5 ಪೈಸೆಗೆ ಪ್ಲೇಟು ಚಿಕನ್ ಬಿರಿಯಾನಿ ಆಫರ್ ಇಟ್ಟ ಬಿರಿಯಾನಿ ಸ್ಟಾಲ್ ಮಾಲೀಕ | ಮುಗಿಬಿದ್ದ ಜನರ ಸಂಖ್ಯೆ ಕಂಡು ಅಂಗಡಿ ಮುಚ್ಚಿ ಓಡಿ ಹೋದ ಮಾಲೀಕ !
ಮಧುರೈ, ಜು.22 : ತಮಿಳುನಾಡಿನ ಮಧುರೈನ ಸುಕನ್ಯಾ ಬಿರಿಯಾನಿ ಸ್ಟಾಲ್ನ ಮಾಲೀಕರು ಖಾಲಿ ಬಿದ್ದು ಗೋಲಿ ಹೊಡೆಯುತ್ತಿದ್ದ ವ್ಯಾಪಾರವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಘೋಷಿಸಿರುವ ಯೋಜನೆಯೊಂದು ಇದೀಗ ಭಾರೀ ಸಂಚಲನ ಸೃಷ್ಟಿಸಿದೆ.
ಅಂಗಡಿಯ ಮಾಲೀಕರು, 5 ಪೈಸೆ ನಾಣ್ಯವನ್ನು ಯಾರು ತರುತ್ತಾರೋ ಅವರಿಗೆ ಉಚಿತ ಬಿರಿಯಾನಿ ನೀಡುವುದಾಗಿ ಹೊಟೇಲ್ನ ಮಾಲೀಕ ಘೋಷಣೆ ಮಾಡಿದ್ದಾರೆ. ಹಾಗೆ ಅವರು ಘೋಷಿಸಿದ್ದೇ ತಡ, ಅದೆಲ್ಲಿಂದಲೋ 5 ಪೈಸೆ ನಾಣ್ಯವನ್ನು ಎತ್ತಿಕೊಂಡು ನೂರಾರು ಮಂದಿ ಬಿರಿಯಾನಿ ಸ್ಟಾಲ್ ಮುಂದೆ ಓಡೋಡಿ ಜಮಾಯಿಸಿದ್ದಾರೆ. ತಾವು ಬರುವಾಗ * ವಾಂಗ ವಾಂಗ ” ಎಂದು ಸುತ್ತಮುತ್ತಲ ಮನೆಯವರನ್ನು ಎಬ್ಬಿಸಿಕೊಂಡು ಬಂದಿದ್ದಾರೆ. ಉಚಿತ ಬಿರಿಯಾನಿ ಘೋಷಣೆ ಮಾಡಿದ ಕೇವಲ ಗಂಟೆಗಳ ಒಳಗೆ ಅಂಗಡಿಯ ಮುಂದೆ ದೊಡ್ಡ ಕ್ಯೂ ಸೃಷ್ಟಿ ಆಗಿದೆ. ಒಂದು ಹಂತದಲ್ಲಿ 300ಕ್ಕಿಂತ ಹೆಚ್ಚು ಮಂದಿ ಅಲ್ಲಿ ಗುಂಪು ಸೇರಿದ್ದರು ಎನ್ನಲಾಗಿದೆ.
ಇನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಸೇರುವ ನಿರೀಕ್ಷೆ ಇಲ್ಲದೆ ಅಂಗಡಿಯ ಮಾಲೀಕ ಗಾಬರಿಗೊಂಡು, ಕೊರೊನಾ ಮಾರ್ಗಸೂಚಿಯ ಉಲ್ಲಂಘನೆ ಆಗಿ ತಮ್ಮನ್ನೆಲ್ಲ ಪೊಲೀಸರು ಬಂಧಿಸುತ್ತಾರೋ ಎಂದು ಭಯಗೊಂಡು ಮಾಲೀಕ ಬಿರಿಯಾನಿ ನೀಡುವುದನ್ನು ನಿಲ್ಲಿಸಿ ಸ್ಟಾಲ್ಗೆ ಬೀಗ ಜಡಿದು ಎಸ್ಕೇಪ್ ಆಗಿದ್ದಾನೆ.
ಕೇವಲ ಕೊತ್ತಂಬರಿ ಸೊಪ್ಪಿನ ಹತ್ತು ರೂಪಾಯಿಯ ಕಟ್ಟಿಗೆ ಮುಗಿಬಿದ್ದ ಜನ ಚಿಕನ್ ಬಿರಿಯಾನಿ ಸಿಕ್ರೆ ಬಿಡ್ತಾರಾ ? ಹೀಗೆ ಕೊರೊನಾ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಜನರ ನಡೆಯ ಬಗ್ಗೆ ಪೊಲೀಸರು ಕೂಡ ಅಚ್ಚರಿಗೊಂಡಿದ್ದು, ಜನರ ಗುಂಪನ್ನು ಚದುರಿಸಿದ್ದಾರೆ.