಂದಿಗೆ ತಿಂದು ಆರೋಗ್ಯ ವೃದ್ಧಿಸಿಕೊಳ್ಳಬೇಕೆಂದು. ಫಾಸ್ಟ್ ಫುಡ್ ಎಷ್ಟು ಕೆಟ್ಟದ್ದೆಂದು ಮನಗಂಡ ಕಾರ್ಲೊ ಅದರ ವಿರುದ್ಧವಾಗಿ ನೈಸರ್ಗಿಕವಾಗಿ ಆಹಾರ ಬಳಸುವ ಆಂದೋಲನವನ್ನೇ ಶುರುವಿಟ್ಟ.
ಈ ಸ್ಲೋ ಫುಡ್ ಮೂವೆಮೆಂಟ್ ಮುಂದಕ್ಕೆ ಬೆಳೆದು ಸ್ಲೋ ಮೂವ್ ಮೆಂಟ್ ಆಯಿತು. ಆಹಾರವಲ್ಲದೆ, ಅದರ ಜತೆಗೆ ಬದುಕಿನ ಎಲ್ಲ ಕಾರ್ಯಗಳನ್ನೂ ನಿಧಾನವಾಗಿ ಮಾಡುವ ಬಗ್ಗೆ ಅರಿವು ಮೂಡಿಸುವ ಪ್ರಯತ್ನವಾಗಿ ಅದು ಸ್ಲೋ ಮೂವ್ ಮೆಂಟ್ ಆಗಿ ಪ್ರಚಾರಕ್ಕೆ ಬಂತು. ಎರಡರ ಉದ್ದೇಶ ಕೂಡ ಒಳ್ಳೆಯದೇ. ಈವತ್ತಿನ ಸಮಾಜವು ಕ್ವಾ೦ಟಿಟಿಯಾ ಹಿಂದೆ ಬಿದ್ದಿದೆ. ಎಲ್ಲವೂ ಜಾಸ್ತಿ ಬೇಕು. ಜಾಸ್ತಿಯಾಗಿರಬೇಕು ಈ ಸಮಾಜಕ್ಕೆ. ಆದರೆ, ಸ್ಲೋ ಮೂವ್ ಮೆಂಟ್ ವು ಕ್ವಾಲಿಟಿ ಮೂವ್ ಮೆಂಟ್. ಅದರದು ಬದುಕಿನ ಸಮೃದ್ದಿಯ ಕಡೆಗಿನ ನೋಟ. ಶಾರ್ಟ್ ಟರ್ಮ್ ಲಾಭಗಳಲ್ಲಿ ಅದಕ್ಕೆ ನಂಬಿಕೆಯಿಲ್ಲ. ಅದರ ಗುರಿಯೇನಿದ್ದರೂ ದೂರಗಾಮಿ ಮತ್ತು ಮನುಷ್ಯನ ಅರೋಗ್ಯ ಮತ್ತು ಸಂಬಂಧಗಳ ವೃದ್ಧಿಯ ಕುರಿತಾದದ್ದು.
ಎಲ್ಲ ಸರಿ, ಪ್ರೈವೇಟ್ ಕಂಪೆನಿಯಲ್ಲಿದ್ದುಕೊಂಡು ನಾನು ಸ್ಲೋವಾಗಿ ಕೆಲಸ ಮಾಡುತ್ತೇನೆ ಎಂದರೆ ನಿಮ್ಮಬಾಸು ನಿಮ್ಮನ್ನು ಫಾಸ್ಟಾಗಿ ಮನೆಗೆ ಕಳಿಸುವುದು ಗ್ಯಾರಂಟಿ. ಒಂದು ವೇಳೆ ಅಂತಹ ಬಾಸಿನ ಮೇಲೆ ನೀವು ಕೇಸು ಹಾಕಲು ಹೋಗ್ತೀರಾದರೂ ಪರವಾಗಿಲ್ಲ. ನಿಧಾನಕ್ಕೇ ಹಾಕಿ. ಬಾಸ್ ಈ ವಿಷಯದಲ್ಲಿ ಅಂತಹ ಅರ್ಜನ್ಸಿ ಏನೂ ಇರುವುದಿಲ್ಲವಲ್ಲ. ನಮ್ಮಕೋರ್ಟುಗಳಂತೂ ನಮ್ಮ ತಾತನ ಕಾಲದಿಂದಲೂ ಸ್ಲೋ ಮೊವ್ ಮೆಂಟ್ ನ ಸೀನಿಯರ್ ಮೆಂಬರುಗಳು.
