ರಾತ್ರೋ ರಾತ್ರಿ 85 ಮಹಿಳೆಯರನ್ನು ಸಾಗಿಸಿದ ಪ್ರಕರಣಕ್ಕೆ ಸ್ಪೋಟಕ ತಿರುವು | ಆಸ್ಪತ್ರೆಗಳ ಬ್ರಹ್ಮಾಂಡ ಭ್ರಷ್ಟಾಚಾರದ ದೊಡ್ಡ ಷಡ್ಯಂತ್ರ ಬಯಲಿಗೆ
ಕೊರೋನ ಲಸಿಕೆ ಕೊಡಿಸುವುದಾಗಿ 85ಕ್ಕೂ ಹೆಚ್ಚು ಮಹಿಳೆಯರನ್ನು ರಾತ್ರೋ ರಾತ್ರಿ ಬಸ್ಸಿನಲ್ಲಿ ಸಾಗಾಟ ಮಾಡಿದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಕನಚೂರ್ ಮೆಡಿಕಲ್ ಸೈನ್ಸ್ ಕಾಲೇಜಿನ ಇನ್ನೊಂದು ಮುಖ ಬಯಲಾಗಿದೆ.ಮಹಾಮಾರಿಯ ಸಮಯದಲ್ಲಿ ಕೆಲ ವೈದ್ಯರು ಸಹಿತ ಆಸ್ಪತ್ರೆಗಳು ಹಣ ಮಾಡುವ ದಂಧೆ ನಡೆಸುತ್ತಿದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾದರೆ,ಇನ್ನೂ ಹಲವು ಆಸ್ಪತ್ರೆಗಳ ಬಣ್ಣ ಬಯಲಾಗುವ ಸಾಧ್ಯತೆ ಹೆಚ್ಚಿದೆ.
ಆಸ್ಪತ್ರೆಯಲ್ಲಿ ಖಾಲಿ ಇರುವ ಬೆಡ್ ಗಳನ್ನು ಭರ್ತಿ ಮಾಡಲು ನಕಲಿ ರೋಗಿಗಳನ್ನು ತಲಾ ಒಬ್ಬರಿಗಿಂತಿಷ್ಠರಂತೆ ದರ ನಿಗದಿ ಮಾಡಿ, ರಾತ್ರೋ ರಾತ್ರಿ ಬಸ್ಸಿನಲ್ಲಿ ಕರೆತರುತ್ತಿರುವಾಗ ಪೊಲೀಸರ ತನಿಖೆಯಿಂದ ಸತ್ಯ ಬಯಲಾಗಿದೆ.ಘಟನೆಯು ಮೂಡುಬಿದ್ರೆ ತಾಲೂಕಿನ ಕುರ್ನಾಡು ವಿನಲ್ಲಿ ನಡೆದಿದ್ದು,ಇದಕ್ಕೆಲ್ಲ ಕಾರಣವಾಗಿರುವ ಕನಚೂರು ಮೆಡಿಕಲ್ ಸೈನ್ಸ್ ಆಸ್ಪತ್ರೆಯ ಮ್ಯಾನೇಜರ್ ನವಾಜ್ ಹಾಗೂ ಚಾಲಕ ಪ್ರವೀಣ್ ಶಮಿಲಾಗಿದ್ದು ಇಬ್ಬರ ವಿರುದ್ಧವೂ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ:ನಿನ್ನೆ ತಡರಾತ್ರಿ ಕುರ್ನಾಡು ಗ್ರಾಮದಿಂದ ಸುಮಾರು 85ಕ್ಕೂ ಹೆಚ್ಚು ಮಹಿಳೆಯರನ್ನು ಕೊರೋನ ಲಸಿಕೆ ಕೊಡುವ ನೆಪದಲ್ಲಿ ಕರೆದುಕೊಂಡು ಹೋಗಲು ಹೆಸರಾಂತ ಆಸ್ಪತ್ರೆಯ ಬಸ್ಸು ಬಂದಿತ್ತು. ಖುಷಿಯಲ್ಲಿ ಎಲ್ಲಾ ಮಹಿಳೆಯರು ಬಸ್ಸೇರಿದ್ದೇ ತಡ, ಅಲ್ಲಿಗೆ ಗ್ರಾಮಸ್ಥರ ಎಂಟ್ರಿ ಆಯಿತು. ಲಸಿಕೆಗಾಗಿ ಟೋಕನ್ ತೆಗೆದು ಕಾಯುವ ಪರಿಸ್ಥಿತಿ ಯಲ್ಲಿ ಜನತೆ ಇರುವಾಗ, ರಾತ್ರೋ ರಾತ್ರಿ ಯಾವ ಲಸಿಕೆ ಎಂದು ಅನುಮಾನದ ಪ್ರಶ್ನೆ ಮಾಡಿದಾಗ ಆಸ್ಪತ್ರೆಯ ಮ್ಯಾನೇಜರ್ ನವಾಜ್ ಹಾಗೂ ಬಸ್ಸು ಚಾಲಕ ತಬ್ಬಿಬ್ಬಾದರು.
ಇವರ ನಡತೆಯಿಂದ ಉತ್ತರ ಸಿಗದೇ ಪೊಲೀಸರಿಗೆ ವಿಷಯ ತಿಳಿಸಲಾಗಿತ್ತು.ಕೆಲ ಹೊತ್ತಿನಲ್ಲೇ ಪೊಲೀಸರು ಆಗಮಿಸಿ ವಿಚಾರಿಸಿದಾಗ ಸತ್ಯ ಬಯಲಾಯಿತು.ನ್ಯಾಷನಲ್ ಮೆಡಿಕಲ್ ಕಮಿಷನ್ ವತಿಯಿಂದ ನಡೆಯುವ ಮೇಲ್ವಿಚಾರಣೆಗಾಗಿ ಈ ರೀತಿಯ ಕಳ್ಳ ನಾಟಕ ಮಾಡಿರುವುದಾಗಿಯೂ, ಹಾಗೂ ನಟಿಸಲು ಬಂದ ನಟಿಮಣಿಯರಿಗೆ(ಗ್ರಾಮದ ಮಹಿಳೆಯರಿಗೆ) ಸಂಭಾವನೆಯನ್ನು ನೀಡುತ್ತಿರುವುದಾಗಿಯೂ ಆಸ್ಪತ್ರೆಯ ಮ್ಯಾನೇಜರ್ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ.ಸದ್ಯ ಈ ಎಲ್ಲಾ ಘಟನೆಗಳಿಂದಾಗಿ ಸತ್ಯಾಂಶ ಹೊರಬಂದಿದ್ದು, ಬೆಡ್ ದಂಧೆ, ಲಸಿಕೆ ವಿಚಾರದಲ್ಲಿ ನಕಲಿ ಆಟ ಆಡುತ್ತಿರುವ ಇನ್ನೂ ಹೆಚ್ಚಿನ ಆಸ್ಪತ್ರೆ ಹಾಗೂ ವೈದ್ಯರ ಮುಖವಾಡಗಳು ಕಳಚಿ ಬೀಳುವುದು ಖಚಿತ.