ಮುಖ್ಯಮಂತ್ರಿ ಯಡಿಯೂರಪ್ಪನವರ ನಿರ್ಗಮನಕ್ಕೆ ಕ್ಷಣಗಣನೆ | ಸದಾನಂದ ಗೌಡ ಔಟ್, ಮುಂದಿನ ಮುಖ್ಯಮಂತ್ರಿ ಆಗ್ತಾರಾ ಡಾ. ಅಶ್ವಥ್ ನಾರಾಯಣ್ ?!!
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಗಮನಕ್ಕೆ ದಿನಗಣನೆ ಶುರುವಾದದಂತಿದೆ. ಜುಲೈ ಅಂತ್ಯದ ವೇಳೆಗೆ ಸಿಎಂ ಯಡಿಯೂರಪ್ಪ ಸರ್ಕಾರಕ್ಕೆ 2 ವರ್ಷ ತುಂಬಿದ ಹೊತ್ತಲ್ಲಿ ಪದತ್ಯಾಗ ಮಾಡಲಿದ್ದಾರೆಂದು ಬಲವಾದ ಗುಮಾನಿಗಳು ಮತ್ತು ಮಾತುಕತೆಗಳು ಆಗುತ್ತಿವೆ.
ನಿನ್ನೆ ಪುತ್ರ ವಿಜಯೇಂದ್ರ ಜೊತೆ ದೆಹಲಿಗೆ ತೆರಳಿದ್ದ ಯಡಿಯೂರಪ್ಪ ಅವರು, ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಉಲ್ಲಸಿತರಾಗಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಯಡಿಯೂರಪ್ಪ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಸ್ತುತ ಮುಂದುವರೆಯುವಂತೆ ಹೈಕಮಾಂಡ್ ಸೂಚನೆ ನೀಡಿದೆ ಹೇಳಿದ್ದರು. ಈಗ ಮಾಧ್ಯಮಗಳು ಈ ‘ಪ್ರಸ್ತುತ ಎಂಬ ಪದದ ಹಿಂದೆ ಮುಂದೆ ಬಿದ್ದಿವೆ. ಯಡಿಯೂರಪ್ಪನವರ ನಿಷ್ಠ ಬಳಗ ನಾಯಕತ್ವ ಬದಲಾವಣೆ ಅಪ್ರಸ್ತುತ ವಿಚಾರ ಎನ್ನುತ್ತಿರುವಾಗಲೇ ಯಡಿಯೂರಪ್ಪ ಪ್ರಸ್ತುತ ಶಬ್ದ ಪ್ರಯೋಗ ಕುತೂಹಲ ಕೆರಳಿಸಿದೆ.
ಇದೇ ಜುಲೈ 26ಕ್ಕೆ ಬಿ.ಎಸ್. ಯಡಿಯೂರಪ್ಪ ಅವರು, ಕರ್ನಾಟಕದ ಮುಖ್ಯಮಂತ್ರಿಯಾಗಿ ಎರಡು ವರ್ಷಗಳ ಅವಧಿ ಪೂರೈಸಲಿದ್ದು, ಆ ಬಳಿಕ ವಯೋ ಕಾರಣ ನೀಡಿ ರಾಜೀನಾಮೆ ನೀಡುವಂತೆ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಪರ್ಯಾಯ ನಾಯಕತ್ವ ಅವಶ್ಯಕತೆಯಿದ್ದು, ಅದರ ಪ್ರಕ್ರಿಯೆ ಆರಂಭಿಸಿದ್ದೇವೆ. ನೀವು ಮಾಸ್ ಲೀಡರ್, ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ. 2 ವರ್ಷದ ಸಂಭ್ರಮ ಪೂರೈಸಿ ಆಗಸ್ಟ್ ಮೊದಲ ವಾರದಲ್ಲಿ ದೆಹಲಿಗೆ ಬನ್ನಿ. ಆಗಸ್ಟ್ ಮೊದಲ ವಾರದಲ್ಲಿ ನಾಯಕತ್ವ ಬದಲಾವಣೆ ಗೊಂದಲದ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಹೈಕಮಾಂಡ್ ಹೇಳಿದೆ ಎನ್ನಲಾಗಿದೆ.
