ದ್ವಿತೀಯ ಪಿಯು ಫಲಿತಾಂಶಕ್ಕೆ ಎಸ್.ಎಸ್.ಎಲ್.ಸಿ ಫಲಿತಾಂಶವೂ ಪರಿಗಣನೆ | ಸಚಿವ ಸುರೇಶ್ ಕುಮಾರ್
ನಿನ್ನೆ ದ್ವಿತೀಯ ಪಿಯು ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದರು. ಇದಕ್ಕೆ ಮಾನದಂಡವಾಗಿ ಪ್ರಥಮ ಪಿಯುಸಿ ಅಂಕ ಆಧರಿಸಿ, ಪಾಸ್ ಮಾಡುವುದಾಗಿ ತಿಳಿಸಿದ್ದರು. ಆದರೆ ಇಂದು ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ.
ಅದೇನೆಂದರೆ ಎಸ್.ಎಸ್.ಎಲ್.ಸಿ ಅಂಕಗಳನ್ನು ಕೂಡ ಪರಿಗಣಿಸಿ ದ್ವಿತೀಯ ಪಿಯು ಫಲಿತಾಂಶ ಘೋಷಣೆ ಮಾಡಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ದ್ವಿತೀಯ ಪಿಯು ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವು ಇನ್ನಷ್ಟು ಸಮಗ್ರವಾಗಲು ಹಾಗೂ ಹೆಚ್ಚು ನ್ಯಾಯಯುತವಾಗಲು ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ ಫಲಿತಾಂಶಗಳನ್ನೂ ಅವಲೋಕಿಸಿ, ಸೂಕ್ತ ಮೌಲ್ಯವನ್ನು ಕಲ್ಪಿಸುವ ಮೂಲಕ ಫಲಿತಾಂಶ ಘೋಷಣೆ ಮಾಡಬೇಕೆಂದು ಸಚಿವ ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವತಿಯಿಂದ ಅಂಕಿ ಅಂಶಗಳನ್ನು ಪಡೆದು, ಪ್ರಥಮ ಪಿಯು ಅಂಕಗಳೊಂದಿಗೆ ಎಸ್.ಎಸ್.ಎಲ್.ಸಿ ಅಂಕಗಳನ್ನು ಸೂಕ್ತ ರೀತಿಯಲ್ಲಿ ಹೊಂದಿಸಿ ಜೂನ್ ಮಾಸಾಂತ್ಯಕ್ಕೆ ಗ್ರೇಡಿಂಗ್ ಫಲಿತಾಂಶಗಳನ್ನು ಘೋಷಿಸುವ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಿನ್ನೆ ಮೊದಲ ಸಿಹಿ ಸುದ್ದಿ ಪಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇಂದು ಅದರ ಖುಷಿ ಇಮ್ಮಡಿಯಾಗಿದೆ.