ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳ್ಳಂಬೆಳಗ್ಗೆ ಭಾರಿ ಸ್ಪೋಟ | ಆರು ಮಂದಿಗೆ ಗಾಯ
ಬೆಂಗಳೂರು: ಇಲ್ಲಿನ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳ್ಳಂಬೆಳಗ್ಗೆ ಭಾರಿ ಸ್ಫೋಟ ಸಂಭವಿಸಿದೆ.
ಸಿಲಿಂಡರ್ ಸ್ಫೋಟದಿಂದಾಗಿ ಆರು ಮಂದಿ ಕಾರ್ಮಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೆಐಎಎಲ್ ಎರಡನೇ ಟರ್ಮಿನಲ್‌ಗಾಗಿ ರಸ್ತೆ ನಿರ್ಮಾಣ ಕಾರ್ಯ ಜೋರಾಗಿ ಸಾಗುತ್ತಿದ್ದು, ಈ ವೇಳೆ ಕಾರ್ಗೋ ಕಾಂಪ್ಲೆಕ್ಸ್ ಮುಂಭಾಗದ ರಸ್ತೆಯಲ್ಲಿನ ಅಂಡರ್ ಪಾಸ್ ಓಳಗೆ ರಸ್ತೆಗೆ ಕಪ್ಪು ಬಿಳಿ ಸೂಚಕ ಸಂಕೇತಗಳ ಪಟ್ಟಿಯನ್ನು ಬಳಿಯಲಾಗುತ್ತಿತ್ತು. ಇದಕ್ಕಾಗಿ ಕ್ಯಾಂಟರ್ ಒಂದರಲ್ಲಿ ಕಪ್ಪು ಬಳಿ ಬಣ್ಣವನ್ನು ಬಿಸಿ ಮಾಡಲು ಸಿಲಿಂಡರ್ ಇಟ್ಟಿದ್ದು ಆಕಸ್ಮಿಕವಾಗಿ ಸಿಲಿಂಡರ್ ಬ್ಲಾಸ್ಟ್ ಆಗಿದೆ.
ಸ್ಫೋಟದ ರಭಸಕ್ಕೆ ಕ್ಯಾಂಟರ್ ಗೂ ಬೆಂಕಿ ತಗುಲಿದ್ದು ಘಟನೆಯಲ್ಲಿ 6 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ಅವಿನಾಶ್, ಸಿರಾಜ್, ಅಜಯ್, ನಾಗೇಶ್ ರಾವ್, ಪ್ರಶಾಂತ್, ಗೌತಮ್ ಗಾಯಗೊಂಡವರು ಎಂದು ತಿಳಿದುಬಂದಿದೆ.
ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರ ಎನ್ನಲಾಗುತ್ತಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.