ಪದತ್ಯಾಗ ಮಾಡಿದ ಯಡಿಯೂರಪ್ಪ ಅವರನ್ನು ಆಂಧ್ರಪ್ರದೇಶ ರಾಜ್ಯದ ರಾಜ್ಯಪಾಲರಾಗಿ ನೇಮಕ ಮಾಡುತ್ತಾರೆ ಎಂಬ ಮಾತು ಎದ್ದಿದೆ. ಆದ್ರೆ ರಾಜಕೀಯವನ್ನೇ ಉಂಡುಟ್ಟು ಬದುಕಿರುವ ಯಡಿಯೂರಪ್ಪನವರು ರಾಜ್ಯಪಾಲ ಹುದ್ದೆಯಂತಹ ಆಡಳಿತಾತ್ಮಕವಾಗಿ ಪವರ್ ಇಲ್ಲದ ಸ್ಥಾನಗಳನ್ನು ಬಯಸುವುದು ಕಷ್ಟಸಾಧ್ಯ.
ಅವರ ಕಾರ್ಯಕ್ಷೇತ್ರ ಏನಿದ್ದರೂ ಫುಲ್ ಟೈಮ್ ಆಕ್ಟಿವ್ ರಾಜಕಾರಣ. ಅವರು ಮುಂದಿನ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನಗಳೊಂದಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವಂತೆ ಸಹಾಯ ಮಾಡಿ ಆ ಮೂಲಕ ಪಕ್ಷಗಳನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದು ತಮ್ಮ ಮಕ್ಕಳನ್ನು ಮತ್ತು ಆಪ್ತೇಷ್ಟರನ್ನು ಆಯಕಟ್ಟಿನ ಸ್ಥಾನದಲ್ಲಿ ಕೂರಿಸಿ ಶಕ್ತಿ ಇರುವವರಿಗೆ ಪರೋಕ್ಷವಾಗಿ ಅಧಿಕಾರ ನಡೆಸುವ ಇರಾದೆ ಯಡಿಯೂರಪ್ಪನವರದು ಎನ್ನಲಾಗಿದೆ. ಇದು ಅವರನ್ನು ಸರಿಯಾಗಿ ಬಲ್ಲ ಎಲ್ಲ ರಾಜಕೀಯ ಮುಖಂಡರ ಅಭಿಪ್ರಾಯ ಕೂಡ.
ಆದರೆ ಯಡಿಯೂರಪ್ಪನವರನ್ನು ಅಧಿಕಾರದಿಂದ ಇಳಿಸಿ ಬೇರೊಬ್ಬರನ್ನು ಕೂರಿಸುವ ಮುನ್ನ ಬಹುದೊಡ್ಡ ನಿರ್ವಾತ ಇದೀಗ ಕಂಡುಬರುತ್ತಿದ್ದು, ಆ ನಿರ್ವಾತದೊಳಗೆ ಒಬ್ಬ ಸಮರ್ಥ ನಾಯಕನನ್ನು ತಂದು ಪಟ್ಟದಲ್ಲಿ ಕೂರಿಸುವುದು ಇದೀಗ ಹೈಕಮಾಂಡಿನ ಮುಂದಿರುವ ದೊಡ್ಡ ಚಾಲೆಂಜ್. ನಿಜಕ್ಕೂ ಹೈಕಮಾಂಡ್ ಅಂಥದೊಂದು ಚರಿಸ್ಮಾ ಇರುವ, ಸಾಮೂಹಿಕವಾಗಿ ನಾಯಕನೆಂದು ಒಪ್ಪಿಕೊಳ್ಳಬಲ್ಲ ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ಕೂಡ ಪಳಗಿರುವ ನಾಯಕನನ್ನು ಇಲ್ಲಿಯತನಕ ಗುರುತಿಸುವಲ್ಲಿ ಗೆಲುವು ಕಂಡಿಲ್ಲ.
ತಮ್ಮ ಬಳಿಕ ಪುತ್ರ ವಿಜಯೇಂದ್ರ ಅವರಿಗೆ ಸಿಎಂ ಸ್ಥಾನ ದೊರಕುವಂತೆ ಮಾಡಲು ಯಡಿಯೂರಪ್ಪ ಅವರು ಲಾಬಿ ನಡೆಸುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿದೆ. ತಮ್ಮ ಪುತ್ರನಿಗೆ ಸಿಎಂ ಸ್ಥಾನ ಕೊಡುತ್ತಾರೆ ಎಂದಾದರೆ, ಈ ಕ್ಷಣದಲ್ಲಿ ಯಡಿಯೂರಪ್ಪನವರು ಕುರ್ಚಿ ಖಾಲಿ ಮಾಡಿ ಎದ್ದು ಬರುತ್ತಾರೆ. ಆದರೆ ಹೈಕಮಾಂಡಿಗೆ ಅದು ಅಷ್ಟು ಸುಲಭದ ಕೆಲಸವಲ್ಲ. ಈಗಾಗಲೇ ಕರ್ನಾಟಕದಲ್ಲಿ ವಯಸ್ಸಿನಿಂದ ಮತ್ತು ಅನುಭವದಿಂದ ತುಂಬಾ ಹಿರಿಯ ನಾಯಕರುಗಳಿದ್ದಾರೆ. ಅವರೆಲ್ಲರ ನೋಯಿಸಿ ವಿಜಯೆಂದ್ರನನ್ನು ವಿಜಯಿ ಎಂದು ಡಿಕ್ಲೇರ್ ಮಾಡುವುದು ಅಷ್ಟು ಸುಲಭವಲ್ಲ, ಒಳ್ಳೆಯ ನಡೆಯೂ ಆಗಲಾರದು.
