ಇಂಡಿಗೋ ವಿಮಾನ ಲ್ಯಾಂಡಿಂಗ್ ವೇಳೆ ಟೈರ್ ಸ್ಫೋಟ | ಕೂದಲೆಳೆಯಲ್ಲಿ ತಪ್ಪಿದ ಭಾರೀ ದುರಂತ

ವಿಮಾನ ಲ್ಯಾಂಡಿಂಗ್ ವೇಳೆ ಇಂಡಿಗೋ ವಿಮಾನ ಟೈರ್ ಸ್ಫೋಟಗೊಂಡ ಘಟನೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಅದೃಷ್ಟವಶಾತ್ ಬಹುದೊಡ್ಡ ಸಂಭಾವ್ಯ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ.

ನಿನ್ನೆ ಸಂಜೆಯೇ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೇರಳದ ಕಣ್ಣೂರಿನಿಂದ ಆಗಮಿಸಿದ್ದ ಇಂಡಿಗೋ 6E 7979 ವಿಮಾನ ಲ್ಯಾಂಡಿಂಗ್ ಮಾಡುವಾಗ ವಿಮಾನದ ಒಂದು ಟೈರ್ ಸ್ಫೋಟಗೊಂಡಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.

ವಿಮಾನದಲ್ಲಿ ಸಂಚರಿಸುತ್ತಿದ್ದ ಎಲ್ಲಾ ಪ್ರಯಾಣಿಕರು ಮತ್ತು ವಿಮಾನಯಾನ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ಇಂಡಿಗೋ ಸಂಸ್ಥೆ ಇಳಿದಿದೆ. ಈ ಮಧ್ಯೆ ವಿಮಾನಯಾನ ಸುರಕ್ಷತಾ ಅಧಿಕಾರಿಗಳು ಘಟನೆಯ ಕೂಲಂಕುಷ ತನಿಖೆಗಾಗಿ ಆದೇಶಿಸಿದ್ದಾರೆ.

