ಮಾರ್ಗ ಮಧ್ಯೆ ವಿದ್ಯಾರ್ಥಿನಿಯನ್ನು ಇಳಿಸಿ ಹೋದ ಬಸ್ | ಕಾರಣರಾದ ಉಡುಪಿ ಡಿಸಿ ಜಗದೀಶ್ ಮೇಲೆ ಸಾರ್ವಜನಿಕರ ಆಕ್ರೋಶ

ಮಾರ್ಗ ಮಧ್ಯದಲ್ಲಿ ವಿದ್ಯಾರ್ಥಿನಿಯರನ್ನು ಇಳಿಸಿ ಅತಂತ್ರವಾಗಿ ಬಿಟ್ಟುಹೋಗಲು ಕಾರಣ ಆದ ಉಡುಪಿ ಡಿಸಿ ಜಗದೀಶ್ ಮೇಲೆ ಸಾರ್ವಜನಿಕರು ಗರಂ ಆಗಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಏರುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಕೋವಿಡ್ ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಸೋಮವಾರ ಸಂಜೆ ಕಾರ್ಯಾಚರಣೆ ನಡೆಸಿದ್ದರು. ಅದರಂತೆ ಬಸ್ ಗಳಲ್ಲಿ ಸಾಮಾಜಿಕ ಅಂತರ ಶಾಲನೆ, ಮಾಸ್ಕ್ ಧರಿಸುವ ಬಗ್ಗೆ ಖಾತರಿಸಿ ಪಡಿಸಿ ನಿಯಮ ಉಲ್ಲಂಘಿಸಿದವರನ್ನು ತರಾಟೆಗೆ ತೆಗೆದುಕೊಂಡು ಬಸ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚು ಇದ್ದ ಪ್ರಯಾಣಿಕರನ್ನು ಮಾರ್ಗ ಮಧ್ಯದಲ್ಲೇ ಇಳಿಸಿದ್ದರು. ಅದರಲ್ಲಿ ದೂರದ ಹಳ್ಳಿಯಿಂದ ಬರುವ ವಿದ್ಯಾರ್ಥಿನಿಯರೂ ಇದ್ದರು.

ಇದೀಗ ಮಾರ್ಗ ಮಧ್ಯದಲ್ಲಿ ಬಸ್ ನಿಂದ ಇಳಿಸಲ್ಪಟ್ಟ  ವಿದ್ಯಾರ್ಥಿನಿಯೊಬ್ಬಳು ತನ್ನ ಅಳಲನ್ನು ಮಾಧ್ಯಮದ ಮುಂದೆ ಹೇಳಿಕೊಂಡಿದ್ದು ವಿದ್ಯಾರ್ಥಿನಿಯ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.

” ಕಾಲೇಜಿನಲ್ಲಿ ಸೆಮಿಸ್ಟರ್ ಪರೀಕ್ಷೆ ಇದ್ದ ಕಾರಣ ನಾವು ಉಡುಪಿಗೆ ಬಂದಿದ್ದೇವೆ. ಕೊರೋನಾ ಕಾರಣ ಹೇಳಿ ನಮ್ಮನ್ನು ಬಸ್ಸಿನಿಂದ ಇಳಿಸಿ ಮಾರ್ಗ ಮಧ್ಯದಲ್ಲೇ ಬಿಟ್ಟು ಹೋಗಿದ್ದಾರೆ. ಕೇಳಿದರೆ ಮುಂದಿನ ಬಸ್‌ನಲ್ಲಿ ಹೋಗುವಂತೆ ಸೂಚಿಸಿದ್ದಾರೆ. ನಾವು ಹಳ್ಳಿಯಿಂದ ಬರುವವರು ಅಲ್ಲಿಗೆ ಅರ್ಧ ಗಂಟೆಗೊಮ್ಮೆ ಬಸ್ ಬರುತ್ತದೆ. ಸಂಜೆ ಹೊತ್ತು ಆದ್ದರಿಂದ ಪ್ರತಿ ಬಸ್ ನಲ್ಲಿಯೂ ಪ್ರಯಾಣಿಕರು ತುಂಬಿರುತ್ತಾರೆ. ಹೀಗಿರುವಾಗ ಹೇಗೆ ಮನೆಗೆ ಹೋಗುವುದು. ನಾವು ತಡವಾಗಿ ಹೋದರೆ ನಮ್ಮನ್ನು ಕೇಳುವವರು ಇಲ್ಲವೆ ?” ಎಂದು ಆ ವಿದ್ಯಾರ್ಥಿನಿ ಪ್ರಶ್ನಿಸಿದ್ದಾಳೆ.

ಇದೀಗ ವಿದ್ಯಾರ್ಥಿನಿಯ ಹೇಳಿಕೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಯಾಣಿಕರನ್ನು ಅರ್ಧ ದಾರಿಯಲ್ಲಿಯೇ ಇಳಿಸಿದ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

” ಡಿಸಿ ಏನೋ ಬಂದು ಎಲ್ಲರನ್ನೂ ಇಳಿಸಿ, ತಮ್ಮ ಗೂಟದ ಕಾರು ಹತ್ತಿ ಹೋಗಿದ್ದಾರೆ. ನಮ್ಮ ಮಕ್ಕಳು ಅರ್ಧ ದಾರಿಯಲ್ಲಿ ಬಸ್ಸಿಲ್ಲದೆ ಪರದಾಡಬೇಕಾಗಿದೆ.  ಡಿಪೋದಲ್ಲಿ ತುಕ್ಕು ಹಿಡಿಯುತ್ತಿರುವ ಸರಕಾರಿ ಬಸ್ಸನ್ನಾದರೂ ಸಂಚಾರಕ್ಕೆ ಯಾಕೆ ಬಿಡಬಾರದು? ಎಲ್ಲಾ ಬಸ್ಸಲ್ಲಿ ರಶ್ ಇದ್ರೆ ಮಕ್ಕಳು ಹೋಗೊದಾದರೂ ಹೇಗೆ ?” ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave A Reply

Your email address will not be published.