ರಷ್ಯಾದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ಮೇ 1 ರಂದು ಭಾರತದಲ್ಲಿ ಲಭ್ಯ
ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆಯ ಮೊದಲ ಬ್ಯಾಚ್ ಮೇ 1 ರಂದು ಭಾರತಕ್ಕೆ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಷ್ಯಾದ ಪ್ರತಿನಿಧಿಯೊಬ್ಬರು ಸ್ಪುಟ್ನಿಕ್ ವಿ ಯ ಮೊದಲ ಬ್ಯಾಚ್ ಅನ್ನು ಮೇ 1, 2021 ರಂದು ಭಾರತಕ್ಕೆ ತಲುಪಿಸಲಾಗುವುದು ಎಂದು ಹೇಳಿದ್ದಾರೆ.
ಆದರೂ, ಭಾರತಕ್ಕೆ ನೀಡುವ ಸ್ಪುಟ್ನಿಕ್ ವಿ ಡೋಸೇಜ್ಗಳ ವಿವರ ಮತ್ತು ಎಷ್ಟು ಪ್ರಮಾಣದ ಲಸಿಕೆಗಳನ್ನು ನೀಡಲಾಗುತ್ತದೆ ಎಂಬ ಬಗ್ಗೆ ಈಗ ಯಾವುದೇ ಮಾಹಿತಿ ಇಲ್ಲ.
ಭಾರತೀಯ ಔಷಧ ಮಹಾ ನಿಯಂತ್ರಣಾಲಯ ತಜ್ಞರ ಸಮಿತಿ ಸ್ಪಟ್ನಿಕ್ -ವಿ ಲಸಿಕೆಯ ಗುಣಮಟ್ಟ ಸೇರಿದಂತೆ ವಿವಿಧ ವಿಷಯಗಳನ್ನು ವರದಿಯನ್ನು ಪರಿಶೀಲಿಸಿ ಅಂತಿಮವಾಗಿ ದೇಶದಲ್ಲಿ ತುರ್ತು ಬಳಕೆಗೆ ಅನುಮತಿ ನೀಡಿದೆ. ದೇಶದಲ್ಲಿ ಕೋವಿಡ್ ಸೋಂಕಿನ ವಿರುದ್ದದ ಹೋರಾಟಕ್ಕೆ ನೀಡಲಾಗುತ್ತಿರುವ ಮೂರನೇ ಲಸಿಕೆ ಇದಾಗಿದ್ದು, ಇದು ಶೇ. 90 ರಷ್ಟು ಪರಿಣಾಮಕಾರಿಯಾಗಿ ಇರಲಿದೆ ಎನ್ನಲಾಗಿದೆ.
ಈಗಾಗಲೇ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಝೆನಕಾ ಅಭಿವೃದ್ಧಿ ಪಡಿಸಿರುವ “ಕೋವಿಶೀಲ್ಡ್”, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಭಾರತ್ ಬಯೋಟೆಕ್ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ “ಕೋವಾಕ್ಸಿನ್” ಲಸಿಕೆ ದೇಶದಲ್ಲಿ ಕೋವಿಡ್ ಸೋಂಕಿತರಿಗೆ ನೀಡಲಾಗುತ್ತಿದೆ.
ಹೈದರಾಬಾದಿನ ಡಾ. ರೆಡ್ಡೀಸ್ ಪ್ರಯಾಗಾಲಯ ರಷ್ಯಾದ ನೇರ ಹೂಡಿಕೆ ನಿಧಿ ಅಡಿಯಲ್ಲಿ ಅಭಿವೃದ್ಧಿ ಪಡಿಸಿರುವ ಸ್ಪುಟ್ನಿಕ್- ವಿ ಲಸಿಕೆಯನ್ನು ದೇಶದಲ್ಲಿ ಜನರ ಮೇಲೆ ಪ್ರಯೋಗ ಮಾಡಲಾಗಿತ್ತು. ಅದರ ಸಮಗ್ರ ಮಾಹಿತಿಯನ್ನು ತಜ್ಞರ ಸಮಿತಿ ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ.
ಆದರೆ ಈ ಲಸಿಕೆಯ ವಿತರಣೆಯನ್ನು ಯಾವಾಗ ಪ್ರಾರಂಭಿಸಲಾಗುವುದು ಎಂದು ಬಗ್ಗೆ ಕೇಂದ್ರದಿಂದ ಯಾವುದೇ ಮಾಹಿತಿ ಬಿಡುಗಡೆಯಾಗಿಲ್ಲ.