‘ಇದಕ್ಕೆಲ್ಲ ನಮಗೆ ಟೈಮಿಲ್ಲ ಎಂದ ಕೋರ್ಟು ‘ | ‘ನ್ಯಾಯಾಧೀಶರು ಸರ್ವಜ್ಞರಲ್ಲ, ಲಸಿಕೆ ಸಿಗದಿದ್ದರೆ ನಾವೇನು ನೇಣು ಹಾಕಿಕೊಳ್ಳಬೇಕಾ’ ಹೇಳಿಕೆ ವಿರುದ್ಧ ವಕೀಲರ ದೂರಿಗೆ ಪ್ರತಿಕ್ರಿಯೆ
ನ್ಯಾಯಾಂಗದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ದೂರಿ ಬಿಜೆಪಿ ಮುಖಂಡ ಸಿ.ಟಿ. ರವಿ ಹಾಗೂ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ವಿರುದ್ಧ ಕ್ರಮ ಜರುಗಿಸಲು ಕೋರಿ ಕೆಲವು ವಕೀಲರು ಸಲ್ಲಿಸಿರುವ ಇ ಮೇಲ್ ಅರ್ಜಿಗಳ ಕುರಿತು ಹೈಕೋರ್ಟ್ ವಿಶೇಷವಾಗಿ ಪ್ರತಿಕ್ರಿಯಿಸಿದೆ.
ಅಂದು ಲಸಿಕೆಯ ಅಭಾವದ ವಿಷಯದಲ್ಲಿ ಮಾತನಾಡಿದ್ದ ಸಿ.ಟಿ. ರವಿ ‘ನ್ಯಾಯಾಧೀಶರು ಸರ್ವಜ್ಞರಲ್ಲ’ ಎಂದಿದ್ದರು. ಮತ್ತೊಂದು ಕಡೆ ಅದೇ ಲಸಿಕೆ ಅಭಾವದ ವಿಷಯದಲ್ಲಿ ‘ ಲಸಿಕೆ ಉತ್ಪಾದನೆ ಆಗದಿದ್ದರೆ ನಾವೇನು ನೇಣು ಹಾಕಿಕೊಳ್ಳಬೇಕೇ’ ಎಂದು ಪ್ರಶ್ನಿಸಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವಂತೆ ಕೋರಿ ಕೆಲವು ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು.
“ಈ ಅರ್ಜಿಗಳಿಗೆ ಪ್ರತಿಕ್ರಿಯಿಸಲು ನಮಗೆ ಸಮಯವಿಲ್ಲ. ನಾವು ಕೋವಿಡ್ ನಿರ್ವಹಣೆ ವಿಚಾರದಲ್ಲಿ ಸರ್ಕಾರಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡುತ್ತ ಬಂದಿದ್ದೇವೆ. ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿದ್ದೇವೆ. ಎಲ್ಲರೂ ಸಂಯಮ ಕಾಯ್ದುಕೊಳ್ಳಬೇಕು’ ಎಂದಷ್ಟೇ ಹೇಳಿ, ಮುಖ್ಯ ನ್ಯಾಯಮೂರ್ತಿಯಾದ ಎ.ಎಸ್. ಓಕ್ ಅವರು ಈ ವಿಚಾರವನ್ನು ಅಲ್ಲಿಗೇ ಮೊಟಕುಗೊಳಿಸಿದ್ದಾರೆ.