ನೀಟ್ ಪರೀಕ್ಷೆ ಮತ್ತೆ ನಾಲ್ಕು ತಿಂಗಳು ಮುಂದೂಡಿದ ಕೇಂದ್ರ ಸರ್ಕಾರ

ದೇಶದಲ್ಲಿ ಕೊರೋನ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಡೆಯುವ ಈ ಬಾರಿಯ ರಾಷ್ಟ್ರೀಯ ಪ್ರವೇಶ ಪರೀಕ್ಷೆಯನ್ನು 4 ತಿಂಗಳು ಮುಂದೂಡಿಕೆ ಮಾಡಿದೆ.

ಈ ಕುರಿತು ಹೇಳಿಕೆ ನೀಡಿದ ಕೇಂದ್ರ ಸರ್ಕಾರ, ಕೋವಿಡ್-19 ವಿರುದ್ಧ ಹೋರಾಡಲು ವೈದ್ಯಕೀಯ ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ, ನೀಟ್ ಪಿಜಿ ಪರೀಕ್ಷೆಯನ್ನು ಕನಿಷ್ಠ 4 ತಿಂಗಳವರೆಗೆ ಮುಂದೂಡಲಾಗುವುದು ಎಂದು ಮಾಹಿತಿ ನೀಡಿದೆ.

ಅಲ್ಲದೆ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಟೆಲಿಕನ್ಸಲ್ಟೇಷನ್ ಹಾಗೂ ಸಣ್ಣ ಪ್ರಮಾಣದ ಲಕ್ಷಣಗಳಿರುವ ಕೋವಿಡ್ ಪ್ರಕರಣಗಳ ಮೇಲ್ವಿಚಾರಣೆಗೆ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ ಮತ್ತು ಹಿರಿಯ ವೈದ್ಯರು ಮತ್ತು ನರ್ಸ್ ಗಳ ಮೇಲ್ವಿಚಾರಣೆಯಲ್ಲಿ ಬಿಎಸ್ಸಿ ಮತ್ತು ಜಿಎನ್‍ಎಂ ಅರ್ಹ ನರ್ಸ್ ಗಳನ್ನು ಪೂರ್ಣ ಪ್ರಮಾಣದ ಕೋವಿಡ್ ನರ್ಸಿಂಗ್ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವ ಕುರಿತು ಈಗಾಗಲೇ ಪ್ರಧಾನಿ ಇಂಗಿತ ತೋರಿದ್ದಾರೆ ಎಂದು ತಿಳಿದುಬಂದಿದೆ.

ಈ ಮೊದಲು ಏಪ್ರಿಲ್ 18 ರಂದು ನೀಟ್ ಪರೀಕ್ಷೆ ನಿಗದಿಯಾಗಿತ್ತು. ನಂತರ ಕೊರೊನಾ ಪ್ರಕರಣಗಳ ಸಂಖ್ಯೆ ದೇಶದಲ್ಲಿ ಹೆಚ್ಚಾದ ಕಾರಣ ಕೇಂದ್ರ ಸರ್ಕಾರದಿಂದ ಮುಂದೂಡಲಾಗಿತ್ತು. ಇದೀಗ ಮತ್ತೆ 4 ತಿಂಗಳುಗಳ ಕಾಲ ಇದು ಮುಂದೂಡಿಕೆಯಾಗಿದೆ.

Leave A Reply

Your email address will not be published.