ಆನ್ಲೈನ್ ರಮ್ಮಿ ಜಾಹೀರಾತಿನಲ್ಲಿ ಅಭಿನಯಿಸಿದ್ದಕ್ಕೆ ವಿಷಾದವಿಲ್ಲ ಎಂದ ಸುದೀಪ್ | ನಾಯಕ ನಟ ನಿಜಜೀವನದಲ್ಲೂ ನಾಯಕನಾಗಿ ಇರಬೇಕೆಂದಿಲ್ಲ ಅಲ್ಲವೇ ?!
ಕೆಲ ತಿಂಗಳುಗಳ ಹಿಂದಿನಿಂದ ಸುದೀಪ್ ವಿರುದ್ಧ ಅಹೋರಾತ್ರ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನು ನಡೆಸುತ್ತಿದ್ದಾರೆ. ವಿಷಯ ಇಷ್ಟೇ. ನಟ ಸುದೀಪ್, ಜೂಜಿಗೆ ಉತ್ತೇಜನ ನೀಡುವ ಜಾಹೀರಾತಿನಲ್ಲಿ ನಟಿಸಿದ್ದಾರೆ ಎಂಬುದು ಅವರ ಆಕ್ಷೇಪಣೆ.
ಅದರ ಬಗ್ಗೆ ಇಷ್ಟು ದಿನ ಈ ಬಗ್ಗೆ ಮಾತನಾಡದಿದ್ದ ಸುದೀಪ್, ಇದೀಗ ಯಾರೊಬ್ಬರ ಹೆಸರು ಹೇಳದೆ ತಮ್ಮ ಅಭಿಪ್ರಾಾಯ ಹೇಳಿದ್ದಾರೆ.
ಮಾಧ್ಯಮದೊಟ್ಟಿಗೆ ಕೊರೊನಾ ಸಂಕಷ್ಟದ ಬಗ್ಗೆ ಮಾತನಾಡುತ್ತಾ, ‘ನಾವು ಹಲವಾರು ಮಂದಿಗೆ ಸಹಾಯ ಮಾಡಬೇಕು ಎಂದುಕೊಂಡಿರುತ್ತೇವೆ. ಆದರೆ ನಮಗೂ ಸಹ ಒಮ್ಮೊಮ್ಮೆ ಆರ್ಥಿಕ ಸಮಸ್ಯೆಗಳು ಎದುರಾಗಿಬಿಡುತ್ತವೆ. ನಮಗೆ ಹಣ ನೀಡಬೇಕಾದವರನ್ನು ಸಹ ಹಣ ಕೇಳದ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ’ ಎಂದಿದ್ದಾರೆ ಸುದೀಪ್.
‘ನಾನು ನನ್ನ ಸ್ವಂತ ಹಣದಿಂದಷ್ಟೆ ಜನರಿಗೆ ಸಹಾಯ ಮಾಡುತ್ತಿದ್ದೇನೆ. ನನ್ನ ಚಾರಿಟಿ ಟ್ರಸ್ಟ್‌ಗಳು ಸಹ ನನ್ನ ಸ್ವಂತ ಹಣದಿಂದಷ್ಟೆ ನಡೆಯುತ್ತವೆ. ಯಾರ ಬಳಿಯೂ ಹಣ ಪಡೆವ ಸಂಪ್ರದಾಯ ನಮ್ಮ ಬಳಿ ಇಲ್ಲ’. ನಾನು ಜಾಹೀರಾತು ಮಾಡಿ ಬಂದ ಹಣ, ಯಾವುದೋ ಕಾರ್ಯಕ್ರಮದಲ್ಲಿ ಭಾಗಿಯಾದಾಗ ಬಂದ ಹಣ. ರಿಯಾಲಿಟಿ ಶೋ ನಿಂದ ಬಂದ ಹಣ ಹೀಗೆ ಬಂದ ಹಣ ಬಳಸಿ ನಾನು ಜನರಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದೇನೆ’ ಎಂದರು ಸುದೀಪ್.
