ಬೆಳ್ತಂಗಡಿ | ಗಂಡಿಬಾಗಿಲು ಆಶ್ರಮದಲ್ಲಿ ಕೊರೊನಾ ಸ್ಫೋಟ | 130 ಕ್ಕೂ ಅಧಿಕ ಜನರಿಗೆ ಸೋಂಕು

ಬೆಳ್ತಂಗಡಿ: ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲಿನ ಸಿಯೋನ್ ಆಶ್ರಮ ಕೊರೊನಾ ಹೊಡೆತ ಸಂಕಷ್ಟಕ್ಕೆ ಸಿಲುಕಿಸಿದೆ. ಅಲ್ಲಿರುವ ಅರ್ಧದಷ್ಟು ಜನರಿಗೇ ಸೋಂಕು ತಗುಲಿ ಆತಂಕ ಸೃಷ್ಟಿಸಿದೆ.

ಮಾನಸಿಕ ರೋಗಿಗಳಿಗೆ ಹಾಗೂ ನಿರ್ಗತಿಕರಿಗಾಗಿ ಹಲವಾರು ವರ್ಷಗಳಿಂದ ಸಿಯೋನ್ ಆಶ್ರಮ ಕಾರ್ಯನಿರ್ವಹಿಸುತ್ತಿದ್ದು ಅಲ್ಲಿ ಒಟ್ಟು 270 ಆಶ್ರಮ ವಾಸಿಗಳಿದ್ದಾರೆ. ಇದುವರೆಗೆ ಇದರಲ್ಲಿ 135 ಮಂದಿಗೆ ಕೋರೊನಾ ಪಾಸಿಟಿವ್ ಕಂಡುಬಂದಿದ್ದು ಜನತೆಯನ್ನು ಬೆಚ್ಚಿ ಬೀಳಿಸಿದೆ.

ಈಗ 100 ಕ್ಕೂ ಅಧಿಕ ಪ್ರಕರಣಗಳು ಸಕ್ರಿಯವಾಗಿವೆ. ಹಲವು ಸಿಬ್ಬಂದಿಗಳಿಗೂ ಸೋಂಕು ತಗುಲಿದ್ದು, ಆಶ್ರಮದ ದೈನಂದಿನ ಚಟುವಟಿಕೆಗಳಿಗೆ ಭಾರೀ ಸಮಸ್ಯೆ ಎದುರಾಗಿದೆ.

ಆಶ್ರಮವಾಸಿಗಳ ಪೈಕಿ ಇನ್ನೂ ಹಲವರ ವರದಿ ಬರಲು ಬಾಕಿ ಇದ್ದು, ರೋಗ ಪೀಡಿತರ ಸಂಖ್ಯೆ ಹೆಚ್ಚುವ ಭೀತಿ ಉಂಟಾಗಿದೆ. ಅಲ್ಲಿನ ಆಶ್ರಮದಲ್ಲಿ ಜಾನುವಾರುಗಳಿದ್ದು, ಅವುಗಳ ಕೆಲಸ ಕಾರ್ಯ ನಿರ್ವಹಿಸುವವರು ಸೋಂಕಿನಿಂದ ಬಳಲುತ್ತಿದ್ದಾರೆ. ಆದುದರಿಂದ ಕಾರ್ಯ ನಿರ್ವಹಿಸಲು ಜನ ಇಲ್ಲ. ಕೋರೋನಾ  ಕಾರಣದಿಂದ ಬೇರೆ ಜನ ಕೂಡ ಲಭ್ಯವಾಗದೆ ಅವುಗಳಿಗೂ ಮೇವಿನ ಕೊರತೆ ಉಂಟಾಗಿದೆ. ಇದರಿಂದ ಆಶ್ರಮದ ಸ್ಥಿತಿಯನ್ನು ಸರಿದೂಗಿಸಲು ಇನ್ನಷ್ಟು ನೆರವಿನ ಅಗತ್ಯವಿದೆ.

ಆಶ್ರಮದ ಪರಿಸ್ಥಿತಿ ಅರಿತ ದಾನಿಗಳು, ಸಂಘ- ಸಂಸ್ಥೆಗಳು ಔಷಧ ಹಾಗೂ ಇತರ ಕೆಲವು ಅಗತ್ಯ ವಸ್ತುಗಳ ನೆರವು ನೀಡಿದ್ದಾರೆ. ಆದರೆ ಸಿಯೋನ್ ಆಶ್ರಮದಲ್ಲಿ ಕೊರೋನಾ ಹೊಡೆತದಿಂದ ಸಂಕಷ್ಟದ ಪರಿಸ್ಥಿತಿ ಮುಂದುವರಿದಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅಕ್ಕಿ, ಬೇಳೆ, ತರಕಾರಿ ಸಹಿತ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾರೆ. ಸಂಘ, ಸಂಸ್ಥೆಗಳು, ದಾನಿಗಳು ಸಹಕಾರ ನೀಡಿದ್ದಾರೆ. ಶಾಸಕರು ಭೇಟಿ ನೀಡಿದ್ದು ನೆರವು ನೀಡುವ ಕುರಿತು ತಿಳಿಸಿದ್ದಾರೆ. ಆಶ್ರಮವು ಆರ್ಥಿಕ ಬಿಕ್ಕಟ್ಟಿನಿಂದಲೂ ಬಳಲುತ್ತಿದೆ. ಆಶ್ರಮವಾಸಿಗಳನ್ನು ಸಲಹುವುದು ನಮ್ಮ ಪ್ರಮುಖ ಕರ್ತವ್ಯ. -ಯು.ಸಿ.ಪೌಲೋಸ್ ಟ್ರಸ್ಟಿ, ಸಿಯೋನ್ ಆಶ್ರಮದ ಮುಖ್ಯಸ್ಥರು ಹೇಳಿದ್ದಾರೆ.

Leave A Reply

Your email address will not be published.