ನೀರಿನ ಸಂಪ್ ಗೆ ಬಿದ್ದು ಒಂದೂವರೆ ನಿಮಿಷ ನೀರಲ್ಲಿ ಮುಳುಗಿದ್ದರೂ ಕೂಡ ಬದುಕಿ ಬಂದ ಮಗು
ಬೆಂಗಳೂರು : ಸಂಪ್‍ಗೆ ಬಿದ್ದು ಒಂದುವರೆ ನಿಮಿಷ ಕಳೆದಿದ್ದರೂ ಮಗು ಬದುಕಿ ಬಂದ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಎರಡನೇ ಹಂತದಲ್ಲಿ ನಡೆದಿದೆ.
ಮಗು ರಕ್ಷಣೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗಿದೆ.
ಏಪ್ರಿಲ್ 3ರಂದು ಎಲೆಕ್ಟ್ರಾನಿಕ್ ಸಿಟಿಯ ಆಂಧ್ರ ಮೆಸ್ ಕಟ್ಟಡದ ಸಂಪಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿತ್ತು. ಆಗ ನೀರಿನ ಸಂಪಿನ ಮ್ಯಾನ್ಹೋಲ್ ಓಪನ್ ಮಾಡಿ ಇಡಲಾಗಿತ್ತು. ನೀರು ತುಂಬಿಸುವ ವೇಳೆ ಟ್ಯಾಂಕರ್ ಸಿಬ್ಬಂದಿ ಅಥವಾ ಕಟ್ಟಡದ ಮಾಲೀಕರು ಸಹ ಅಲ್ಲಿ ಇರಲಿಲ್ಲ. ಈ ವೇಳೆ ಆಟವಾಡುತ್ತಾ ಬಂದ ಮಗು ತೆರೆದ ಸಂಪ್‍ಗೆ ಬಿದ್ದಿದೆ. ಮಗು ಸಂಪ್ ಒಳಗೆ ಬಿದ್ದ ಕೆಲವೇ ಕ್ಷಣಗಳಲ್ಲಿ ಜನ ಅಲ್ಲಿಯೇ ಓಡಾಡಿದ್ದಾರೆ. ಆದ್ರೆ ಮಗು ಬಿದ್ದಿರೋದು ಯಾರ ಗಮನಕ್ಕೂ ಬಂದಿಲ್ಲ.
ಸುಮಾರು ಒಂದೂವರೆ ನಿಮಿಷದ ಬಳಿಕ ಮಗುವನ್ನ ಹುಡುಕಿಕೊಂಡ ಬಂದ ತಂದೆ ಸಂಪ್ ನಲ್ಲಿ ಇಣುಕಿ ನೋಡಿದ್ದಾರೆ. ಮಗು ಕಾಣಿಸುತ್ತಿದ್ದಂತೆ ಸಂಪ್ ಗೆ ಹಾರಿದ ಮಗುವಿನ ತಂದೆ ತನ್ನ ಕಂದನ ರಕ್ಷಣೆ ಮಾಡಿದ್ದಾರೆ. ನಂತರ ಮಗುವಿನ ತಾಯಿ ಬಂದು ಮಗುವನ್ನ ಮೇಲೆತ್ತಿಕೊಂಡಿದ್ದಾರೆ. ನಂತರ ಸೇರಿದ ಜನ ಮಗುವಿನ ತಂದೆಗೆ ಸಂಪ್ ನಿಂದ ಹೊರ ಬರಲು ಸಹಾಯ ಮಾಡಿದ್ದಾರೆ. ಸುಮಾರು ಒಂದು ನಿಮಿಷಕ್ಕೂ ಅಧಿಕ ಕಾಲ ಸಂಪ್ ನಲ್ಲಿ ಬಿದ್ದಿದ್ದ ಮಗು ಸಾವನ್ನು ಗೆದ್ದು ಬಂದಿದೆ.