ಕಣ್ಣಿಗೆ ಕಾಣದ ವೈರಸ್ ಮನುಕುಲವನ್ನೇ ನಡುಗಿಸುತ್ತಿದೆ..ಮೂರು ದಿನದ ಬಾಳಿನಲ್ಲಿ ಅಹಂಕಾರವೇಕೆ?..ನಮಗಾಗಿ ಕಾಯುವವರ ಹಿತಕ್ಕಾಗಿ ಪ್ರಾರ್ಥಿಸೋಣವೇ?
ಲಾಕ್ ಡೌನ್ ನಿಂದಾಗಿ ಬದಲಾಗುತ್ತಿದೆ ಜನಜೀವನ, ಆದರೆ ಬದಲಾಗದೆ ಇದ್ದ ಮನುಕುಲವನ್ನು ಬದಲಾಗುವಂತೆ ಮಾಡಿದ್ದು ಮಾತ್ರ ಮಹಾಮಾರಿ ಕೊರೋನ ಎಂಬುವುದೇ ಸತ್ಯ.ಈ ಸೋಂಕು ಹೇಗೆ ಅಪ್ಪಳಿಸುತ್ತಿದೆ ಎಂದು ನಮಗೆ ಹೇಳಲು ಅಸಾದ್ಯ. ಕೊರೋನವೆಂಬ ಕಣ್ಣಿಗೆ ಕಾಣದ ಶಕ್ತಿಯೊಂದು ಆಕ್ರಮಿಸುತ್ತಾ ಜೀವಗಳನ್ನು ಬಲಿ ತೆಗೆದುಕೊಂಡು ಮುಂದೆ ಮುಂದೆ ಸಾಗುತ್ತಿದೆ.ಆದರೂ ಜನರು ತಮಗೆ ಬೇಕಾದ ಹಾಗೆ ಸಿಕ್ಕಸಿಕ್ಕಲ್ಲಿ ತಿರುಗಾಡುತ್ತಿದ್ದಾರೆ. ಒಟ್ಟಿನಲ್ಲಿ ಜನರ ಸೋಮಾರಿತನದ ಕಾರಣದಿಂದಲೇ ಸೋಂಕು ಹರಡಬಾರದೆಂಬ ಮುಂಜಾಗ್ರತ ಕ್ರಮದ ಜೊತೆಗೆ ಲಾಕ್ ಡೌನ್ ಜಾರಿಗೆ ತರಬೇಕಾದ ಪರಿಸ್ಥಿತಿ ಇಡೀ ರಾಜ್ಯ, ರಾಷ್ಟ್ರಕ್ಕೆ ಬಂದೊದಗಿದೆ .
ಒಂದನೇ ಅಲೆ ಮುಗಿಯಿತೆಂದು ನಿಟ್ಟುಸಿರು ಬಿಡುವಾಗ ಎರಡನೆಯ ಅಲೆಯು ತನ್ನ ಹಾಜರಿ ತೋರಿದೆ. ಈ ವೈರಾಣು ದೊಡ್ಡ ದೊಡ್ಡ ನಗರದಲ್ಲಿ ಬಿಂದಾಸ್ ಆಗಿದ್ದ, ಮೋಜು ಮಸ್ತಿ-ಬಿಡುವಿಲ್ಲದ ಕೆಲಸದಲ್ಲಿ ಮಗ್ನರಾಗಿದ್ದ ಜನರಿಗೆ ತಮ್ಮ ಊರಿನ ಪರಿಚಯ ಮಾಡಿಕೊಟ್ಟಿದೆ. ಎಷ್ಟೋ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಒಂದೊತ್ತಿನ ಊಟಕ್ಕೂ ಪರದಾಟ ನಡೆಸುವುದು ಒಂದುಕಡೆಯಾದರೆ,ಕುಟುಂಬಕ್ಕೆ ಆಸರೆಯಾದ ಸದಸ್ಯನನ್ನು ಕಳೆದುಕೊಂಡು ಮರುಗುತ್ತಿರುವ ಅದೆಷ್ಟೋ ಜೀವಗಳು ಇಂದು ನಮ್ಮ ಕಣ್ಣಮುಂದೆಯೇ ಕಾಣಸಿಗುತ್ತಾರೆ.
