ಪ್ರಧಾನಿ ಮೋದಿ ಆರ್ಥಿಕ ಪ್ಯಾಕೇಜ್ ವಿವರ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ನವದೆಹಲಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ಡೌನ್ನಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿತ್ತು. ಅದರ ನಿವಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾತ್ರಿ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ಘೋಷಣೆಯು ಯಾವ ವಲಯಗಳಿಗೆ ಎಷ್ಟು ಹಂಚಿಕೆಯಾಗಿದೆ ಎಂಬ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ.
ಬುಧವಾರ ಸಂಜೆ 4ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಮುಂದಿನ ಕೆಲದಿನಗಳವರೆಗೆ ಹಂತ ಹಂತವಾಗಿ ಯೋಜನೆಗಳನ್ನು ಘೋಷಿಸಲಿದ್ದು, ಒಂದೊಂದು ವಲಯಕ್ಕೆ ಒಂದೊಂದು ದಿನ ಯೋಜನೆಗಳನ್ನು ಘೋಷಿಸಲಿದ್ದೇವೆ. ಇದುವರೆಗೆ 52 ಸಾವಿರ ಕೋಟಿ ರೂಪಾಯಿಯನ್ನು ಜನಧನ ಖಾತೆಗಳಿಗೆ ವರ್ಗಾಯಿಸಿದ್ದು, ಈವರೆಗೆ 42 ಕೋಟಿ ಜನರು ಫಲಾನುಭವಿಗಳಾಗಿದ್ದಾರೆ. ಎಂದು ಹೇಳಿದರು.
ಆದಾಯ ತೆರಿಗೆದಾರರಿಗೆ ಕೇಂದ್ರದಿಂದ ಬಂಪರ್ ಗಿಫ್ಟ್:
ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ. 18 ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ಆದಾಯ ತೆರಿಗೆ ಇಲಾಖೆ ವಾಪಸ್ ನೀಡಿದೆ. ಇದರಿಂದ 14 ಕೋಟಿ ಆದಾಯ ತೆರಿಗೆ ಪಾವತಿದಾರರಿಗೆ ಅನುಕೂಲವಾದಂತಾಗಿದೆ.
ನಾಳೆಯಿಂದ 2021ರ ಮಾರ್ಚ್ವರೆಗೆ ಟಿಡಿಎಸ್/ಟಿಸಿಎಸ್ ನಲ್ಲಿ ಶೇ.25 ರಷ್ಟು ಕಡಿತ ಮಾಡಿರುವ ಕೇಂದ್ರ ಸರ್ಕಾರವು ಇದರಿಂದ ಜನರಿಗೆ 50 ಸಾವಿರ ಕೋಟಿ ಉಳಿತಾಯವಾಗಲಿದೆ.
ಲೆಕ್ಕಪರಿಶೋಧನೆ ಅವಧಿ ಅಕ್ಟೋಬರ್ 31ರವರೆಗೆ ವಿಸ್ತರಣೆಯಾಗಿದೆ. ತೆರಿಗೆ ಮೌಲ್ಯಮಾಪನ ಅವಧಿಯನ್ನು ಕೂಡ ಡಿಸೆಂಬರ್ 31ರವರೆಗೆ ವಿಸ್ತರಣೆ ಮಾಡಿದೆ.
ಎಂಎಸ್ಎಂಇಗಳಿಗೆ ಬಲ ನೀಡಿದ ಕೇಂದ್ರ ಸರಕಾರ:
ಸಣ್ಣ ಕೈಗಾರಿಕೆಗಳಿಗೆ 3ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಇದರಿಂದ 45 ಲಕ್ಷ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅಡಮಾನವಿಲ್ಲದೆ ಸಾಲ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ. 25 ರಿಂದ 100 ಕೋಟಿ ರೂಪಾಯಿ ವಹಿವಾಟು ಹೊಂದಿರುವ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ.
