38 ಹೆಂಡಿರ ಗಂಡ, 89 ಮಕ್ಕಳ ಅಪ್ಪ, 33 ಮೊಮ್ಮಕ್ಕಳ ದೊಡ್ಮನೆ ವಾರಸುದಾರ ನಿಧನ
ಮಿಜೋರಾಮ್: ವಿಶ್ವದಲ್ಲೇ ದೊಡ್ಮನೆ ಯ ಗೃಹಸ್ಥ ಒಬ್ಬಾತ ನಿಧನರಾಗಿದ್ದಾರೆ.
ತನ್ನ 38 ಪತ್ನಿಯರಿಗೆ ಮುದ್ದಿನ ಗಂಡ, 89 ಮಕ್ಕಳಿಗೆ ಪ್ರೀತಿಯ ಅಪ್ಪನಾಗಿ ಮತ್ತು 33 ಮೊಮ್ಮಕ್ಕಳಿಗೆ ಅಕ್ಕರೆಯ ಅಜ್ಜನಾಗಿದ್ದ ಮಿಜೋರಾಮ್ ನ ಜಿಯೋನಾ ಚಾನಾ ಅವರು ತನ್ನ 76 ನೆಯ ವರ್ಷದಲ್ಲಿ ತನ್ನ ದೊಡ್ಡ ಕುಟುಂಬ ತೊರೆದು ವೈಕುಂಠ ಸೇರಿದ್ದಾರೆ.
ವಿಶ್ವದ ಅತಿದೊಡ್ಡ ಕುಟುಂಬ ಹೊಂದಿದ್ದ ಜಿಯೋನಾ ಚಾನಾ ನಿಧನಕ್ಕೆ ಮಿಜೋರಾಂ ಮುಖ್ಯಮಂತ್ರಿ ಜೊರಾಮ್ ತಂಗ ಸಂತಾಪ ಸೂಚಿಸಿದ್ದಾರೆ. ರಾಜ್ಯ ಮತ್ತು ಚಾನಾ ಅವರ ಬಕ್ತಾಂಗ್ ತ್ಲಾಂಗ್ನುವಾಮ್ ಗ್ರಾಮವು ಇವರ ಕುಟುಂಬದಿಂದಾಗಿ ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ ಎಂದಿದ್ದಾರೆ.
ಚಾನಾ ಅವರು 1945ರ ಜುಲೈ 21 ರಂದು ಜನಿಸಿದ್ದರು. ತಮ್ಮ17 ನೇ ವಯಸ್ಸಿನಲ್ಲಿ ಅವರು, ಅವರಿಗಿಂತ ಮೂರು ವರ್ಷ ಹಿರಿಯರಾದ ತಮ್ಮ ಮೊದಲ ಹೆಂಡತಿಯನ್ನು ಮದುವೆಯಾಗಿದ್ದರು. ಅಲ್ಲಿಂದ ಆತ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಒಬ್ಬೊಬ್ಬರಾಗಿ ಆತ ಮದುವೆ ಆಗುತ್ತಾ ಸಾಗಿದ್ದಾರೆ. ನಿನ್ನೆ ಆತ ಸಾಯುವ ಕಾಲಕ್ಕೆ ಆತನಿಗೆ 76 ವರ್ಷವಾಗಿದ್ದರೆ, ಅಷ್ಟರಲ್ಲಿ ಆತ 38 ಮಡದಿಯರನ್ನು ಪಡೆದು ಸಂಸಾರ ಹೂಡಿದ್ದ. ಅಂದರೆ ಜೀವಿತಾವಧಿಯ ಪ್ರತಿ ಎರಡು ವರ್ಷಕ್ಕೊಂದು ಬಾರಿ ಆತ ಹೊಸ ಮದುವೆಯಾಗಿ ತನ್ನ ರಸಿಕ ತನ ಮೆರೆದಿದ್ದಾನೆ !
ಈ ದೊಡ್ಮನೆಯ ಸದಸ್ಯರು ನಾಲ್ಕು ಅಂತಸ್ತಿನ ‘ಚುವಾನ್ ಥಾರ್ ರನ್’ ಅಥವಾ ನ್ಯೂ ಜನರೇಷನ್ ಹೋಮ್ ಎಂಬ ಹೆಸರಿನ ಮನೆಯು 100 ಕ್ಕೂ ಹೆಚ್ಚು ಕೊಠಡಿಗಳ ದೊಡ್ಡ ಅರಮನೆ. ಜಿಯೋನಾ ಚಾನಾ ಅವರ ಪುತ್ರರು ಮತ್ತು ಅವರ ಹೆಂಡತಿಯರು ಮತ್ತು ಅವರ ಎಲ್ಲಾ ಮಕ್ಕಳು ಒಂದೇ ಮನೆಯಲ್ಲಿ ವಾಸಿಸುತ್ತಿದ್ದು, ಆ ಕಟ್ಟಡದಲ್ಲಿ ಬೇರೆ ಬೇರೆ ಕೋಣೆಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ಒಂದೇ ಅಡುಗೆಮನೆಯಲ್ಲಿ 160 ಜನರಿಗೆ ಸಮಾರಂಭಕ್ಕೆ ಅಡುಗೆ ಮಾಡುವಂತೆ ಆಹಾರ ಬೇಯಿಸುತ್ತಾರೆ.
ಈಗ ಕಳೆದ ಕೆಲವು ಸಮಯದಿಂದ ಸಕ್ಕರೆ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡ ಬಳಲುತ್ತಿದ್ದ ಜಿಯೋನಾ ನಿನ್ನೆ ಮಧ್ಯಾಹ್ನ 3 ಗಂಟೆಗೆ ನಿಧನರಾದರು. ವಿಶ್ವದ ದೊಡ್ಡ ಕುಟುಂಬದ ದೊಡ್ಮನೆ ವಾರಸ್ದಾರ ಇನ್ನಿಲ್ಲ.