ವರ್ತಮಾನದಲ್ಲಿ ಎತ್ತ ನೋಡಿದರೂ ಲಾಕ್ ಡೌನ್ ಎಂಬ ಪದವೇ ಕೇಳುತ್ತಿದೆ. ಮೊದಮೊದಲು ಅಪರೂಪವಾಗಿದ್ದ ಈ ಪದ ಸದ್ಯಕ್ಕೆ ನಾಲಗೆಯಂಚಿನಲ್ಲಿ ನಲಿದಾಡುತ್ತಿದೆ.ಕೊರೋನಾ ರೋಗದ ಸರಪಳಿಯನ್ನು ತುಂಡರಿಸಲು ಇದು ಅನಿವಾರ್ಯ ಆದರೂ ಲಾಕ್ಡೌನ್ನಿಂದ ಮಾತ್ರ ಕೋವಿಡ್ ತಡೆಗಟ್ಟಲು ಸಾಧ್ಯವಿಲ್ಲ ಅದಕ್ಕೆ ಸರಿಯಾದ ವ್ಯಾಕ್ಸಿನೇಷನ್ ಜನಸಾಮಾನ್ಯರಿಗೆ ದೊರೆಯಬೇಕು. ಹಾಗೂ ಕೊರೋನವನ್ನು ತಡೆಗಟ್ಟಲು ಸರ್ಕಾರದ ನಿಯಮಗಳನ್ನು ಪಾಲಿಸುವುದು ,ಮಾಸ್ಕ್ ಹಾಕುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು ಕಾರಣವಿಲ್ಲದೆ ಮನೆಯಿಂದ ಹೊರ ಬಾರದಿರುವುದು ಜನಸಾಮಾನ್ಯರಾದ ನಮ್ಮೆಲ್ಲರ ಕರ್ತವ್ಯ.
ಕೋವಿಡ್ ಲಕ್ಷಣವೇನಾದರೂ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ ಎಂದು ಪದೇ ಪದೇ ಹೇಳುತ್ತಿದ್ದರೂ, ಅನೇಕ ಮಾಧ್ಯಮ ಪ್ರಸಾರ ಮಾಡುತ್ತಿದ್ದರೂ ಮತಿಗೆಟ್ಟ ಮನುಕುಲಕ್ಕೆ ಅರ್ಥವಾಗದೆ ‘ಇಂಗು ತಿಂದ ಮಂಗ’ನಂತೆ ಆಡುತ್ತಿರುವುದು ಗಮನಕ್ಕೆ ಬರುತ್ತಿದೆ.ಮನೆಯಲ್ಲಿ ಅಂತಹ ರೋಗದ ಲಕ್ಷಣವಿದ್ದರೆ ಅಥವಾ ಸೋಂಕಿತರಿದ್ದರೆ ಅವರಿಗೆ ದಯವಿಟ್ಟು ಮನೋಬಲವನ್ನು ತುಂಬಿ ಅವರನ್ನು ಅಸ್ಪೃಶ್ಯರಂತೆ ಕಾಣದಿರಿ,ನಾವು ರೋಗದ ವಿರುದ್ಧ ಹೋರಾಡಬೇಕೇ ಹೊರತು ರೋಗಿಯ ವಿರುದ್ಧವಲ್ಲ. ಔಷಧಿಯಷ್ಟೇ ಪ್ರಭಾವುಳ್ಳದ್ದು ನಮ್ಮ ಆತ್ಮಸ್ಥೈರ್ಯ. ರೋಗದ ವಿರುದ್ಧ ಹೋರಾಡುವ ಛಲವಿದ್ದರೆ ಅರ್ಧ ಕಾಯಿಲೆಯಿಂದ ಹೊರಬಂದಂತೆ.
