ಇಂಡಿಯನ್ ಆಯಿಲ್ ಕಾರ್ಪೋರೇಶನ್ ನಿಂದ ಸ್ಮಾರ್ಟ್ ಅಡುಗೆ ಸಿಲಿಂಡರ್ ಬಿಡುಗಡೆ | ಇದರಲ್ಲಿದೆ ಹತ್ತು ಹಲವು ವಿಶೇಷತೆಗಳು
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಗ್ರಾಹಕರ ಅನುಕೂಲಕ್ಕಾಗಿ ಹೊಸ ಬಗೆಯ ಸ್ಮಾರ್ಟ್ ಅಡುಗೆ ಅನಿಲ ಸಿಲಿಂಡರ್ ಒಂದನ್ನು ಪರಿಚಯಿಸಿದೆ.
ಇದಕ್ಕೆ “ಕಾಂಪೊಸಿಟ್ ಸಿಲಿಂಡರ್” ಎಂದು ಹೆಸರಿಡಲಾಗಿದೆ. ಸ್ಮಾರ್ಟ್ ಕಿಚನ್ ಪರಿಕಲ್ಪನೆಗೆ ತಕ್ಕಂತೆ ಈ ಸಿಲಿಂಡರ್ ರೂಪಿಸಿರುವುದಾಗಿ ಹೇಳಿಕೊಂಡಿದೆ. ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಬಳಕೆಯಾಗಿದೆ, ಎಷ್ಟು ಉಳಿದುಕೊಂಡಿದೆ ಎಂಬುದನ್ನು ನೋಡಬಹುದಾಗಿರುವುದು ಇದರ ವಿಶೇಷಗಳಲ್ಲಿ ಪ್ರಮುಖವಾಗಿದೆ.
ಸಾಮಾನ್ಯ ಸಿಲಿಂಡರ್‌ಗಿಂತ ಈ ಇಂಡೇನ್ ಕಾಂಪೊಸಿಟ್ ಸಿಲಿಂಡರ್ ಬಲಿಷ್ಠವಾಗಿದ್ದು, ಹೆಚ್ಚು ಸುರಕ್ಷಿತ ಎನ್ನಲಾಗಿದೆ. ಈ ಸಿಲಿಂಡರ್ ಅನ್ನು ಮೂರು ಪದರಗಳಿಂದ ರೂಪಿಸಲಾಗಿದೆ. ಒಳಗಿನ ಪದರವನ್ನು ಬ್ಲೋ ಮೋಲ್ಡ್ ಹೈ ಡೆನ್ಸಿಟಿ ಪಾಲಿಥಿಲೀನ್‌ನಿಂದ, ಎರಡನೇ ಪದರವನ್ನು ಪಾಲಿಮರ್ ಆವರಿಸಿದ ಫೈಬರ್ ಗ್ಲಾಸ್‌ನಿಂದ ಹಾಗೂ ಹೊರಗಿನ ಕವಚಕ್ಕೆ ಹೈ ಡೆನ್ಸಿಟಿ ಪಾಲಿಥಿಲೀನ್ ಜಾಕೆಟ್ ಅಳವಡಿಸಲಾಗಿದೆ.
ಸಾಮಾನ್ಯ ಸಿಲಿಂಡರ್‌ಗೆ ಹೋಲಿಸಿದರೆ ಈ ಹೊಸ ನಮೂನೆಯ ಅಡುಗೆ ಸಿಲಿಂಡರ್ ಹಲವು ಉಪಯೋಗಗಳನ್ನು ಹೊಂದಿರುವುದಾಗಿ ಕಂಪನಿಯ ವೆಬ್‌ಸೈಟ್ ತಿಳಿಸಿದೆ.
ಈ ಸಿಲಿಂಡರ್‌ನ ವಿಶೇಷತೆಗಳು :
- ಹಗುರ ತೂಕ; ಸ್ಟೀಲ್ ಸಿಲಿಂಡರ್‌ನ ಅರ್ಧದಷ್ಟು ತೂಕ ಈ ನೂತನ ಸಿಲಿಂಡರ್‌ನದ್ದಾಗಿದೆ.
