ಈ ಹಳ್ಳಿ ಹೈದರ ವಿಲೇಜ್ ಕುಕಿಂಗ್ ಚಾನಲ್ ಗೆ ಯೂಟ್ಯೂಬ್‌ನಿಂದ ಡೈಮಂಡ್ ಪ್ಲೇ ಬಟನ್ ಪುರಸ್ಕಾರ | ಟ್ಯೂಬ್ ಚಾನಲ್ ಗೆ ಇದೆ 1 ಕೋಟಿಗೂ ಅಧಿಕ ಚಂದಾದಾರರು !

Share the Article

“ಶಮ್ಮಯ ಶಮಿಕಿರೋ, ಭಯಂಕರಮಾ ರುಚಿಕಿರೋ” ( ಚೆನ್ನಾಗಿ ಅಡುಗೆ ಮಾಡುತ್ತೇವೆ, ಭರ್ಜರಿಯಾಗಿ ತಿನ್ನುತ್ತೇವೆ) ಎಂದು ದೊಡ್ಡದನಿಯಲ್ಲಿ ಬೊಬ್ಬೆ ಹಾಕುವಂತೆ ಕೂಗುತ್ತಾ, ಐದಾರು ಜನ ಹಳ್ಳಿಯ ಹುಡುಗರು ತಮ್ಮ ತಾತನೊಂದಿಗೆ ತಮ್ಮ ಭತ್ತದ ಗದ್ದೆಯ ಬದುವಿನಲ್ಲಿ, ಗುಡ್ಡದ ಮರದ ಕೆಳಗೆ ಫಟಾಫಟ್ ಒಲೆ ನಿರ್ಮಿಸಿ ಸೌದೆಯಲ್ಲಿ ಅಡುಗೆ ಮಾಡುತ್ತಾ ಯೂ ಟ್ಯೂಬ್ ಚಾನಲ್ ನಿರ್ಮಿಸಿದ್ದಾರೆ.
ಹೆಚ್ಚೇನು ವಿದ್ಯಾಭ್ಯಾಸ ಇಲ್ಲದ, ಮಾತಿನಲ್ಲಿ ನಯ ನಾಜೂಕು ತಿಳಿದಿಲ್ಲದ ಈ ಹುಡುಗರು ಇವತ್ತು ಇತಿಹಾಸ ನಿರ್ಮಿಸಿದ್ದಾರೆ. ಒಟ್ಟಾರೆ ತಮಿಳುನಾಡಿನಲ್ಲಿ, ಮೊದಲಬಾರಿಗೆ ಅವರ ಯುಟ್ಯೂಬ್ ಚಾನೆಲ್ ಗೆ ಒಂದು ಕೋಟಿಗಿಂತಲೂ ಅಧಿಕ ಸಬ್ಸ್ಕ್ರಿಬರ್ ಸಿಕ್ಕಿದ್ದಾರೆ. ಆ ಚಾನೆಲಿನಲ್ಲಿ ಒಟ್ಟು 175ಕ್ಕೂ ಹೆಚ್ಚು ವಿಡಿಯೋಗಳು ಇದ್ದು ಇದೀಗ ಅವರ ಪ್ರತಿ ವಿಡಿಯೋ ಕೂಡ ಹಲವು ಲಕ್ಷಗಳಷ್ಟು ವ್ಯೂ ಸ್ ಪಡೆದುಕೊಳ್ಳುತ್ತಿವೆ. ಹೆಚ್ಚಿನ ವಿಡಿಯೋಗಳು ಒಂದು ಮಿಲಿಯನ್ ಅಂದರೆ ಹತ್ತು ಲಕ್ಷಕ್ಕಿಂತಲೂ ಅಧಿಕ ಜನರನ್ನು ಆಕರ್ಷಿಸುತ್ತಿವೆ.