ಹೆಲ್ತ್ ಅಟ್ ಎವ್ರಿ ಸೈಜ್ :
ಸೈಜ್ ನಲ್ಲಿಲ್ಲ ಅರೋಗ್ಯ, ಅಥವಾ ಅನಾರೋಗ್ಯ ಎನ್ನುವುದು ಇದರ ಭಾವಾರ್ಥ. ಈ ಲೇಖನ ನಿಜಕ್ಕೂ ದಡೂತಿ ದೇಹದವರಿಗೆ ತುಸು ಖುಷಿ ಕೊಡುವ ಬರಹ. ಸ್ಲೋ ಮೂವ್ ಮೆಂಟು ಗೂ ಇದಕ್ಕೂಒಂದು ಚೂರು ಸಂಬಂಧ ವಿದೆ ಆಂತರ್ಯದಲ್ಲಿ. ಎರಡೂ ಕೂಡಾ, ಸಹಜ ಜೀವನವನ್ನು ಪ್ರೇರೇಪಿಸುವಂತಹುಗಳು.
ವ್ಯಕ್ತಿಯ ಆರೋಗ್ಯಕ್ಕೂ, ಆತನ/ಆಕೆಯ ದೇಹ ತೂಕಕ್ಕೂ, ಶೇಪಿಗೂ-ಗಾತ್ರಕ್ಕೂ, ಆತನ/ಆಕೆಯ ನೆಮ್ಮದಿಗೂ ಯಾಕಪ್ಪಾ ಹೋಲಿಸಬೇಕು? ಅಥ್ಲೆಟಿಕ್ ಆಗಿದ್ದ ಕೂಡಲೇ ಅವರು ಪರಿಪೂರ್ಣರಲ್ಲ. ದಪ್ಪಗಿದ್ದ ಕೂಡಲೆ ಅವರು ಅನಾರೋಗ್ಯವಂತರಲ್ಲ, ಅಸಹ್ಯರಲ್ಲ. ಹೇಗಿರ್ತೀವೋ, ಹಾಗೇನೇ ನಮ್ಮನ್ನು ನಾವು ಒಪ್ಪಿಕೊಂಡು ಇರೋಣ. ಬೇರೆಯವರೂ ಕೂಡಾ ನಮ್ಮನ್ನು ಹಾಗಿನೇ ಒಪ್ಪಿಕೊಳ್ಳಲಿ. ಬೇರೆಯವರನ್ನು ಒಪ್ಪಿಸಿಕೊಳ್ಳಲು ನಮ್ಮತನವನ್ನು ಕಳಕೊಳ್ಳುವುದು ಬೇಡ. ಆದರೆ ಒಳ್ಳೆಯ ಆರೋಗ್ಯಪದ್ಧತಿಯಲ್ಲಿ ತಿಂದು ಬದುಕೋಣ. ಡಯಟಿಂಗ್ ನ ನೆಪದಲ್ಲಿ ನಮ್ಮದಲ್ಲದ ಆಹಾರ ತಿಂದು ಆರೋಗ್ಯ ಯಾಕೆ ಹಾಳು ಮಾಡಿಕೊಳ್ಳಬೇಕು? ಈ ಸಂಘ ನಿಮ್ಮಲ್ಲಿ ಒಂದಷ್ಟು ಆರೋಗ್ಯ, ಮತ್ತೊಂದಷ್ಟು ಕಾಂಫಿಡೆನ್ಸು ಹೆಚ್ಚು ಮಾಡಬಲ್ಲದೆಂಬುದು ನನ್ನ ನಂಬಿಕೆ.
ಆದರೆ, ನಾವು ನಮ್ಮ ತೂಕಕ್ಕೆ ಅಟ್ ಲೀಸ್ಟ್ ಸ್ವಲ್ಪ ಮಟ್ಟಿಗಾದರೂ ಸರಿಯಾಗಿ ದೇಹವನ್ನು ಮಾರ್ಪಡಿಸಿಕೊಳ್ಳುವುದು ಬೇಡವಾ? ಎಂದು ನೀವು ಪ್ರಶ್ನಿಸಬಹುದು. ನವಜಾತ ಶಿಶುವನ್ನು ಈ ಸಂಘಕ್ಕೆ ಸೇರಿಸಿದರೆ,ಇಟ್ಸ್ ಓಕೆ, ಆರೋಗ್ಯವಾದ ತಾಜಾ ಆಹಾರ ತಿಂದು ಬೇಕಾದ ಹಾಗೆ ಬದುಕಲಿ. ಆದರೆ ನೀವು ಈಗಾಗಲೇ ಬೇಡದ್ದನ್ನೆಲ್ಲ ಕಬಳಿಸಿ, ಬೇಕಾದ್ದನ್ನು ಒಂದೂ ಮಾಡದೆ ದೇಹ ತೂಕ ಪಡೆದುಕೊಂಡಿದ್ದೀರೆಂದಾದರೆ….. ಯೋಚಿಸಿ. ಏನು ಮಾಡಬಹುದೆಂದು. ನಿಮಗಿಂತ ದೊಡ್ಡ ಶಿಲ್ಪಿ ಬೇರೆ ಯಾರಿರಲು ಸಾಧ್ಯ? ಮುಂದುವರೆಯುವುದು… ಭಾಗ -2 ನಿರೀಕ್ಷಿಸಿ.