ಬೆಳ್ತಂಗಡಿ | 45 ವರ್ಷ ಹಳೆಯ ಕುಕ್ಕುಜೆ ಸೇತುವೆ ನೆಲಸಮ
ಬೆಳ್ತಂಗಡಿ: ಕುಕ್ಕುಜೆ ಸೇತುವೆಯು ಕುತ್ಲೂರು ಗ್ರಾಮದ ಕುಕ್ಕುಜೆ ಕ್ರಾಸ್ನಿಂದ ರಾಷ್ಟ್ರೀಯ ಉದ್ಯಾನವನ ಅಲಂಬಕ್ಕೆ ಹೋಗುವ ರಸ್ತೆಯಲ್ಲಿದ್ದು, ಇಂದು ಸಂಜೆ ಕುಸಿದು ಬಿದ್ದಿದೆ.
ಸುಮಾರು 45 ವರ್ಷಕ್ಕೂ ಹಳೆಯದಾದ ಇದು ಈ ಮೊದಲೇ ಶಿಥಿಲಗೊಂಡಿದ್ದು, ದುರಸ್ತಿಗೆ ಈ ಭಾಗದ ಜನರು ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾರಿಗೂ ಇವರ ಕೂಗು ಕೇಳಿರಲಿಲ್ಲ. ಈ ಸೇತುವೆಯ ಫಿಲ್ಲರ್ ಕುಸಿದು ಬಿದ್ದು ಒಂದು ವರ್ಷ ಆಗುತ್ತಾ ಬಂದಿದ್ದು, ವಾಹನ ಚಾಲಕರಿಗೆ ಅಪಾಯವನ್ನು ತಂದಿತ್ತು. ಸೇತುವೆ ಶಿಥಿಲಗೊಂಡಿದ್ದರಿಂದ ಈ ಭಾಗದ ನೂರಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಗ್ರಾ.ಪಂ ನದಿಯಲ್ಲಿ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಿ ಕೊಟ್ಟಿತ್ತು.
ಇನ್ನೇನು ಮಳೆಗಾಲ ಆರಂಭವಾಗುವ ಸೂಚನೆ ಇದ್ದು,ಇದೀಗ ಸೇತುವೆ ಸಂಪೂರ್ಣ ಕುಸಿದು ಬಿದ್ದಿದೆ.ಇದರಿಂದಾಗಿ ಈ ಭಾಗದ ಜನರಿಗೆ ಸಂಪರ್ಕ ಅಸಾಧ್ಯವಾಗಿದೆ.