ತಾನು ಇನ್ನು ಜೀವನದಲ್ಲಿ ನೋಡುವುದು ಏನೂ ಇಲ್ಲ ಎಂದು ತನ್ನ ಐಸಿಯು ಬೆಡ್ ಬೇರೊಬ್ಬರಿಗೆ ನೀಡಿ ಮನೆಗೆ ನಡೆದ 85 ರ ಹರೆಯದ ಆರೆಸ್ಸೆಸ್ ಕಾರ್ಯಕರ್ತ

85 ವರ್ಷದ ಕೊರೋನಾ ಸೋಂಕಿತ ವೃದ್ಧರೊಬ್ಬರು, ತಾನು ಇನ್ನು ಜೀವನದಲ್ಲಿ ನೋಡುವುದು ಏನೂ ಇಲ್ಲ ಎಂದು ತನ್ನ ಐಸಿಯು ಬೆಡ್ ಬೇರೊಬ್ಬ ‘ ಅರ್ಹ ‘ ರೋಗಿಗೆ ಬಿಟ್ಟುಕೊಟ್ಟು ಮನೆಗೆ ತೆರಳಿದ ಘಟನೆ ನಡೆದಿದೆ.

ಆರ್‌ಎಸ್‌ಎಸ್ ಸ್ವಯಂಸೇವಕರಾಗಿರುವ ನಾರಾಯಣ ಭಾವುರಾವ್ ದಾಭಾಡ್ಕರ್ ಅವರಿಗೆ ಇತ್ತೀಚೆಗೆ ಕೋವಿಡ್ ಸೋಂಕು ತಗುಲಿತ್ತು. ಭಾರೀ ಪ್ರಯತ್ನದ ಬಳಿಕ ಅವರನ್ನು ನಾಗಪುರದ ಇಂದಿರಾಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ವೇಳೆ, 40 ವರ್ಷ ವಯಸ್ಸಿನ ಮಹಿಳೆಯೊಬ್ಬರು ತಮ್ಮ ಪತಿಗೆ ಹಾಸಿಗೆ ದೊರೆಯದೆ ಕಂಗಾಲಾಗಿ ಕಣ್ಣೀರು ಕೆಡವುತ್ತಾ ಮೂಲೆಯಲ್ಲಿ ಬಿಕ್ಕುತ್ತಿರುವುದು ಈ ವೃದ್ಧ ರೋಗಿ ನಾರಾಯಣ ಅವರಿಗೆ ಕೇಳಿಸಿದೆ.

ಇದನ್ನು ಕಂಡು ಮರುಕಪಟ್ಟ ಅವರು, ಆಸ್ಪತ್ರೆ ಸಿಬ್ಬಂದಿಯನ್ನು ಕರೆದು,ನನಗೀಗ 85 ವರ್ಷ ವಯಸ್ಸು. ನಾನಂತೂ ಜೀವನದಲ್ಲಿ ಎಲ್ಲವನ್ನೂ ಅನುಭವಿಸಿದ್ದೇನೆ. ಇಷ್ಟು ಸಾಕು ನನಗೆ. ಅವರ ಮಕ್ಕಳು ಇನ್ನೂ ಚಿಕ್ಕವರು. ಈಗ ಆ ಮಹಿಳೆಯ ಪತಿ ಸತ್ತರೆ ಅವರ ಮಕ್ಕಳು ಅನಾಥರಾಗುತ್ತಾರೆ. ನನಗಿಂತ ಬದುಕಲು ಅವರು ಜಾಸ್ತಿ ಅರ್ಹರು. ಆತನಿಗೆ ಮಾಡಲು ಇನ್ನೂ ಈ ಭೂಮಿಯ ಮೇಲೆ ಕೆಲಸ ಇದೆ, ಕರ್ತವ್ಯ ಮಾಡಲಿಕ್ಕಿದೆ. ಅವರ ಜೀವ ಉಳಿಸುವುದು ನನ್ನ ಕರ್ತವ್ಯ ಎಂದು ಬೆಡ್ ಬಿಟ್ಟುಕೊಡುವ ಮುನ್ನ ಹೇಳಿದ್ದರು.

ನಂತರ ತನ್ನ ಹಾಸಿಗೆಯನ್ನು ಅವರಿಗೆ ಬಿಟ್ಟುಕೊಟ್ಟುಮನೆಯವರನ್ನು ಒಪ್ಪಿಸಿ ಮನೆಗೆ ನಡೆದಿದ್ದಾರೆ. ಈ ಕುರಿತು ಸ್ವಯಂ ದೃಢೀಕರಣ ನೀಡುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ಕೇಳಿಕೊಂಡಾಗ, ‘ನನಗೆ ನೀಡಿದ್ದ ಹಾಸಿಗೆಯನ್ನು ಸ್ವ ಇಚ್ಛೆಯಿಂದ ಮತ್ತೊಬ್ಬ ಸೋಂಕಿತರಿಗೆ ನೀಡುತ್ತಿದ್ದೇನೆ’ ಎಂದು ಬರೆದು ಹಾಸಿಗೆ ಬಿಟ್ಟುಕೊಟ್ಟಿದ್ದರು.

ಆವಾಗಲೇ ವೃದ್ಧ ನಾರಾಯಣ್ ಭಾವುರಾವ್ ದಾಭಾಡ್ಕರ್ ಅವರ ಆಮ್ಲಜನಕದ ಮಟ್ಟ ಕುಸಿಯುತ್ತಲೇ ಇದ್ದರೂ ವೈದ್ಯರ ಸಲಹೆಯನ್ನೂ ತಿರಸ್ಕರಿಸಿದ ಅವರು ಮನೆಗೆ ಕಳುಹಿಸುವಂತೆ ಕೇಳಿಕೊಂಡರು. ಇದಾಗಿ ಕೆಲವು ಗಂಟೆಗಳಲ್ಲಿ ಅವರನ್ನು ಮನೆಗೆ ಕರೆ ತರಲಾಗಿತ್ತು. ಮನೆಗೆ ಕರೆತಂದ ದಿನದ ಒಳಗೆ ಆತ ಮೃತಪಟ್ಟಿದ್ದಾರೆ.

ಆರ್‌ಎಸ್‌ಎಸ್ ಸ್ವಯಂಸೇವಕರಾಗಿರುವ ನಾರಾಯಣ ದಾಭಾಡ್ಕರ್ ಅವರ ನಿಧನಕ್ಕೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂತಾಪ ಸೂಚಿಸಿದ್ದಾರೆ. ಹಾಸಿಗೆ ಬಿಟ್ಟುಕೊಟ್ಟು ಔದಾರ್ಯ ಮೆರೆದ ಅವರ ಮಹತ್ಕಾರ್ಯವನ್ನು ಶ್ಲಾಘಿಸಿ ಟ್ವಿಟ್ ಮಾಡಿದ್ದಾರೆ.

Leave A Reply

Your email address will not be published.