‘ ಮಂಡ್ಯದ ಮಾದೇಗೌಡ’ ಎಂದೇ ಕರೆಸಿಕೊಳ್ಳುತ್ತಿದ್ದ ಮಾಜಿ ಕಾಂಗ್ರೆಸ್ ಸಂಸದ, ನೇರನುಡಿಯ ಹಿರಿಯಜ್ಜ ಇನ್ನಿಲ್ಲ !
ಮಂಡ್ಯ: ಮಾಜಿ ಸಂಸದ, ಕಾವೇರಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹೋರಾಟಗಾರ ಜಿ.ಮಾದೇಗೌಡ (92) ವಿಧಿವಶರಾಗಿದ್ದಾರೆ. ಕಳೆದ ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ನೇರನುಡಿಯ, ಗಾಂಧಿ ತತ್ವದಲ್ಲಿ ನಂಬಿಕೆ ಇಟ್ಟಿದ್ದ, ಯಾವುದೇ ಕಾರಣಕ್ಕೂ ಭ್ರಷ್ಟರಾಗದೆ ಉಳಿದ ಹಳೆಯ ಕೊಂಡಿಯೊಂದು ಕಳಚಿ ಬಿದ್ದಿದೆ. ಒಂದು ಕಾಲದಲ್ಲಿ ಮಂಡ್ಯ ಅಂದರೆ ಅದು ಮಾದೇಗೌಡ ಅನ್ನುವಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಮತ್ತು ಪ್ರಭಾವವನ್ನು ಅವರು ಗಳಿಸಿದ್ದರು.
1980ರ ದಶಕದಲ್ಲಿ ಆರ್ ಗುಂಡೂರಾವ್ ಅವರ ಮಂತ್ರಿ ಮಂಡಲದಲ್ಲಿ ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದ ಮಾದೇಗೌಡರು ಮಂಡ್ಯದ ಅಂದಿನ ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ 1989 ಮತ್ತು 1991ರಲ್ಲಿ ಆಯ್ಕೆಗೊಂಡಿದ್ದರು. ಹಿರಿಯ ರಾಜಕಾರಣಿ ಮಾದೇಗೌಡರು ಕಾವೇರಿ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದರು. ಇತರೆ ಅನೇಕ ರೈತ ಹೋರಾಟಗಳಲ್ಲಿ ಅವರು ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದರು.
ಸುಮಾರು ಮೂರು ವರ್ಷಗಳಿಂದ ಸ್ವತಃ ಅವರೇ ಮುಂದೆ ನಿಂತು ಪ್ರಾರಂಭಿಸಿದ್ದ ಜಿ ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅವರಿಗೆ ಈಗ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ವಯೋಸಹಜ ಕಾಯಿಲೆಗಳಿಂದ ಅವರು ತೀರಿಕೊಂಡಿದ್ದಾರೆ.