ಲಾಕ್ಡೌನ್ ಘೋಷಣೆ :ಬೆಂಗಳೂರಿನಲ್ಲಿ ವೈನ್ಶಾಪ್ ಮುಂದೆ ಫುಲ್ ಕ್ಯೂ, ಹುಡುಗಿಯರಲ್ಲೂ ಮದ್ಯ ಕೊಳ್ಳಲು ಆತುರ
ಬೆಂಗಳೂರು: ರಾಜ್ಯದಲ್ಲಿ ನಾಳೆ ರಾತ್ರಿ 9 ಗಂಟೆಯಿಂದ 14 ದಿನಗಳ ಕಾಲ ಹೇರಿರುವ ಲಾಕ್ಡೌನ್ ಹಿನ್ನೆಲೆಯಲ್ಲಿ ಎಣ್ಣೆಪ್ರಿಯರು ವೈನ್ಶಾಪ್ಗಳ ಮುಂದೆ ಕ್ಯೂ ನಿಂತು ಬಾಟಲ್ ಖರೀದಿಗೆ ಮುಂದಾಗಿದ್ದು,ಬೆಂಗಳೂರು ನಗರದ ಎಲ್ಲಾ ಮದ್ಯದಂಗಡಿಗಳ ಮುಂದೆ ಸಾಲುಗಟ್ಟಲೆ ಜನ ನಿಂತಿರುವುದು ಕಂಡು ಬರುತ್ತಿದೆ.
ಕಳೆದ ಬಾರಿ ಆರಂಭದಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿತ್ತು, ನಂತರದ ಮಾರ್ಗಸೂಚಿಯಲ್ಲಿ ಸರ್ಕಾರ ಮದ್ಯದಂಗಡಿಗಳನ್ನು ಕೂಡ ಮುಚ್ಚಲು ಸೂಚಿಸಿತ್ತು.
ಈ ಕಾರಣದಿಂದ ಈ ಬಾರಿಯೂ ಕಳೆದ ಸಲದಂತೆ ‘ಎಣ್ಣೆ’ ಸಿಗದೆ ಹೋದರೆ ಎಂಬ ಭಯದಿಂದ ಈಗಲೇ ಮದ್ಯ ಖರೀದಿಗೆ ಮದ್ಯದಂಗಡಿಗಳ ಮುಂದೆ ದುಂಬಾಲು ಬಿದ್ದಿದ್ದು, ಕ್ಯೂ ನಿಂತಿದ್ದಾರೆ.
ಇನ್ನು ಮುಂದಿನ ಹದಿನಾಲ್ಕು ದಿನ ಸಿಗಲಾರದು ಎಂಬ ನಿಟ್ಟಿನಲ್ಲಿ ಕೈಚೀಲದಲ್ಲಿ ಎಣ್ಣೆ ತುಂಬಿಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕೆಲವರು ಬಾಕ್ಸ್ ಗಟ್ಟಲೆ ಮದ್ಯವನ್ನು ತಮ್ಮ ಕಾರು ಡಿಕ್ಕಿಗಳಲ್ಲಿ ಭರ್ತಿ ಮಾಡಿ ಹೊರಟಿದ್ದಾರೆ.
ಬೆಂಗಳೂರಿನ ರಾಜಾಜಿನಗರದ ಮದ್ಯದಂಗಡಿ ಹೌಸ್ ಫುಲ್ ಆಗಿದ್ದು, ಪಾನಪ್ರಿಯರು ದೊಡ್ಡ ಚೀಲ ತಂದು ಮದ್ಯ ಖರೀದಿಯಲ್ಲಿ ತೊಡಗಿದ್ದಾರೆ. ರಾತ್ರಿ ಆಗುತ್ತಿದ್ದಂತೆ ರಶ್ ಜಾಸ್ತಿ ಆಗುತ್ತಿದೆ. ಕಾರಣ, ಕೆಲಸ ಮುಗಿಸಿ ಜನರು ಮನೆಗೆ ಈಗ ತಾನೇ ಬಂದಿದ್ದು, ಕೆಲವರು ನೇರವಾಗಿ ಮದ್ಯದಂಗಡಿಗೆ ಹೊರಟು ಮಾಲು ಶೇಖರಣೆಯಲ್ಲಿ ತೊಡಗಿದ್ದಾರೆ. ಮತ್ತೆ ಕೆಲವರು ಮನೆಗೆ ಹೋಗಿ ಈ ರಾತ್ರಿ ಕಳೆಯುವುದರೊಳಗಾಗಿ ತಮಗೆ ಬೇಕಾದ ಫ್ರೆಂಡಿನ ಹೋಟೆಲುಗಳನ್ನು ಆಯ್ಕೆಮಾಡಿ ಕೊಳ್ಳುವ ತವಕದಲ್ಲಿದ್ದಾರೆ. ಯಾವುದೇ ಕಾರಣಕ್ಕೂ ಕಳೆದ ಸಲ ಕಷ್ಟ ಪಟ್ಟಂತೆ ಈ ಬಾರಿ ಮಧ್ಯದ ಅಭಾವ ಆಗಬಾರದು ಎಂದು ಮುಂಜಾಗ್ರತೆ ವಹಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಕೆಲವು ಕಡೆ ಹುಡುಗಿಯರು ಓಡಾಡುತ್ತಾ, ದಾಪುಗಾಲು ಹಾಕುತ್ತಾ ಮದ್ಯ ಕೊಳ್ಳಲು ಮುಗಿಬೀಳುತ್ತಿದ್ದಾರೆ.
ಇತ್ತ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಮದ್ಯದಂಗಡಿಗಳ ಮುಂದೆ ಯಾವುದೇ ವಿಶೇಷತೆಗಳು ಕಂಡುಬಂದಿಲ್ಲ. ಪರಿಸ್ಥಿತಿ ನಾರ್ಮಲ್ ಆಗಿದೆ.