ಚಕ್ರಗಳಿಗೆ ಇರಿಸಿದ ಲಿಂಬೆ ಹಣ್ಣು ದಾಟಿಸಲು ಲಾರಿ ಮುಂದಕ್ಕೆ ಹೊರಟ ಸಂದರ್ಭ ಚಲಿಸಿದ ಲಾರಿಯ ಚಕ್ರದಡಿ ಸಿಕ್ಕಿ 5 ರ ಬಾಲಕ ಮೃತ
![](https://hosakannada.com/wp-content/uploads/2021/05/IMG_20210511_230528.jpg)
ಅಮವಾಸ್ಯೆ ಪೂಜೆ ಮುಗಿಸಿದ ಬಳಿಕ ಚಕ್ರಗಳಿಗೆ ಇರಿಸಿದ ಲಿಂಬೆ ಹಣ್ಣು ದಾಟಿಸಲು ಲಾರಿ ಮುಂದಕ್ಕೆ ಹೊರಟ ಸಂದರ್ಭ ಮುಂದೆ ಚಲಿಸಿದ ಲಾರಿಯ ಚಕ್ರದಡಿ ಹುಡುಗನೊಬ್ಬ ಸಿಕ್ಕಿ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಈ ದುರ್ಘಟನೆ ಖಾನಾಪುರ ತಾಲ್ಲೂಕಿನ ಪ್ರಭುನಗರ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಗ್ರಾಮದ ಆದರ್ಶ ರಮೇಶ ಹರಿಜನ ಮೃತ ಬಾಲಕ.
ಇಂದು ಅಮವಾಸ್ಯೆ ಪೂಜೆ ನಿಮಿತ್ತ ಆದರ್ಶನ ಸೋದರ ಸಂಬಂಧಿಯು ಆತನ ಲಾರಿಯನ್ನು ಚೆನ್ನಾಗಿ ತೊಳೆದು ಪೂಜೆ ಮಾಡಿ ಸಿಂಗರಿಸಿದ್ದ. ಪೂಜೆ ಕೂಡ ಮುಗಿಸಿದ್ದರು. ಲಾರಿಯ ಟೈರಿನ ಮುಂದೆ ನಿಂಬೆಹಣ್ಣು ಇರಿಸಿತ್ತು. ಪೂಜೆ ಮುಗಿಸಿ ಲಾರಿಯನ್ನು ಕೆಲ ಅಡಿಗಳಷ್ಟು ಮುಂದೆ ಚಲಾಯಿಸಲು ಚಾಲಕ ಸಂಬಂಧಿ ಲಾರಿ ಏರಿದ್ದ. ಆ ಸಂದರ್ಭದಲ್ಲಿ ಅಲ್ಲೆಲ್ಲೋ ಆಟವಾಡುತ್ತಿದ್ದ 5 ರ ಪ್ರಾಯದ ಆದರ್ಶ, ಲಾರಿ ಮುಂದಡಿಯಿಡುವಾಗ ಆಡುತ್ತಾ ಲಾರಿಯ ಮುಂದಕ್ಕೆ ಬಂದಿದ್ದಾನೆ. ಹಾಗೆ ಬಾಲಕ ಆದರ್ಶನ ಮೇಲೆ ಲಾರಿ ಹರಿದಿದ್ದರಿಂದ ಆತ ಅಲ್ಲೇ ಮೃತಪಟ್ಟಿದ್ದಾನೆ.
ನಂತರ ಬಾಲಕನ ಮರಣೋತ್ತರ ಪರೀಕ್ಷೆಯನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನೆರವೇರಿಸಲಾಗಿದ್ದು, ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.