ಇವತ್ತು ಬೇರೆ ಜಾತಿಗಳಿಗೆ ಹೋಲಿಸಿದರೆ ಲಿಂಗಾಯತರುಗಳ ಒಂದೇ ಒಂದು ಪಂಗಡ, ಬಹುದೊಡ್ಡ ಸಂಖ್ಯೆಯಲ್ಲಿ ಬಿಜೆಪಿಯನ್ನು ಪ್ರತಿಸಲವೂ ಕೈಹಿಡಿದುಕೊಂಡು ಬರುತ್ತಿರುವುದು. ಯಡಿಯೂರಪ್ಪ ಅವರಿಗೆ ಹೋಲಿಕೆಯಾಗುವಂತಹ ಮತ್ತೊಬ್ಬ ಲಿಂಗಾಯತ ನಾಯಕರಾರೂ ರಾಜ್ಯದಲ್ಲಿ ಇಲ್ಲ ಎನ್ನುವುದು ಸಾಮಾನ್ಯನಿಗೂ ತಿಳಿದಿರುವ ಸಂಗತಿ.
ಈ ನಡುವೆ ಒಕ್ಕಲಿಗರ ನಾಯಕ ಸದಾನಂದ ಗೌಡ ಅವರನ್ನು ಮುಂದಿನ ಸಿಎಂ ಮಾಡಲು ಯತ್ನಗಳು ನಡೆದಿತ್ತು. ಆದರೆ, ಸದಾನಂದ ಗೌಡರು ಸ್ಯಾಚುರೇಟ್ ಆಗಿದ್ದಾರೆ. ದುಡ್ಡು ಕೀರ್ತಿ ಅಧಿಕಾರ – ಈ ಮೂರೂ ಬೇಕಾದಕ್ಕಿಂತ ಮತ್ತು ಅರ್ಹತೆಗಿಂತ ಜಾಸ್ತಿ ಅವರಿಗೆ ಸಿಕ್ಕಿದೆ. ಅವರ ಆಯ್ಕೆಗೆ ಸ್ವತಃ ನರೇಂದ್ರ ಮೋದಿಯವರೇ ಅಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಹಿಂದೊಮ್ಮೆ ಮೋದಿಯವರು ಸದಾನಂದಗೌಡರಿಗೆ, ” ಗೋಡಾಜಿ, ಆಪ್ಕೋ ಏಕೀ ಬೇಟಾ ಹೈ, ಕ್ಯೂ ಇತ್ನ ಪೈಸಾ ಕೆಲಿಯೆ ಲಾಲಜ್ ಕರ್ತೆ ಹೈ ?” ಎಂದು ಸದಾನಂದಗೌಡರ ಮುಖಕ್ಕೆ ಹೊಡೆದ ಹಾಗೆ ಹೇಳಿದ್ದರು. ಗೌಡರು ಎಂದಿನಂತೆ ಹಲ್ಲು ಬಿಟ್ಟು ಬೇಸರದಿಂದ ನಕ್ಕಿದ್ದರು. ಹಾಗಾಗಿ ಸದಾನಂದಗೌಡರು ಮತ್ತೆ ಕರ್ನಾಟಕದ ಮುಖ್ಯಮಂತ್ರಿ ಪಟ್ಟದಲ್ಲಿ ಬಂದು ಕೂರುವ ಸಂಭವ ಬಹುತೇಕ ಅಸಂಭವ.
