ಗೂಗಲ್ ಆಯ್ತು ಈಗ ಅಮೆಜಾನ್ ನ ಸರದಿ | ತನ್ನ ಶಾಪಿಂಗ್ ವೆಬ್ ಸೈಟ್ ನಲ್ಲಿ ಕನ್ನಡ ಧ್ವಜ ಇರುವ ಮಹಿಳೆಯರ ಒಳಉಡುಪುಗಳ ಮಾರಾಟ ಮಾಡಿ ಕನ್ನಡಿಗರಿಗೆ ಅಪಮಾನ
ಕೆಲ ದಿನಗಳ ಹಿಂದೆಯಷ್ಟೇ ಭಾರತದ ಅತ್ಯಂತ ಕೊಳಕು, ಅಸಹ್ಯ ಭಾಷೆ ಎಂಬ ಪ್ರಶ್ನೆಗೆ “ಕನ್ನಡ” ಎಂದು ಸರ್ಚ್‌ನಲ್ಲಿ ತೋರಿಸಿದ್ದ ಗೂಗಲ್ ಕನ್ನಡಿಗರ ಸ್ವಾಭಿಮಾನವನ್ನು ಕೆರಳಿಸಿ, ಬಳಿಕ ಕ್ಷಮಾಪಣೆಯನ್ನೂ ಕೇಳಿತ್ತು. ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪನಿಯಾಗಿರುವ ಅಮೇಜಾನ್ ಕೂಡ ಇದೇ ರೀತಿ ಕನ್ನಡಿಗರಿಗೆ ಅಪಮಾನ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಕೆನಡಾದ ಅಮೇಜಾನ್ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ನಲ್ಲಿ ಕನ್ನಡ ಧ್ವಜದ ಚಿತ್ರ, ಅಶೋಕ ಚಕ್ರದ ಲಾಂಛನವಿರುವ ಮಹಿಳೆಯರ ಒಳ ಉಡುಪುಗಳನ್ನು ಮಾರಾಟಕ್ಕಿಟ್ಟ ಕಾರಣಕ್ಕೆ ಅಮೇಜಾನ್ ವಿರುದ್ಧ ಕನ್ನಡಪರ ಸಂಘಟನೆಗಳು, ಕನ್ನಡಿಗರು ಆಕ್ರೋಶ ಹೊರಹಾಕಿದ್ದರು. ಇದೀಗ ಆ ಚಿತ್ರವನ್ನು ತನ್ನ ಸೈಟ್ ನಿಂದ ತೆಗೆದುಹಾಕಿರುವ ಅಮೇಜಾನ್ ಅದರ ಬದಲಾಗಿ ಬೇರೆ ಚಿತ್ರವನ್ನು ಹಾಕಿದೆ. ಆದರೆ, ಹೊಸ ಚಿತ್ರದಲ್ಲಿರುವ ಒಳ ಉಡುಪಿನ ವಿವರಣೆಯಲ್ಲಿ ಕರ್ನಾಟಕ ಫ್ಲಾಗ್ ಡಿಸೈನ್‌ನ ಒಳ ಉಡುಪು ಎಂಬುದನ್ನು ಮಾತ್ರ ಹಾಗೇ ಉಳಿಸಿಕೊಂಡಿದೆ.
ವಿಮೆನ್ಸ್ ಫ್ಲ್ಯಾಗ್ ಆಫ್ ಕರ್ನಾಟಕ ಒರಿಜಿನಲ್ ಡಿಸೈನ್ ಎಂಬ ಹೆಸರಿನಲ್ಲಿ ಈ ಬಿಕಿನಿಯನ್ನು ಮಾರಾಟ ಮಾಡಲಾಗುತ್ತಿತ್ತು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕರ್ನಾಟಕದ ಫ್ಲಾಗ್ ಡಿಸೈನ್‌ನ ಪ್ರಾಡಕ್ಟ್ ಎಂದು ನಮೂದಿಸಲ್ಪಟ್ಟಿದ್ದ ಕನ್ನಡ ಧ್ವಜವಿರುವ ಮಹಿಳೆಯರ ಒಳಉಡುಪುಗಳನ್ನು ಸೇಲ್ ಮಾಡುತ್ತಿರುವುದಕ್ಕೆ ಅಮೇಜಾನ್‌ಗೆ ಟ್ಯಾಗ್ ಮಾಡಿ ವಿರೋಧಿಸಲಾಗಿತ್ತು.
ಕೆಲ ದಿನಗಳ ಹಿಂದಷ್ಟೇ ಭಾರತದ ಅಗ್ಲಿಯೆಸ್ಟ್ ಭಾಷೆ ಯಾವುದು ಎಂದು ಸರ್ಚ್ ಮಾಡಿದರೆ ಗೂಗಲ್‌ನಲ್ಲಿ ಕನ್ನಡ ಎಂದು ತೋರಿಸುತ್ತಿತ್ತು. ಟ್ವಿಟ್ಟರ್‌ನಲ್ಲಿ ಕನ್ನಡಿಗರು ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ ಬಳಿಕ ಎಚ್ಚೆತ್ತುಕೊಂಡ ಗೂಗಲ್ ಆ ವೆಬ್ ಸೈಟ್ ನ್ನು ತನ್ನ ಸರ್ಚ್ ನಿಂದಲೇ ತೆಗೆದುಹಾಕಿ ಕನ್ನಡದಲ್ಲಿಯೇ ಕ್ಷಮೆಯನ್ನೂ ಕೇಳಿತ್ತು.
ಕನ್ನಡ ಧ್ವಜವಿರುವ ಬಿಕಿನಿ ಮಾರಾಟ ಮಾಡಿದ್ದಕ್ಕೆ ಅಮೇಜಾನ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯಿಂದಲೂ ಎಚ್ಚರಿಕೆ ನೀಡಲಾಗಿತ್ತು. ಅಮೇಜಾನ್ ತಾಣದಲ್ಲಿ ಕನ್ನಡ ಧ್ವಜವಿರುವ ಒಳ ಉಡುಪುಗಳ ಚಿತ್ರಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ ಅಮೇಜಾನ್ ಆ ಚಿತ್ರವನ್ನು ಬದಲಾಯಿಸಿದೆ.
ಪದೇಪದೇ ಕನ್ನಡಿಗರಿಗೆ ಈ ರೀತಿಯ ಅಪಮಾನ ಆಗುತ್ತಲೇ ಇದೆ. ಇದಕ್ಕೆಲ್ಲಾ ಕನ್ನಡಿಗರು ಒಟ್ಟಾಗಿ ನಿಂತು ಅಪಮಾನಗಳ ವಿರುದ್ಧ ಹೋರಾಡಬೇಕಿದೆ.