ರಸ್ತೆ ಮಧ್ಯೆ ಅಪಘಾತದಲ್ಲಿ ಸಿಲುಕಿದ್ದವರ ರಕ್ಷಣೆಗೆ ನಿಂತ ಯುವಕ ತಾನೇ ಬಲಿಯಾದ..ಮಂಗಳೂರಿನ ಬೈಕಂಪಾಡಿಯಲ್ಲಿ ನಡೆಯಿತು ಸರಣಿ ಅಪಘಾತ

ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡಿದ್ದವರನ್ನು ಉಪಚರಿಸುತ್ತ, ವಾಹನಗಳನ್ನು ತೆರವುಗೊಳಿಸಿ ಇನ್ನೇನು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಕೊಳ್ಳುತ್ತಾ ಸಹಾಯಕ್ಕಿಳಿದ ಯುವಕನೋರ್ವ ಕೆಲ ಕ್ಷಣದಲ್ಲೇ ಉಸಿರು ಚೆಲ್ಲಿದ ಹೃದಯ ವಿದ್ರಾವಕ ಘಟನೆ ಮಂಗಳೂರಿನ ಬೈಕಂಪಾಡಿಯಲ್ಲಿ ನಡೆದಿದೆ.ರಸ್ತೆ ಮಧ್ಯೆ ಅಪಘಾತ ಗೊಂಡವರನ್ನು ಉಪಚರಿಸುತ್ತಿರುವ ವೇಳೆ ಯುವಕನೋರ್ವನ ಮೇಲೆ ಟ್ಯಾಂಕರ್ ಹರಿದಿದ್ದು,ನೋಡನೋಡುತ್ತಿದ್ದಂತೆ ಯುವಕನ ಪ್ರಾಣಪಕ್ಷಿ ಹಾರಿ ಹೋಗಿದೆ.ಮೃತ ಯುವಕನನ್ನು ಸುಳ್ಯದ ಮೇರ್ಕಜೆ ನಿವಾಸಿ ತೇಜಸ್ ಎಂದು ಗುರುತಿಸಲಾಗಿದೆ.

ಘಟನೆ ವಿವರ:ಮಂಗಳೂರಿನಲ್ಲಿ ಇಲೆಕ್ಟ್ರೀಷಿಯನ್ ಕೆಲಸ ನಿರ್ವಹಿಸುತ್ತಿದ್ದ ತೇಜಸ್ ನಿನ್ನೆ ಸಂಜೆಯ ವೇಳೆ ಕರ್ತವ್ಯ ಮುಗಿಸಿ ಮರಳುತ್ತಿದ್ದಾಗ ಮಂಗಳೂರಿನ ಬೈಕಂಪಾಡಿ ಎಂಬಲ್ಲಿ ದ್ವಿಚಕ್ರ ವಾಹನವೊಂದು ರಸ್ತೆ ಮಧ್ಯೆ ಅಪಘಾತಕ್ಕೀಡಾಗಿರುವುದು ಗಮನಕ್ಕೆ ಬಂದಿದ್ದು,ತಕ್ಷಣವೇ ಅಪಘಾತಗೊಂಡಿದ್ದ ದ್ವಿಚಕ್ರ ವಾಹನ ಸವಾರರನ್ನು ಉಪಚರಿಸಿ, ರಸ್ತೆಯಲ್ಲಿ ಬಿದ್ದಿದ್ದ ವಾಹನವನ್ನು ಎತ್ತಿ ಇನ್ನೇನು ರಸ್ತೆಯ ಬದಿಯಲ್ಲಿ ನಿಲ್ಲಿಸಲು ದೂಡುತ್ತಾ ಬರುವಷ್ಟರಲ್ಲಿ ಯಮರೂಪಿಯಂತೆ ಬಂದ ಟ್ಯಾಂಕರ್ ಒಂದು ತೇಜಸ್ ನನ್ನು ಎಳೆದುಕೊಂಡೇ ಹೋಯಿತು.

ಘಟನೆಯಿಂದ ತೇಜಸ್ ನ ಸೊಂಟದ ಕೆಳಭಾಗಕ್ಕೆ ಗಂಭೀರ ಗಾಯವಾಗಿದ್ದು ತಕ್ಷಣವೇ ಅವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ತಂದು ಆ ಬಳಿಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆದರೆ ವಿಪರೀತ ರಕ್ತಸ್ರಾವದಿಂದ ಆರೋಗ್ಯದಲ್ಲಿ ಏರುಪೇರಾ‌ಗಿ ಜು.11 ರಂದು ಮುಂಜಾನೆ ಕೊನೆಯುಸಿರೆಳೆದರು.

ಯಾರೋ ಪರಿಚಯವಿಲ್ಲದ, ತನ್ನಂತೆಯೇ ರಸ್ತೆಯಲ್ಲಿ ಸಂಚರಿಸುವ ಸವಾರ ಕಷ್ಟದಲ್ಲಿದ್ದಾನೆಂದು ಆತನ ಕಷ್ಟಕ್ಕೆ ಹೆಗಲು ಕೊಡಲು ಹೋಗಿ ತಾನೇ ವಿಧಿಯಾಟಕ್ಕೆ ಬಲಿಯಾಗಿರುವುದು ಮಾತ್ರ ವಿಪರ್ಯಾಸ.

Leave A Reply

Your email address will not be published.