- ಸಿಲಿಂಡರ್ ಅರೆಪಾರದರ್ಶಕವಾಗಿದ್ದು, ಬೆಳಕಿನಲ್ಲಿ ಗ್ರಾಹಕರು ಅನಿಲದ ಮಟ್ಟವನ್ನು ನಿಖರವಾಗಿ ಪರೀಕ್ಷಿಸಬಹುದಾಗಿದೆ. ಹಾಗಾಗಿ ಮುಂಚಿತವಾಗಿ ಗ್ಯಾಸ್ ಬುಕ್ ಮಾಡಲು ಸಹಕಾರಿಯಾಗಲಿದೆ.
- ಈ ಸಿಲಿಂಡರ್ ತುಕ್ಕುರಹಿತವಾಗಿದ್ದು, ಬೇಗ ಹಾಳಾಗುವುದಿಲ್ಲ. ಸಿಲಿಂಡರ್ ಮೇಲೆ ಕಲೆ ಹಾಗೂ ಇನ್ನಿತರ ಗುರುತುಗಳು ಉಳಿಯವುದಿಲ್ಲ. ಜೊತೆಗೆ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದ್ದು, ಆಧುನಿಕ ಅಡುಗೆ ಮನೆ ಪರಿಕಲ್ಪನೆಗೆ ತಕ್ಕಂತೆ ರೂಪಿಸಲಾಗಿದೆ.
ಈ ಸಿಲಿಂಡರ್‌ಗಾಗಿ ಗ್ರಾಹಕರು ಭದ್ರತಾ ಠೇವಣಿ ನೀಡಬೇಕಾಗುತ್ತದೆ. 10 ಕೆ.ಜಿ. ಸಿಲಿಂಡರ್‌ಗೆ ಭದ್ರತಾ ಠೇವಣಿಯಾಗಿ 3350 ರೂ ಹಾಗೂ 5 ಕೆ.ಜಿಗೆ 2150 ರೂ ನಿಗದಿಪಡಿಸಲಾಗಿದೆ.
ಸಂಸ್ಥೆಯ ವೆಬ್‌ಸೈಟ್ ಮಾಹಿತಿಯಂತೆ, ಭದ್ರತಾ ಠೇವಣಿಯ ಹಣ ಪಾವತಿಸುವ ಮೂಲಕ ಇಂಡೇನ್ ಗ್ರಾಹಕರು ತಮ್ಮಲ್ಲಿರುವ ಸಾಮಾನ್ಯ ಸಿಲಿಂಡರ್ ಅನ್ನು ಈ ನೂತನ ಸಿಲಿಂಡರ್‌ನೊಂದಿಗೆ ವಿನಿಮಯ ಮಾಡಿಕೊಳ್ಳಬಹುದು. ಸಾಮಾನ್ಯ ಸಿಲಿಂಡರ್‌ಗಳಂತೆ ಈ ಸಿಲಿಂಡರ್ ಅನ್ನು ಮನೆ ಮನೆಗೆ ವಿತರಿಸಲಾಗುತ್ತದೆ.
ಸದ್ಯಕ್ಕೆ ದೆಹಲಿ, ಗುರುಗ್ರಾಮ, ಹೈದರಾಬಾದ್, ಫರಿದಾಬಾದ್ ಮತ್ತು ಲೂಧಿಯಾನಾದ ಆಯ್ದ ವಿತರಕರಿಂದ 5 ಕೆ.ಜಿ ಹಾಗೂ 10 ಕೆ.ಜಿ ಗಾತ್ರದಲ್ಲಿ ಸಿಲಿಂಡರ್ ಲಭ್ಯವಿವೆ. ಮುಂದಿನ ದಿನಗಳಲ್ಲಿ ಬೆಂಗಳೂರು ನಗರಕ್ಕೂ ಪರಿಚಿತಗೊಳ್ಳಲಿದೆ.
ಅಡುಗೆ ಹಾಗೂ ಸಬ್ಸಿಡಿಯಿರುವ ವರ್ಗಕ್ಕೆ ಮಾತ್ರ 10 ಕೆ.ಜಿ ಅನಿಲ ಸಿಲಿಂಡರ್ ಮಾರಾಟ ಮಾಡಲಾಗುತ್ತಿದೆ. ದೇಶೀಯ ಸಬ್ಸಿಡಿ ರಹಿತ ವರ್ಗದ ಅಡಿಯಲ್ಲಿ ಹಾಗೂ ಎಲ್‌ಪಿಜಿ ಮುಕ್ತ ವ್ಯಾಪಾರ ಆಯ್ಕೆಯಲ್ಲಿ 5 ಕೆ.ಜಿ ಸಿಲಿಂಡರ್ ಲಭ್ಯವಿದೆ.