ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ಮಾರ್ಗಸೂಚಿ ಅನ್ವಯ- ಸಚಿವ ಡಾ| ಕೆ. ಸುಧಾಕರ್
ಉಡುಪಿ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ಮಾರ್ಗಸೂಚಿ ಅನ್ವಯ ಮಾಡಲಾಗುತ್ತದೆ. ಈ ಮಾರ್ಗಸೂಚಿ ಈಗಾಗಲೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಜಾರಿಯಲ್ಲಿದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಬುಧವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರು ವಿಮಾನ ನಿಲ್ದಾಣಕ್ಕೂ ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಪ್ರಯಾಣಿಕರು ಆಗಮಿಸುವುದರಿಂದ ಕೆಲ ಬದಲಾವಣೆ ಮಾಡಿ ತಕ್ಷಣ ಮಾರ್ಗಸೂಚಿ ಹೊರಡಿಸುತ್ತೇವೆ ಎಂದರು.
ವಿಮಾನ ಮೂಲಕ ಬರುವವರು ಮೊದಲೇ ನೋಂದಾಯಿಸಬೇಕು. ಅಲ್ಲದೇ ಐಸಿಎಂಆರ್ ಮಾರ್ಗಸೂಚಿ ಪಾಲಿಸಬೇಕು. ಅದು ಅನುಮತಿಸಿದ ಲ್ಯಾಬ್ ನಿಂದ ವಿಮಾನ ಪ್ರಯಾಣಕ್ಕೂ 48 ತಾಸು ಮೊದಲು ಕೋವಿಡ್ -19 ಪರೀಕ್ಷೆಯಲ್ಲಿ ಸೋಂಕು ಇಲ್ಲದಿರುವ ಬಗ್ಗೆ ವರದಿ ತರಬೇಕು. ಈ ನಿಯಮವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿಯೂ ಜಾರಿಗೆ ತರುತ್ತೇವೆ ಎಂದು ಸಚಿವ ಡಾ. ಸುಧಾಕರ್ ತಿಳಿಸಿದರು.
ಅದಕ್ಕೂ ಮುನ್ನ ಸಚಿವರು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಕೋವಿಡ್ ಪರಾಮರ್ಶೆ ಸಭೆ ನಡೆಸಿದರು.
ಕೋವಿಡ್ ಉಸ್ತುವಾರಿವಹಿಸಿಕೊಂಡ ನಂತರ ಜಿಲ್ಲೆಗೆ ಇದು ಮೊದಲ ಭೇಟಿಯಾಗಿದ್ದು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನ ಪ್ರಕರಣಗಳ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಆರಂಭದಲ್ಲಿ ಕೇವಲ 3 ಪ್ರಕರಣಗಳಿಂದ 18 ನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಇಂದು 410 ಪ್ರಕರಣಗಳೊಂದಿಗೆ ಮೊದಲನೇ ಸ್ಥಾನದಲ್ಲಿದೆ. ಜನರು ಕೊರೋನದಿಂದ ಗುಣಮುಖರಾದವರನ್ನು ಕಳಂಕಿತರಂತೆ ನೋಡಬಾರದು. ಇದು ಸಾಮಾಜಿಕ ಪಿಡುಗು ಅಲ್ಲ. ಈ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕು ಎಂದು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು, ಹೊರಗಿನಿಂದ ಬಂದವರ ಮನೆಯನ್ನು ಸೀಲ್ಡೌನ್ ಮಾಡುವಂತೆ ಸಲಹೆ ನೀಡಿದರು. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ಸುನಿಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ,ಸುಕುಮಾರ ಶೆಟ್ಟಿ, ಜಿ.ಪಂ.ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಜಗದೀಶ್,ಎಸ್.ಪಿ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.