ಅದುವೇ, ವಿಲೇಜ್ ಕುಕಿಂಗ್ ಚಾನಲ್ ಎಂಬ ಯೂಟ್ಯೂಬ್ ಚಾನೆಲ್. ದ್ರಾಕ್ಷಾರಸ ದಿಂದ ಹಿಡಿದು, ಇಡೀ (ಫುಲ್) ಮಟನ್ ಬಿರಿಯಾನಿಯವರಿಗೆ ಎಲ್ಲಾತರದ ಖಾದ್ಯಗಳನ್ನು ತಯಾರಿಸಿ, ಮೊದಲು ತಾವು ಬಡಿಸಿಕೊಂಡು ಭರ್ಜರಿಯಾಗಿ ರುಚಿನೋಡಿ ಆನಂತರ ತಮ್ಮೂರಿನ ಜನರಿಗೆ ಬಡಿಸುವುದು ಅವರ ದಿನದ ದಿನಚರಿ. ಅವರು ಯಾವುದೇ ಅಡುಗೆ ಮಾಡಿದರೂ ಅದನ್ನು ದೊಡ್ಡದಾಗಿ ಮಾಡುತ್ತಾರೆ. ಮಾಂಸಾಹಾರ ಅವರ ಫೇವರಿಟ್ ಡಿಶ್. ಕನಿಷ್ಠ 100 ಜನರಿಗೆ ಬಡಿಸಿ ಉಳಿಯುವಷ್ಟು ಆಹಾರ ತಯಾರಿಸುತ್ತಾರೆ. ಇತ್ತೀಚೆಗೆ ಅವರು ಮಾಡಿದ ಅಡುಗೆಯನ್ನು ಪಕ್ಕದ ಅನಾಥಾಶ್ರಮಗಳಿಗೆ ಅಥವಾ ಬಡವರ ಕೇರಿಗೆ ಕೊಂಡೊಯ್ದು, ಎಲ್ಲರಿಗೂ ಬೊಂಬಾಟ್ ಭೋಜನ ಮಾಡಿಸುತ್ತಾರೆ.
ಅಂತಹ ವಿಲೇಜ್ ಕುಕಿಂಗ್ ಚಾನಲ್ ಗೆ ಯೂಟ್ಯೂಬ್‌ನಿಂದ ಡೈಮಂಡ್ ಪ್ಲೇ ಬಟನ್! ಪುರಸ್ಕಾರ ದೊರೆತಿದೆ.

ಇದು ಪುದುಕ್ಕೋಟೈನ ಪುಟ್ಟಗ್ರಾಮವೊಂದರ ಯುವಕರ ಯಶೋಗಾಥೆ. ಹೌದು ಯುವಕರ ತಂಡವೊಂದು ತಮ್ಮ ಅಜ್ಜನ ಜೊತೆ ಸೇರಿಕೊಂಡು ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸುವ ವಿಡಿಯೋವನ್ನು ತಮ್ಮ ವಿಲೇಜ್ ಕುಕ್ಕಿಂಗ್ ಚಾನೆಲ್ ಗೆ ಅಪ್ಲೋಡ್ ಮಾಡುತ್ತಿದ್ದರು. ಈ ಚಾನಲ್ ಇದೀಗ ಒಂದು ಕೋಟಿ ಚಂದಾದಾರರನ್ನು ಪಡೆದಿದೆ. ಇವತ್ತಿನ ದಿನಕ್ಕೆ ಈ ಚಾನಲ್ ನ ಒಟ್ಟು ಚಂದಾದಾರರ ಸಂಖ್ಯೆ ಲವ್ 1.2 ಮಿಲಿಯನ್ ಅಂದರೆ 1.12 ಕೋಟಿ !! ಊಹಿಸಿಕೊಳ್ಳಿ ಅದ್ಯಾವ ಬಟ್ಟಿಗೆ ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂದು !.

ಏಪ್ರಿಲ್ 2018ರಲ್ಲಿ ಪ್ರಾರಂಭವಾದ ಈ ಚಾನೆಲ್ ಈ ಮೈಲಿಗಲ್ಲನ್ನು ತಲುಪಿದ್ದಕ್ಕಾಗಿ ಯೂಟ್ಯೂಬ್‌ನಿಂದ ‘ಡೈಮಂಡ್ ಪ್ಲೇ ಬಟನ್’ ಪಡೆದಿದೆ. ಈ ಚಾನೆಲ್ ಅನ್ನು ಪುದುಕ್ಕೋಟೈನ ಚಿನ್ನ ವೀರಮಂಗಲಂನ ಯುವಕರ ಗುಂಪು ನಡೆಸುತ್ತಿದೆ.  ರೈತರ ಕುಟುಂಬದಿಂದ ಬಂದ ಸುಬ್ರಮಣಿಯನ್, ಅಯ್ಯನ್ನಾರ್, ತಮಿಳುಸೆಲ್ವನ್, ಮುತ್ತುಮಾನಿಕಂ, ಮುರುಗೇಶನ್ (ಸೋದರ ಸಂಬಂಧಿಗಳು) ತಮ್ಮ ಅಜ್ಜ ಪೆರಿಯತಂಬಿ ಜತೆಗೆ ಈ ಚಾನೆಲ್ ನ್ನು ನಡೆಸುತ್ತಿದ್ದಾರೆ.

