ಶ್ರಮಿಕ್ ವಿಶೇಷ ರೈಲು | ಉತ್ತರ ಪ್ರದೇಶಕ್ಕೆ ಹೊರಟ ವಲಸೆ ಕಾರ್ಮಿಕರು
ಪುತ್ತೂರು : ರೈಲ್ವೆ ಇಲಾಖೆ ಮೈಸೂರು ವಿಭಾಗ ವತಿಯಿಂದ ಶನಿವಾರ ಎರಡು ‘ಶ್ರಮಿಕ್ ವಿಶೇಷ ರೈಲು’ಗಳ ಮೂಲಕ ಉತ್ತರ ಪ್ರದೇಶದ 3 ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ಕಳುಹಿಸಿಕೊಡಲಾಯಿತು.
ಮೈಸೂರಿನ ಅಶೋಕಪುರಂನಿಂದ ಗೋರಕ್‌ಪುರ ಮತ್ತು ಪುತ್ತೂರಿನ ಕಬಕ ಪುತ್ತೂರು ರೈಲ್ವೆ ನಿಲ್ದಾಣದಿಂದ ಲಕ್ನೋಗೆ ತಲಾ 1520 ಪ್ರಯಾಣಿಕರನ್ನು ಒಳಗೊಂಡ ಎರಡು ರೈಲುಗಳು ಶನಿವಾರ ಪ್ರಯಾಣ ಆರಂಭಿಸಿವೆ. ಕರ್ನಾಟಕ ರಾಜ್ಯ ಸರಕಾರದ ಮನವಿಯಂತೆ ಈ ಎರಡೂ ರೈಲುಗಳನ್ನು ನಿಗದಿಪಡಿಸಲಾಗಿತ್ತು.
ಎರಡೂ ರೈಲುಗಳಲ್ಲಿ ತಲಾ 18 ಸ್ಲೀಪರ್ ಕೋಚ್, 2 ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳಿವೆ. ಗೋರಕ್‌ಪುರಕ್ಕೆ ಹೊರಟಿರುವ ರೈಲು ಮೇ ೧೮ರಂದು ಬೆಳಗ್ಗೆ 6ಕ್ಕೆ, ಲಕ್ನೋಗೆ ಹೊರಟಿರುವ ರೈಲು ಬೆಳಗ್ಗೆ 6.30ಕ್ಕೆ ತಲುಪಲಿದೆ.
ಶ್ರಮಿಕ್ ವಿಶೇಷ ರೈಲಿನಲ್ಲಿ ತೆರಳುವ ಎಲ್ಲ ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ. ವೈಯಕ್ತಿಕ ಸ್ವಚ್ಛತೆಗಾಗಿ ಎಲ್ಲ ಬೋಗಿಗಳಲ್ಲಿ ಸಾಕಷ್ಟು ಸಾಬೂನು ಮತ್ತು ಸ್ಯಾನಿಟೈಸರ್‌ಗಳನ್ನು ಒದಗಿಸಲಾಗಿದೆ.
ಎರಡೂ ರೈಲುಗಳಲ್ಲಿ ತಲಾ 6 ಮಂದಿ ಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದ ಮೂಲಕ ವಲಸೆ ಕಾರ್ಮಿಕರಿಗೆ ರೈಲು ಆರಂಭದ ವೇಳೆ ಹಾಗೂ ಮಾರ್ಗಮಧ್ಯೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ ಮೈಸೂರು ವಿಭಾಗೀಯ ಪಿಆರ್‌ಒ ಪ್ರಿಯಾ ಶೆಟ್ಟಿ ತಿಳಿಸಿದ್ದಾರೆ.