ಸಾವೇ ಇಲ್ಲದ ಜೀವಿ ಇದೆ; ಯಾವುದು ಗೊತ್ತುಂಟಾ..!??
ಭೂಮಿಯ ಮೇಲೆ ಇರುವ ಜೀವಿಗಳಲ್ಲಿ ಅತ್ಯಂತ ಕಠಿನತಮ ಜೀವಿ ಯಾವುದು? ಇದೀಗ ಜೀವಂತ ಇರುವ ಪ್ರಾಣಿಗಳಲ್ಲಿ ಯಾವ ಜೀವಿ ವಿಶ್ವದ ಎಕ್ಸ್ಟ್ರೀಮ್ ಅನ್ನುವಂತಹ ವಾತಾವರಣಗಳನ್ನು ಕೂಡ ತಾಳಿಕೊಂಡು ಮತ್ತೆ ಜೀವಂತವಾಗಿ ಬರಬಲ್ಲದು ? ಯಾವುದೇ ಉತ್ಪಾತಗಳಾದರೂ ಬದುಕುಳಿಯಬಲ್ಲ ಜೀವಿ ಯಾವುದಾದರೂ ಇದೆಯಾ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಅಂತಹ ಜೀವ ಪ್ರಭೇದವೊಂದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಮುಖ್ಯವಾಗಿ ಈ ಜೀವಿಯನ್ನು ಸೂರ್ಯ-ಚಂದ್ರ ಇರುವ ವರೆಗೂ ಉಳಿಯುವ ಜೀವಿ ಎನ್ನಲಾಗುತ್ತಿದೆ. ಭೂಮಿ ಮೇಲಿನ ಜೀವಿಗಳೆಲ್ಲ ನಾಶವಾದ ಬಳಿಕವೂ ‘ನೀರಿನ ಹಿಮಕರಡಿ’ ಎಂದು ಕರೆಯಲ್ಪಡುವ ಈ ಟಾರ್ಡಿಗ್ರೇಡ್ ಎಂಬ ಜೀವಿ ಸೂಕ್ಷ್ಮ ಜೀವಿ ಬದುಕಿರಬಲ್ಲುದು.
0.1 ಮಿಲಿಮೀಟರ್ ನಿಂದ 1.5 ಮಿಲಿ ಮೀಟರ್ ಗಾತ್ರ ಇರುವ ಈ ಮುದ್ದಾದ ಸಣ್ಣ, ಎಂಟು ಕಾಲಿನ ಪ್ರಾಣಿಗಳು ಮಾತ್ರ ಕೊನೆಯ ತನಕ ಬದುಕಿ ಉಳಿಯುತ್ತವೆ ಎಂದು ಸಂಶೋಧನೆಯಿಂದ ಬಹಿರಂಗಗೊಂಡಿದೆ. ಉಲ್ಕೆಗಳು ಹಾಗೂ ನಕ್ಷತ್ರ ಸ್ಪೋಟಗಳಂತ ದುರಂತಗಳು ಭೂಮಿಯ ಮೇಲಿನ ಜೀವ ಪ್ರಬೇಧಗಳನ್ನು ನಾಶ ಮಾಡಬಹುದೆ, ಹೊರತು ಸಂಪೂರ್ಣ ನಿರ್ನಾಮ ಮಾಡಲು ಸಾಧ್ಯವಿಲ್ಲ.
ಅತ್ಯಂತ ಕಠೋರ ಪರಿಸ್ಥಿತಿಯಲ್ಲೂ ಬದುಕಬಲ್ಲ ಅವುಗಳು ನೀರಿಲ್ಲದೆ ಇರಬಲ್ಲವು. ಅತ್ಯಂತ ಶೀತಲ ವಾತಾವರಣ, ವಿಕಿರಣಗಳು, ಯಾವುದೇ ಪ್ರಾಣಿ ಬದುಕಲಾರದ ಉಷ್ಣತೆಯಲ್ಲಿ ಕೂಡ ಈ ಪುಟಾಣಿ ಜೀವಿಗಳು ತಣ್ಣಗೆ ಮಲಗಿ, ಆ ನಂತರ ಅವಕಾಶ ಸಿಕ್ಕಾಗ ಮತ್ತೆ ಜೀವ ಪಡೆದುಕೊಳ್ಳ ಬಲ್ಲವು.
ಟಾರ್ಡಿಗ್ರೇಡ್ ಜೀವಿಯು ಆಹಾರ ನೀರಿಲ್ಲದೆ 30 ವರ್ಷಗಳ ಕಾಲ ‘ಒಣ ಸ್ಥಿತಿಯಲ್ಲಿ ‘ ಇರುತ್ತಾ ಹಾಗೆ ಬಿದ್ದಿರಬಲ್ಲುದು. 190 ಡಿಗ್ರಿ ಉಷ್ಣಾಂಶದಲ್ಲಿಯೂ ಸಹ ಇರಬಲ್ಲದು. ಈ ವಿಶ್ವದ ಅತ್ಯಂತ ಕಮ್ಮಿ ಉಷ್ಣತೆ ಅಂದರೆ – 273 C. ಇಷ್ಟು ಪ್ರಮಾಣದ ಶೀತಲತೆಯನ್ನೂ ತಾಳಿ ಕೊಂಡಿದ್ದು, ಮತ್ತೆ ಸಹಜ ವಾತಾವರಣಕ್ಕೆ ತಂದಾಗ ಜೀವ ತುಂಬಿಕೊಂಡು ಬದುಕಬಲ್ಲದು.
‘ ನಕ್ಷತ್ರ ಸ್ಪೋಟಗಳಂತಹ ದುರಂತಗಳು ನಡೆದು ಭೂಮಿಯ ಮೇಲಿನ ಜೀವ ಪ್ರಬೇಧವೇ ನಾಶವಾದ ಉದಾಹರಣೆಗಳು ಇವೆ. ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಬದುಕಿ ಉಳಿಯಬಲ್ಲ ಜೀವಿಯ ಕುರಿತು ಅಧ್ಯಯನ ನಡೆಸಿದ್ದೇವೆ. ಭೂಮಿ ಮೇಲಿನ ಜೀವಿಗಳೆಲ್ಲ ನಾಶವಾದ ಬಳಿಕ ಟಾರ್ಡಿಗ್ರೇಡ್ ಎಂಬ ಜೀವಿ ಮಾತ್ರ ಉಳಿಯಬಲ್ಲದು ಎಂಬ ಅಂಶವನ್ನು ಕಂಡುಕೊಂಡಿರುವುದಾಗಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರಲ್ಲಿ ಒಬ್ಬರಾದ ಡಾ. ಡೇವಿಡ್ ಸ್ಲೋನ್ ಹೇಳಿದ್ದಾರೆ.
ಎಂತಹಾ ಪರಿಸ್ಥಿತಿಯಲ್ಲಿ ಕೂಡ ಬದುಕಬಲ್ಲ ಟ್ಯಾಡಿಗ್ರೇಡ್ ಜೀವಿಯ ಮೇಲೆ ಯಾವುದೇ ಪ್ರತಿಕೂಲ ವಾತಾವರಣ ಪರಿಣಾಮ ಬೀರದು ಎನ್ನುವ ಸಂಗತಿ ಅಚ್ಚರಿ ಮೂಡಿಸುತ್ತಿದೆ. ವಿಸ್ಮಯ ವಿಶ್ವದಲ್ಲಿ ಟಾರ್ಡಿಗ್ರೇಡ್ ಮಗದೊಂದು ವಿಸ್ಮಯ !