ಕಾಂಗ್ರೆಸ್‍ನಲ್ಲಿ ಹೆಚ್ಚಾದ ‘ಸಿಎಂ ಸೀಟ್ ಮೇಲೆ ಟವೆಲ್’ ಹಾಕೋ ಫೈಟ್ | ಹೈಕಮಾಂಡ್ ಗೆ ಕೂಡಾ ಡೋಂಟ್‍ಕೇರ್ ಅಂತಿಲ್ಲ ಶಾಸಕರು
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿದೆ. ಎಲೆಕ್ಷನ್ ಗೆಲ್ಲುವ ಮೊದಲೇ ಕೈ ಪಾಳಯದಲ್ಲಿ ಮುಂದಿನ ಸಿಎಂ ಯಾರು ಎಂಬ ಫೈಟ್ ಶುರುವಾಗಿದೆ. ಇರೋ ಬರೋ ಶಾಸಕರು ಸಿದ್ದು ಮತ್ತು ಡಿಕೆಶಿ ಗಾಗಿ ಸಿಎಂ ಸೀಟಿನ ಟವೆಲ್ ಹಾಕೋ ಕೆಲಸ ಶುರುಮಾಡಿದ್ದಾರೆ.
ಹೌದು. ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಲೇ ಇದೆ. ಕಮಲ ಪಾಳಯಲ್ಲಿ ನಾಯಕತ್ವ ಫೈಟ್ ಮಧ್ಯೆಯೇ ಇದೀಗ ಕಾಂಗ್ರೆಸ್ಸಿನಲ್ಲಿ ಎಲೆಕ್ಷನ್ ಗೆಲ್ಲುವ ಮೊದಲೇ ಮುಂದಿನ ಸಿಎಂ ಯಾರು ಎಂಬ ಫೈಟ್ ಜೋರಾಗಿದೆ. ಹೈಕಮಾಂಡ್ ಎಂಟ್ರಿ ಬಳಿಕವೂ ತಣ್ಣಗಾಗಬೇಕಿದ್ದ ಬಣ ಬಡಿದಾಟ ಮತ್ತಷ್ಟು ಜೋರಾಗಿದೆ. ಸಿದ್ದರಾಮಯ್ಯ ಬಣದ ಶಾಸಕರು ಸಿದ್ದು ಸಿಎಂ ಜಪವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಸಿದ್ದರಾಮಯ್ಯ ಪರ ದಿನಕ್ಕೊಬ್ಬರು ಸದ್ದು ಮಾಡ್ತಿದ್ದಾರೆ ನೋಡಿ. ಮೊನ್ನೆ ಮೊನ್ನೆಯಷ್ಟೇ ಜಮೀರ್, ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ರು. ಇಂದು ಹರಿಹರ ಶಾಸಕ ರಾಮಪ್ಪ ಮತ್ತು ಅಖಂಡ ಶ್ರೀನಿವಾಸಮೂರ್ತಿ ಸಿದ್ದರಾಮಯ್ಯನವರೇ ಸಿಎಂ ಆಗಬೇಕು ಎಂದಿದ್ದಾರೆ. ಅದರಲ್ಲೂ ರಾಮಪ್ಪ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಮಾತನಾಡಿ, ಡಿಕೆಶಿಗೆ ಇನ್ನೂ ವಯಸ್ಸಿದೆ, ಮುಂದೆ ಸಿಎಂ ಆಗೋ ಅವಕಾಶ ಇದೆ. 2023ಕ್ಕೆ ಸಿದ್ದರಾಮಯ್ಯನೇ ಸಿಎಂ ಆಗ್ಬೇಕು ಎಂದಿದ್ದಾರೆ.
ಕಾಂಗ್ರೆಸ್ಸಿನಲ್ಲಿ ಕೆಲ ಶಾಸಕರು ತಮ್ಮ ಪರ ಬ್ಯಾಟಿಂಗ್ ಮಾಡ್ತಾ, ಹೇಳಿಕೆ ಕೊಡ್ತಾ ಇದ್ರೂನೂ ಸಿದ್ದರಾಮಯ್ಯ ಮಾತ್ರ ಅವರ ಹೇಳಿಕೆಗೆ ಬ್ರೇಕ್ ಹಾಕಲು ಹಿಂದೇಟು ಹಾಕಿದ್ದಾರೆ. ಶಾಸಕರುಗಳು ಹೇಳಿದರೆ ನಾನೇನು ಮಾಡೋಕೆ ಆಗಲ್ಲ. ಅದಕ್ಕು ನನಗೂ ಸಂಬಂಧ ಇಲ್ಲ ಎಂದಿದ್ದಾರೆ.
ಇತ್ತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೇಸರ ಹೊರಹಾಕಿದ್ದಾರೆ. ಸಿಎಂ ಆಗಲು ನನಗೇನು ಅರ್ಜೆಂಟ್ ಇಲ್ಲ. ಸಿಎಲ್‍ಪಿ ನಾಯಕರು ಇದನ್ನು ನೋಡ್ಕೋಬೇಕು ಎಂದು ಸಿದ್ದರಾಮಯ್ಯಗೆ ನೇರ ಎಚ್ಚರಿಕೆ ನೀಡಿದ್ರು. ಸಂಸದ ಡಿಕೆ ಸುರೇಶ್ ಅಂತೂ ಈಗ ಮಾತಾಡ್ತಿರೋರೆಲ್ಲಾ ಅಧಿಕಾರಕ್ಕಾಗಿ ಪಕ್ಷಕ್ಕೆ ಬಂದವರು ಎಂದು ಸಿದ್ದು ಬಣಕ್ಕೆ ಡಿಚ್ಚಿ ಕೊಟ್ಟಿದ್ದಾರೆ.
ಒಟ್ಟಾರೆಯಾಗಿ ಸಿದ್ದು ಹಾಗೂ ಡಿಕೆ ಸಿಎಂ ಬಣಬಡಿದಾಟ ಅಂತೂ ಜೋರಾಗಿದ್ದು, ಮುಂದಿನ ಚುನಾವಣೆಗೆ ಬೇಕಾದ ಪ್ಲಾನ್ ಮತ್ತು ತಯಾರಿ ಮಾಡಿಕೊಳ್ಳುವುದು ಬಿಟ್ಟು, ಅನಗತ್ಯ ಪ್ರತಿಷ್ಠೆಯ ಸಿ ಎಂ ಕುರ್ಚಿಯ ಆಯ್ಕೆಗೆ ಹೊರಟಿರುವುದರಿಂದ ಕಾಂಗ್ರೇಸ್ ಗೆ ಏನೂ ಲಾಭ ಇಲ್ಲ.