ಇದು ಬಿಟ್ಟರೆ, ಸಹಜವಾಗಿ ಬಿ. ಎಲ್ ಶಂಕರ್ ಅವರದು ಒಂದು ಆಯ್ಕೆ ಕಣ್ಣ ಮುಂದಿದೆ. ಸಂಘಟನೆಯ ವಿಷಯದಲ್ಲಿ ಅವರದು ಒಳ್ಳೆಯ ಆಯ್ಕೆಯಾದರೂ, ಉಳಿದ ಆಡಳಿತಾತ್ಮಕ ಅನುಭವ ಅವರಿಗೆ ತೀರಾಕಮ್ಮಿ. ಅದೇ ದೊಡ್ಡ ತೊಡಕಾದರೂ ಆದೀತು. ಅಲ್ಲದೆ, ಹಲವು ಮನಸ್ತಿತಿಗಳನ್ನ ಹೊಂದಿರುವ ಹಲವು ಪ್ರಾಂತ್ಯವಾರು ಶಾಸಕರು ಗಳನ್ನು ಎಲ್ಲರನ್ನು ಒಟ್ಟಿಗೆ ಹಿಡಿದಿಡುವುದು ಅವರಿಗೆ ದೊಡ್ಡ ಸವಾಲಿನ ಕೆಲಸವೇ ಸರಿ.
ಇವಲ್ಲದೆ, ಇತ್ತೀಚೆಗೆ ಕರ್ನಾಟಕದ ಬಿಜೆಪಿ ಯಲ್ಲಿ ಮಾಡಲಾಗಿದ್ದ ಕೆಲವು ಪ್ರಯೋಗಗಳ ಫಲಿತಾಂಶಗಳು ಒಳ್ಳೆಯ ರೀತಿಯಲ್ಲಿ ಫಲ ನೀಡುತ್ತಿವೆ. ಅವುಗಳಲ್ಲಿ ಯುವ ಮತ್ತು ಸಮರ್ಥವಾಗಿ ಎಲ್ಲವನ್ನೂ ನಿಭಾಯಿಸಬಲ್ಲ ಡಾ. ಅಶ್ವತ್ಥ ನಾರಾಯಣ್ ಅವರು ಹೈಕಮಾಂಡ್ ನ ರಾಡಾರ್ ನಲ್ಲಿ ಇದ್ದಾರೆ. ತಮಗೆ ಕೊಟ್ಟ ಪ್ರತಿ ಟಾಸ್ಕ್ ಅನ್ನೂ ಸಮರ್ಥವಾಗಿ ನಿಭಾಯಿಸಬಲ್ಲ ತಾಖತ್ತಿರುವ, ವೃತ್ತಿಯಲ್ಲಿ ವೈದ್ಯರಾಗಿದ್ದ ಅವರ ಹೆಸರು ಹೈಕಮಾಂಡ್ ನ ಸಂಭವನೀಯ ಪಟ್ಟಿಯಲ್ಲಿದೆ. ಅಲ್ಲದೆ ಅವರು ಒಕ್ಕಲಿಗರು. ಆ ಮೂಲಕ ಒಕ್ಕಲಿಗ ನಾಯಕರುಗಳಾದ ಡಿಕೆ ಶಿವಕುಮಾರ್ ನನ್ನು ಮತ್ತು ಜೆಡಿಎಸ್ ಪ್ರಾಬಲ್ಯವನ್ನು ಹತ್ತಿಕ್ಕಬಲ್ಲ ಒಕ್ಕಲಿಗ ಸಿಕ್ಕಂತೆ ಕೂಡಾ ಆಗುತ್ತದೆ. ಆಲ್ಲದೆ ವಿಜಯೇಂದ್ರರ ಆಯ್ಕೆಗೆ ಹಲವು ಅಡ್ಡಿಯನ್ನು ಲೋಕಲ್ ಲೀಡರ್ಸ್ ಒಡ್ಡಬಹುದು. ಹೈಕಮಾಂಡ್ ಒಂದುವೇಳೆ ಡಾಕ್ಟರ್ ಅಶ್ವತ್ಥನಾರಾಯಣ್ ಅವರನ್ನು ಮುನ್ನಲೆಗೆ ತಂದರೆ ಆ ಮಟ್ಟದಲ್ಲಿ ಪ್ರತಿರೋಧ ಬಾರದು. ಅದು ಖಚಿತ. ಆದುದರಿಂದ ಡಾ. ಅಶ್ವಥ್ ನಾರಾಯಣ ಅವರೇ ಆಯ್ಕೆಯಾದರೂ ಅಚ್ಚರಿ ಇಲ್ಲ.
ಇದರಂತೆ ಜುಲೈ ಅಂತ್ಯದೊಳಗೆ ನಾಯಕತ್ವದ ಬದಲಾವಣೆ ಮಾಡಲು ಮುಂದಾಗಿರುವ ಹೈಕಮಾಂಡ್ ಗೆ ಈ ವೇಳೆಗಾಗಲೇ ಮತ್ತೊಬ್ಬ ಸಮರ್ಥ ವ್ಯಕ್ತಿಯನ್ನು ಹುಡುಕುವುದು ಸವಾಲಾಗಿ ಪರಿಣಮಿಸಿದೆ.