ಕೊರೋನಾ ಪೀಡಿತ ತಂದೆಗೆ ನೀರು ಕುಡಿಸಲು ಬಿಡದ ಅಮ್ಮನೊಂದಿಗೆ ಸೆಣಸಾಡಿದ ಮಗಳು !!
ಕೊರೋನಾ ಸೋಂಕಿತ ತಂದೆ ನೆಲದಲ್ಲಿ ಬಿದ್ದು ಒದ್ದಾಡುತ್ತಿದ್ದಂತೆ ಅವರಿಗೆ ನೀರು ಕೊಡಲು ಮುಂದಾದ ಮಗಳನ್ನು ಆಕೆಯ ತಾಯಿಯೇ ತಡೆಹಿಡಿದ ಘಟನೆ ನಡೆದಿದೆ.
ಮಗಳನ್ನು ಕೊರೋನಾ ಸೋಂಕಿತರಿಂಂದ (ತಂದೆಯಿಂದ) ದೂರ ಇರಿಸಲು ತಾಯಿ ಪಡುವ ಕಷ್ಟ ಒಂದೆಡೆಯಾದರೆ, ಅತ್ತ ತಂದೆಯನ್ನು ಕೇರ್ ಮಾಡಲು ಮಗಳು ಪರದಾಡುವ ಕರುಣಾಜನಕ ಸ್ಥಿತಿ ಅಲ್ಲಿ ಸೃಷ್ಟಿಯಾಗಿತ್ತು.
ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ, ಜಿ ಸಿಗಡಂ ಮಂಡಲದ, ಕೊಯನಪೇಟ ಮೂಲದ ಅಸಿರನೈಡು(50) ಕೊರೊನಾ ಸೋಂಕಿಗೆ ತುತ್ತಾಗಿ ತನ್ನ ಮನೆಯಲ್ಲಿ ಹೆಂಡತಿ ಮತ್ತು ಮಕ್ಕಳ ಮುಂದೆ ನರಳಾಡುತ್ತಿದ್ದ. ತನ್ನ ತಂದೆ ಸೋಂಕಿನ ತೀವ್ರತೆಯಿಂದ ಉಸಿರಾಡಲಾಗದೆ ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದಂತೆ ಮಗಳು ತಂದೆಯ ನರಳಾಟ ನೋಡಲಾಗದೆ ಆತನಿಗೆ ನೀರು ಕೊಡಲು ಮುಂದಾಗುತ್ತಾಳೆ. ಆದರೆ ತಾಯಿಗೆ ಧರ್ಮಸಂಕಟ. ಅತ್ತ ಮಗಳನ್ನು ಸೋಂಕಿನಿಂದ ರಕ್ಷಿಸುವ ಜವಾಬ್ದಾರಿ ತಾಯಿಗೆ ಇದೆ. ಇನ್ನೊಂದು ಕಡೆ ಗಂಡನ ಅಸಹಾಯಕ ಪರಿಸ್ಥಿತಿ. ಕೊನೆಗೆ ಆಕೆ ಮಗಳ ಕೈ ಹಿಡಿದುಕೊಂಡು ತನ್ನ ಗಂಡನಿಗೆ ನೀರು ಕೊಡಲು ಬಿಡದೆ ಮಗಳ ರಕ್ಷಣೆಗೆ ಮುಂದಾಗಿ ತಾಯಿ ಪ್ರೀತಿ ಮೆರೆದಿದ್ದಾಳೆ !
ಆದರೆ ಅಪ್ಪನ ಮೇಲಿನ ಪ್ರೀತಿಯಿಂದ ಮಗಳು ತಾಯಿಯ ಕೈಯಿಂದ ಕೊಸರಿಕೊಂಡು, ತಾಯಿಯ ಬಳಿಯಿದ್ದ ನೀರಿನ ಬಾಟಲ್‍ನ್ನು ಕಸಿದುಕೊಂಡು ತಂದೆಗೆ ನೀರು ಕೊಟ್ಟು ಅಳುತ್ತಿರುವ ದೃಶ್ಯ ನೋಡುಗರ ಕಣ್ಣಲ್ಲಿ ನೀರು ತರಿಸಿದೆ.
ಕೊನೆಗೂ ಆಕೆಯ ತಂದೆ ಕೊರೊನಾದಿಂದ ಮರಣ ಹೊಂದಿದ್ದಾನೆ. ಅಸಿರನೈಡು ವಿಜಯವಾಡದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಮೊದಲು ಆತನಿಗೆ ಸೋಂಕು ತಗಲಿತ್ತು. ಬಳಿಕ ಅವರ ಇಡೀ ಕುಟುಂಬಕ್ಕೆ ಕೊರೊನಾ ಸೋಂಕು ವ್ಯಾಪಿಸಿತ್ತು. ಕುಟುಂಬದವರೆಲ್ಲ ಕೊರೊನಾದಿಂದ ಚೇತರಿಕೆ ಕಂಡರೂ ಕೂಡ ಅಸಿರನೈಡು ಅವರಿಗೆ ಸೋಂಕು ಹೆಚ್ಚಾಗಿದೆ. ಕೊನೆಗೆ ಉಸಿರಾಡಲಾಗದೆ ಮನೆಯವರ ಮುಂದೆಯೇ ಕೊನೆಯುಸಿರೆಳೆದಿದ್ದಾರೆ.
ಈ ಘಟನೆಯ ಮೂಲಕ ಕೊರೋನಾ ಮನುಷ್ಯ ಸಂಬಂಧಗಳನ್ನು ಮತ್ತೆ ಪ್ರಶ್ನಿಸಿದೆ.