ಜಾಹೀರಾತಿನಲ್ಲಿ ಅಭಿನಯಿಸಿದ್ದಕ್ಕೆ ವಿಷಾದವಿಲ್ಲ ಎಂದ ಸುದೀಪ್
‘ನನಗೆ ಜಾಹೀರಾತುಗಳನ್ನು ಮಾಡಿರುವ ಬಗ್ಗೆ ಯಾವುದೇ ವಿಷಾದವಿಲ್ಲ. ಕೆಲವರು ನನ್ನ ವಿರುದ್ಧ ಬಹಳ ಟೀಕೆ ಮಾಡಿದರು. ನಾನೊಬ್ಬನೇ ಸಮಾಜದಲ್ಲಿ ವಿಲನ್ ಎಂಬ ರೀತಿಯಲ್ಲಿ ತೋರ್ಪಡಿಸುವ ಯತ್ನ ಮಾಡಿದರು. ಫೇಸ್‌ಬುಕ್ ಲೈವ್‌ಗಳನ್ನು ಯಾವ ಹಂತದ ವರೆಗೆ ಬಳಸಬೇಕಾಗಿತ್ತೊ ಆ ಹಂತಕ್ಕೆ ಬಳಸಿದರು. ಆದರೆ ಇದರ ಬಗ್ಗೆ ನನಗೆ ಬೇಸರವೇನೂ ಇಲ್ಲ. ಆ ಹಣ ಬಂದಿರದೇ ಇರದಿದ್ದರೆ ನಾನು ಇಷ್ಟು ಜನಕ್ಕೆ ಸಹಾಯ ಮಾಡಲು ಆಗುತ್ತಿರಲಿಲ್ಲ’ ಎಂದಿದ್ದಾರೆ ಸುದೀಪ್.
ಆದ್ರೆ ಬುದ್ದಿವಂತ ಸುದೀಪ್ ಗೆ ಒಂದು ವಿಷಯ ಯಾಕೆ ಅರ್ಥ ಆಗ್ತಿಲ್ಲ ?! ಸುದೀಪ್ ಅವರು, ತಾವು ಕೆಟ್ಟ ಜಾಹೀರಾತಿನಿಂದ ಪಡೆದ ಹಣದಿಂದ ಮಾಡುವ ಸಹಾಯ ಎಷ್ಟು ಗೌಣ ಎಂಬುದು ಯಾಕೆ ಸುದೀಪ್ ಗೆ ಅರ್ಥ ಆಗಲ್ಲ. ಸುದೀಪ್ ನಟಿಸಿದ ರಮ್ಮಿ ಸರ್ಕಲ್ ಜಾಹೀರಾತು ನೋಡಿ ಪ್ರಭಾವಿತರಾಗಿ ಅದೆಷ್ಟು ಜನ ದುಡ್ಡು ಕಳೆದುಕೊಂಡಿದ್ದಾರೆ ಎಂಬ ಪರಿವೆ ಅವರಿಗೆ ಇದೆಯಾ. ಆನ್ಲೈನ್ ನಲ್ಲಿ ದುಡ್ಡು ಮಡುವ ಆಸೆಗೆ ಬಿದ್ದು ಹಲವು ಕುಟುಂಬಗಳು ಬೀದಿಗೆ ಬಿದ್ದಿವೆ. ಎಷ್ಟು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಸುದೀಪ್ ಮಾಡುವ ಸಹಾಯ ಯಾವ ಮೂಲೆಗೆ ?! ಅಲ್ಲಿಂದ ಬೇರೆ ಆತನಿಗೆ ಅಂತಹ ಜಾಹೀರಾತಿನಲ್ಲಿ ಭಾಗವಹಿಸಿದ್ದಕ್ಕೆ ಒಂಚೂರು ಪಶ್ಚಾತ್ತಾಪವಿಲ್ಲ. ಪಶ್ಚಾತಾಪ ಬಿಡಿ ಒಂದಿನಿತೂ ವಿಷಾದವಿಲ್ಲ ಎಂದಿದ್ದಾರೆ ಸುದೀಪ್. ನಾಯಕ ನಟ ನಿಜಜೀವನದಲ್ಲೂ ನಾಯಕನಾಗಿ ಇರಬೇಕೆಂದಿಲ್ಲ ಅಲ್ಲವೇ ?!