ಇಲ್ಲೊಬ್ಬನಿದ್ದಾನೆ ಆಧುನಿಕ ಕುಂಭಕರ್ಣ | ವರ್ಷದ 300 ದಿನಗಳನ್ನು ನಿದ್ದೆಯಲ್ಲೇ ಕಳೆಯುವ ಈತ ಒಮ್ಮೆ ಹಾಸಿಗೆಗೆ ಬಿದ್ದರೆ ಎಷ್ಟು ಹೊತ್ತು ನಿರಂತರ ಮಲಗ್ತಾನೆ ಗೊತ್ತಾ ?!
![](https://hosakannada.com/wp-content/uploads/2021/07/IMG-20210715-WA0021.jpg)
ರಾಜಸ್ಥಾನದ ನಾಗಪುರ ಜಿಲ್ಲೆಯ ಜೋದ್ಪುರ್ ನ 42 ವರ್ಷದ ಈ ವ್ಯಕ್ತಿ ಈಗ ಅಲ್ಲಿ ಕುಂಭ ಕರ್ಣನೆಂದೇ ಪ್ರಚಲಿತ. ಯಾಕೆಂದರೆ ಆ ರೇಂಜಿಗೆ ಇದೆ ಆತ ಹೊಡೆಯುವ ನಿದ್ದೆ !
ಈತ ವರ್ಷದ 365 ದಿನಗಳಲ್ಲಿ 300 ದಿನಗಳನ್ನು ಕೇವಲ ನಿದ್ದೆಯಲ್ಲಿಯೇ ಕಳೆಯುತ್ತಾನೆ. ವೃತ್ತಿಯಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿರುವ ಆತನ ಅಂಗಡಿ ಓಪನ್ ಆಗುವುದು ತಿಂಗಳಿನಲ್ಲಿ ಕೇವಲ ಐದು ದಿನಗಳು. ಒಂದು ಬಾರಿ ದೇಹಕ್ಕೆ ನಿದ್ದೆ ಆವರಿಸಿದರೆ ಮುಗಿಯಿತು, ಮತ್ತೆ ಆತ ಎದ್ದೇಳುವುದು ನಿರಂತರ 25 ದಿನಗಳ ನಿದ್ದೆಯ ನಂತರ !
ಮೊದಲೆಲ್ಲಾ ಆತ ಹೀಗಿರಲಿಲ್ಲ. ಎಲ್ಲರಂತೆ ಸಾಮಾನ್ಯ ಜೀವನ ನಡೆಸುತ್ತಿದ್ದ 2015 ನೇ ಇಸವಿಯಿಂದ ಆತನಿಗೆ ನಿಧಾನವಾಗಿ ನಿದ್ದೆ ಆವರಿಸಲು ಪ್ರಾರಂಭವಾಯಿತು. ಮೊದಲೆಲ್ಲ ದಿನಕ್ಕೆ 18 ತಾಸು ನಿದ್ದೆ ಮಾಡುತ್ತಿದ್ದ. ನಂತರ ನಿದ್ದೆ ಜಾಸ್ತಿ ಒತ್ತರಿಸಿಕೊಂಡು ಬಂದಿದ್ದು, ಕೊನೆಕೊನೆಗೆ ಅದು ವಾರಗಟ್ಟಲೆ ನಿದ್ದೆ ಮಾಡುವ ಹಂತಕ್ಕೆ ತಲುಪಿತ್ತು. ಇದೀಗ ಮತ್ತಷ್ಟು ಆತನ ನಿದ್ದೆ ಉಲ್ಬಣಗೊಂಡಿದ್ದು, ಒಂದು ಬಾರಿ ಮಲಗಿದರೆ ನಿರಂತರವಾಗಿ 25 ದಿನ ನಿದ್ದೆಯಲ್ಲೇ ಕಳೆಯುವ ಹಾಗಾಗಿದೆ.
ಅಷ್ಟಕ್ಕೂ ಆತ ಇಷ್ಟಪಟ್ಟು ನಿದ್ರೆ ಮಾಡುತ್ತಿಲ್ಲ. ಆತನಿಗೆ ಇರುವುದು ಒಂದು ತರಹದ ಅಪರೂಪದ ನಿದ್ರಾರೋಗ. ಆಕ್ಸಿಸ್ ಹೈಪರ್ ಇನ್ಸೋಮ್ನಿಯಾ ಎಂಬ ಹೆಸರಿನ ಈ ರೋಗದ ವ್ಯಕ್ತಿ ವಿಪರೀತವಾಗಿ ನಿದ್ದೆ ಮಾಡುತ್ತಾನೆ. ಈತನಿಗೆ ಈ ಕಾಯಿಲೆ ಇದ್ದು, ಇದು ಒಂದು ಮನೋದೈಹಿಕ ರೋಗ ಹಾಗೂ ಸದ್ಯಕ್ಕೆ ಇದಕ್ಕೆ ಯಾವುದೇ ಔಷಧವಿಲ್ಲ.
ವಿಚಿತ್ರವೆಂದರೆ ಆತನ ನಿದ್ದೆಯಲ್ಲಿ ಊಟ-ತಿಂಡಿ ನಡೆದುಹೋಗುತ್ತದೆ ಮತ್ತು ಮನೆಯವರು ಆತನಿಗೆ ಸ್ನಾನವನ್ನೂ ಆತ ನಿದ್ದೆಯಲ್ಲಿ ಇರುವಾಗಲೇ ಮಾಡಿಸುತ್ತಾರೆ. ಆತನ ತಾಯಿ ಮತ್ತು ಪತ್ನಿ ಲಚ್ಚಿದೇವಿ ಈ ವ್ಯಕ್ತಿಯನ್ನು ತಮ್ಮ ಕೈಲಾದಷ್ಟು ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದು, ಆತ ಮಲಗಿದ್ದಾಗಲೇ ಆತನಿಗೆ ಅನ್ನಾಹಾರವನ್ನು ನೀಡಲಾಗುತ್ತದೆ. ” ನನಗೆ ನಿದ್ದೆಯಿಂದ ಏಳಬೇಕೆಂದು ಅನಿಸುತ್ತದೆ. ಆದರೆ ಹಾಳಾದ ನಿದ್ದೆ ಹೇಳಲು ಬಿಡದೆ ಮತ್ತೆ ಎಳೆದುಬಿಡುತ್ತದೆ. ನಿದ್ದೆ ಬಿಟ್ಟೆದ್ದು ಬರಲು ನನ್ನಿಂದ ಆಗುತ್ತಿಲ್ಲ” ಎಂದು ಆತ ಅಸಹಾಯಕನಾಗಿ ಹೇಳಿಕೊಂಡಿದ್ದಾನೆ.
ಇಷ್ಟೆಲ್ಲಾ ಸಮಸ್ಯೆ ಇದ್ದರೂ ಆ ಕುಟುಂಬ ಮಾತ್ರ ತಮ್ಮ ಮನೆಯ ಯಜಮಾನ ಈ ಸಮಸ್ಯೆಯಿಂದ ಮುಕ್ತನಾಗಿ ಆದಷ್ಟು ಬೇಗ ಗುಣಮುಖರಾಗಿ ಬರುತ್ತಾರೆ ಎಂಬ ನಂಬಿಕೆಯಲ್ಲಿದೆ.