ಕೇರಳ ರಾಜ್ಯದ ಕಣ್ಣೂರಿನಿಂದ ಸೋಮವಾರ ರಾತ್ರಿ 8.30ಕ್ಕೆ ಬಂದ ಇಂಡಿಗೊ ವಿಮಾನ 6E-7979 ಹಾರ್ಡ್ ಲ್ಯಾಂಡಿಂಗ್ (ಟೈರ್ ನಲ್ಲಿ ಗಾಳಿ ಕಡಿಮೆ ಅಥವಾ ಅಡ್ಡವಾಗಿ ವೇಗವಾಗಿ ಬೀಸಿದ ಗಾಳಿ) ಆಗಿದೆ. ಈ ವೇಳೆ ಟೈರ್ ರನ್ ವೇ ಮೇಲೆ ಸ್ಪರ್ಶ ಮಾಡುತ್ತಿದ್ದಂತೆಯೇ  ಸ್ಫೋಟಗೊಂಡಿದೆ. ಈ ವೇಳೆ ವಿಮಾನ ಕೆಲ ಕ್ಷಣಗಳ ಕಾಲ ಆಯ ತಪ್ಪಿದ್ದು, ಕೂಡಲೇ ಅಪಾಯದ ಮುನ್ಸೂಚನೆ ಅರಿತ ಪೈಲಟ್ ಗಳು ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಪೈಲಟ್‌ ಮೊದಲು ರನ್ ವೇ ದಲ್ಲಿ ಇಳಿಸಲು ಪ್ರಯತ್ನಿಸಿದ್ದಾನೆ. ಆಗದಿಂದಾಗ ಎರಡನೇ ಬಾರಿ ಇಳಿಸಲು ಯತ್ನಿಸಿದಾಗ ಟಾಯರ್ ಬ್ಲಾಸ್ಟ್ ಆಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ವಿಮಾನದಲ್ಲಿ ಏಳು ಜನರು ಪ್ರಯಾಣಿಸುತ್ತಿದ್ದರು. ಅವರು ಸುರಕ್ಷಿತವಾಗಿದ್ದಾರೆ. ಈ ವಿಮಾನ 18  ಪ್ರಯಾಣಿಕರನ್ನು ಹೊತ್ತು  ಬೆಂಗಳೂರಿಗೆ ತೆರಳಬೇಕಾಗಿತ್ತು. ಘಟನೆಯಿಂದಾಗಿ ಬೆಂಗಳೂರು ಪ್ರಯಾಣ ರದ್ದುಪಡಿಸಲಾಗಿದೆ. ಬಳಿಕ ಸುಮಾರು 2 ಗಂಟೆ ಹೊತ್ತಿನಲ್ಲಿ ವಿಮಾನವನ್ನು ರನ್ ವೇ ಇಂದ ತೆರವುಗೊಳಿಸಿ, ವಿಮಾನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಟೈರ್ ನಲ್ಲಿ ಗಾಳಿ ಕಡಿಮೆಯಾಗಿದ್ದ ಪರಿಣಾಮ ಒಂದೆಡೆ ಒತ್ತಡ ಉಂಟಾಗಿತ್ತು. ಇದರಿಂದ ಹಾರ್ಡ್ ಲ್ಯಾಂಡಿಂಗ್ ಆಗಿದೆ. ವಿಮಾನ ಹಾರಾಟ ರದ್ದಾಗಿದ್ದರಿಂದ ಕಂಪನಿಯವರು ಅವರಿಗೆಲ್ಲ ಪರ್ಯಾಯ ವ್ಯವಸ್ಥೆ ಮೂಲಕ ಬೆಂಗಳೂರಿಗೆ ಕಳುಹಿಸಿದರು ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾಹಿತಿ ನೀಡಿರುವ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ್ ಕುಮಾರ್ ಠಾಕ್ರೆ, ‘ಭಾರೀ ಗಾಳಿಯಿಂದಾಗಿ ವಿಮಾನವನ್ನು ಹಾರ್ಡ್ ಲ್ಯಾಂಡಿಂಗ್ ಮಾಡಬೇಕಾಯಿತು. ಇದು ಟೈರ್ ಸ್ಫೋಟಕ್ಕೆ ಕಾರಣವಾಯಿತು. ಘಟನೆಯಿಂದಾಗಿ ರನ್ ವೇ ಮೇಲೆ ಕೆಲವು ಸ್ಕ್ಯಾಚ್  ಗಳಾಗಿದ್ದು ಹೊರತುಪಡಿಸಿದರೆ ರನ್ ವೇಗೆ ಹಾನಿಯಾಗಿಲ್ಲ.  ಮಂಗಳವಾರ ಬೆಳಿಗ್ಗೆ ಇಳಿಯಲು ಬೆಂಗಳೂರು-ಹುಬ್ಬಳ್ಳಿ ವಿಮಾನದ ರನ್ ವೇಯನ್ನು ಮತ್ತೆ ತೆರೆಯುವ ಮೊದಲು ವಿಮಾನ ನಿಲ್ದಾಣದ ಸಿಬ್ಬಂದಿ ಟೈರ್ ಭಾಗಗಳನ್ನು ತೆಗೆದು ಪ್ರದೇಶವನ್ನು ಸ್ವಚ್ಛಗೊಳಿಸಿದರು.

2015 ರಲ್ಲಿ, ಇದೇ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭಾರಿ ಮಳೆಯಾದ ಕಾರಣ ಬೆಂಗಳೂರಿನ ಸ್ಪೈಸ್‌ಜೆಟ್ ವಿಮಾನವು ರನ್ ವೇ ಯಿಂದ ಜಾರಿತ್ತು. ಅದೃಷ್ಟವಶಾತ್ ಅಂದು ಕೂಡ ಯಾರಿಗೂ ಯಾವ ಅಪಾಯ ಸಂಭವಿಸಿರಲಿಲ್ಲ.

Leave A Reply

Your email address will not be published.