ಕೋವಿಡ್ ನ ಭೀಕರತೆ ಇನ್ನಾದರೂ ಈ ಮನುಷ್ಯ ಕುಲಕ್ಕೆ ಅರ್ಥವಾಗಬೇಕು. ಜಾತಿ, ಧರ್ಮ, ಮತ ,ಮೇಲು-ಕೀಳು ಎಂಬ ಬೇಧ-ಭಾವ ಮಾಡುವ ನಮ್ಮ ಸಮಾಜವು ಇನ್ನಾದರೂ ಅರ್ಥಮಾಡಿಕೊಳ್ಳಬೇಕು.ಮಾನವನೊಂದು ಮೂಳೆ ಮಾಂಸದ ತುಂಡು ಈ ನಡುವೆ ಮೂರು ದಿನದ ಬಾಳು. ಈ ಬಾಳಿನಲ್ಲಿ ಯಾವುದೂ ಶಾಶ್ವತವಲ್ಲ, ಪ್ರಕೃತಿಯೆದುರು ಎಲ್ಲವೂ ತೃಣ ಸಮಾನ,ಮತ್ತೇತಕೆ ಬಡವ-ಶ್ರೀಮಂತ ಅನ್ನುವ ಬೇಧಭಾವ ?ಕೋಟಿ-ಕೋಟಿ ಹಣವಿದ್ದರೂ ಸತ್ತಾಗ ಅನಾಥನಾಗುತ್ತಾನೆ. ಕೊನೆಗೆ ಅವನು ಸಂಪಾದಿಸಿದ ಹೆಸರು ,ಹಣ ,ನೆಂಟರು ಗೆಳೆಯರು ಯಾರೂ ಇರುವುದಿಲ್ಲ .ತಾನೇ ಎಲ್ಲವೂ ಎಂದು ಬೀಗುತ್ತಿದ್ದ ಮನುಜ ಮಹಾಮಾರಿಯಿಂದಾಗಿ ಸದ್ದಿಲ್ಲದೇ ಯಾರೋ ಅನ್ಯರಿಂದ ಮಣ್ಣು ಹಾಕಿಸಿಕೊಳ್ಳುತ್ತಿರುವುದನ್ನು ಕಂಡಾಗ ಈ ಕೋರೋನ ಮನುಕುಲಕ್ಕೆ ಒಂದು ಪಾಠವಾಗಿದೆ ಎಂಬುವುದು ಅರಿವಾಗಿದೆ.
ಕೋವಿಡ್ ನ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು, ರೋಗ ಬಂದಮೇಲೆ ಜಾಗೃತರಾಗುವುದಕ್ಕಿಂತ ,ಮೊದಲೇ ಎಚ್ಚರ ವಹಿಸಕೊಂಡು,ನಮಗಾಗಿ ಹಗಲು-ರಾತ್ರಿ ಮನೆ ಮಠ ಬಿಟ್ಟು ಹೋರಾಡುತ್ತಿರುವ ವೈದ್ಯರು ಪೊಲೀಸರು ಹಾಗೂ ಎಲ್ಲಾ ಕೊರೋನ ವಾರಿಯರ್ ಗಳ ಹಿತಕ್ಕಾಗಿ ಪ್ರಾರ್ಥಿಸೋಣ. ದಿನನಿತ್ಯವೂ ಅವರು ತಮ್ಮ ಪ್ರಾಣದೊಡನೆ ಹೋರಾಡಿ ಬೇರೆಯವರ ಪ್ರಾಣ ಉಳಿಸುವ ಕಾರ್ಯಕ್ಕೆ ನಮ್ಮ ನಮನಗಳನ್ನು ಸಲ್ಲಿಸೋಣ.
“ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ” ಎಂಬ ಧ್ಯೇಯ ವಾಕ್ಯದೊಂದಿಗೆ ಸಜ್ಜನರಾಗಿ ಒಗ್ಗಟ್ಟಿನಲ್ಲಿ ಮಹಾಮಾರಿಯ ಬಗ್ಗು ಬಡಿಯೋಣ. ಕೋವಿಡ್ 19 ಎಂಬ ಕಣ್ಣಿಗೆ ಕಾಣದ ವೈರಸ್ ನ್ನು ಕೊನೆಗಾಣಿಸಲು, ನಮ್ಮನ್ನು ನಾವೇ ರಕ್ಷಿಸಿಕೊಳ್ಳೋಣ.
ಸುಷ್ಮಾ ಮುಳುಗಾಡು✍….