2020 ರ ಫೆಬ್ರವರಿಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಅಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿ ಹಳ್ಳಿ ಚೆಫ್ ಗಳು ಮಾಡಿದ ಅಡುಗೆ ಸವಿದಿದ್ದರು ಈ ಕಾಂಗ್ರೇಸ್ ನಾಯಕರು.

ಚಾನಲ್ ಪ್ರಾರಂಭಿಸಿರುವ ಈ ಹಳ್ಳಿ ಯುವಕರು, ತಮ್ಮಛಾನೆಲ್ ಒಂದು ಕೋಟಿ ಚಂದಾದಾರರನ್ನು ದಾಟಿದ ನಂತರ ಕೋವಿಡ್ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡಲು ತಮಿಳುನಾಡು ಮುಖ್ಯಮಂತ್ರಿ ಸಾರ್ವಜನಿಕ ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ ಕೊಟ್ಟಿದ್ದಾರೆ.

ವಿಡಿಯೊಗಳನ್ನು ಚಿತ್ರೀಕರಿಸುವಾಗ ಅವರು ಬೇಯಿಸುವ ಪ್ರತಿಯೊಂದು ಖಾದ್ಯವನ್ನು ಕನಿಷ್ಠ 100 ಜನರಿಗೆ ತಯಾರಿಸಲಾಗುತ್ತದೆ. ನಂತರ ಆಹಾರವನ್ನು ಚಾರಿಟಿ ಮನೆಗಳಿಗೆ ಅಥವಾ ವಿಡಿಯೋ ಚಿತ್ರೀಕರಿಸುತ್ತಿರುವ ಹಳ್ಳಿಯ ಜನರಿಗೆ ವಿತರಿಸಲಾಗುತ್ತದೆ.
https://youtu.be/tEdX8vm3PHc

“ನಮಗೆ ಯಾವಾಗಲೂ ನೀಡುವುದನ್ನು ಕಲಿಸಲಾಗಿದೆ. ಅದಕ್ಕಾಗಿಯೇ ನಾವು 1 ಕೋಟಿ ಚಂದಾದಾರರನ್ನು ದಾಟಿದ ಕೂಡಲೇ ನಾವು ಏನಾದರೂ ಒಳ್ಳೆಯದನ್ನು ಮಾಡಲು ಬಯಸಿದ್ದೇವೆ. ನಾವು 10 ಲಕ್ಷ ರೂ.ಗಳ ಚೆಕ್ ಅನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಹಸ್ತಾಂತರಿಸಿದೆವು. ಕೋವಿಡ್ ವಿರುದ್ಧ ಹೋರಾಡುವ ಜನರಿಗೆ ಇದು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ಈ ದೇಣಿಗೆ ನಮ್ಮೆಲ್ಲರ ವೀಕ್ಷಕರ ಪರವಾಗಿದೆ. ಅವರು ನಮ್ಮನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ ಎಂದು ಅಯ್ಯನಾರ್ ಹೇಳಿದರು.
ಈ ಮೈಲಿಗಲ್ಲು ದಾಟಲು ನಮ್ಮ ವೀಕ್ಷಕರು ನಮಗೆ ಸಹಾಯ ಮಾಡಿದ್ದಾರೆ. ಯೂಟ್ಯೂಬ್‌ನಿಂದ ಈ ಡೈಮಂಡ್ ಪ್ಲೇ ಬಟನ್ ಪಡೆದ ಮೊದಲ ತಮಿಳು ಸೃಷ್ಟಿಕರ್ತರು ಎಂಬ ಹೆಮ್ಮೆ ನಮಗಿದೆ. ಇದು ನಮ್ಮ ಸಾಮೂಹಿಕ ವಿಜಯ ಎಂದು ಸುಬ್ರಮಣಿಯನ್ ಹೇಳಿದರು.

Leave A Reply

Your email address will not be published.