ಸಾಲ ಮರುಪಾವತಿಗೆ ನಾಲ್ಕು ವರ್ಷಗಳವರೆಗೆ ಕಾಲಾವಕಾಶ ನೀಡಲಾಗಿದೆ. ಸಾಲ ನೀಡಿದ ಮೊದಲ 12 ತಿಂಗಳವರೆಗೆ ಸಾಲ ಮರುಪಾವತಿಸುವ ಅಗತ್ಯವಿಲ್ಲ. ಬ್ಯಾಂಕುಗಳು ನೀಡುವ ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ ನೀಡಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ವಿದ್ಯುತ್ ಕಂಪನಿಗಳಿಗೆ ಸಹಾಯ:
ಕೊರೊನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವಿದ್ಯುತ್ ಸರಬರಾಜು ಕಂಪನಿಗಳ ಸಹಾಯಕ್ಕಾಗಿ 90 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.
ಮುಖ್ಯಾಂಶಗಳು
1. ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆ ವಲಯಕ್ಕೆ 3 ಲಕ್ಷ ಕೋಟಿ ಪ್ಯಾಕೇಜ್
2. 45 ಲಕ್ಷ ಕೈಗಾರಿಕೋದ್ಯಮಿಗಳಿಗೆ ಇದರಿಂದ ಅನುಕೂಲ.
3. ಎಂಎಸ್ಎಂಇಗಳಿಗೆ ಯಾವುದೇ ಅಡಮಾನವಿಲ್ಲದೇ ಸಾಲ.
4. 100 ಕೋಟಿ ಕೈಗಾರಿಕೋದ್ಯಮಿಗಳಿಗೆ ಇದರಿಂದ ಪ್ರಯೋಜನ.
5. 25 ರಿಂದ 100 ಕೋಟಿ ವಾಹಿವಾಟು ನಡೆಸುವವರಿಗೆ ಇದರ ಪ್ರಯೋಜನ
6. ಸಾಲ ಮರು ಪಾವತಿಗೆ ನಾಲ್ಕು ವರ್ಷ ಕಾಲಾವಕಾಶ.
7. ಮೂರು ತಿಂಗಳ ವರೆಗೂ ಎಟಿಎಂ ವಿಥ್ ಡ್ರಾಗೆ ಶುಲ್ಕವಿಲ್ಲ.
8. ಬ್ಯಾಂಕ್ಗಳು ನೀಡುವ ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರೆಂಟಿ.
9. ಸಂಕಷ್ಟದಲ್ಲಿರುವ ಸಣ್ಣ ಉದ್ಯಮಿಗಳಿಗೆ 20 ಸಾವಿರ ಕೋಟಿ ಸಹಾಯಧನ
10. ಸಾಲ ಪಡೆದು ಒಂದು ವರ್ಷದ ವರೆಗೆ ಸಾಲ ಮರುಪಾವತಿ ಇಲ್ಲ,
11. ಉತ್ಪಾದನೆ ಹೆಚ್ಚಿಸಿಕೊಳ್ಳಲು 10 ಸಾವಿರ ಕೋಟಿ ಸಾಲ.
12. ಅಕ್ಟೋಬರ್ 31 ವರೆಗೆ ಸಾಲ ಪಡೆಯಬಹುದು.
13. 200 ಕೋಟಿವರೆಗೂ ಗ್ಲೋಬಲ್ ಟೆಂಡರ್ ಇರುವುದಿಲ್ಲ,
14. ದೇಶಿ ಉದ್ಯಮಿಗಳಿಗೆ ಮಾತ್ರ ಟೆಂಡರ್ ಪ್ರಕ್ರಿಯೆಯಲ್ಲಿ ಅವಕಾಶ.
15. ಭಾರತೀಯ ಕಂಪನಿಗಳೊಡನೆ ವಿದೇಶಿ ಕಂಪನಿಗಳ ಸ್ಪರ್ಧೆ ಇರುವುದಿಲ್ಲ.
16. ಜೂನ್ ಜುಲೈ, ಆಗಸ್ಟ್ನವರೆಗೆ ಪಿಎಫ್ ಕಟ್ಟಂಗಿಲ್ಲ, ಸರ್ಕಾರವೇ ಇದರ ಹೊಣೆ ಹೊರಲಿದೆ.
17. ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ 30 ಸಾವಿರ ಕೋಟಿ ರೂ.ನೆರವು.
18. 90 ಸಾವಿರ ಕೋಟಿ ವಿದ್ಯುತ್ ಕಂಪನಿಗಳಿಗೆ ಮೀಸಲು.
19. ವಿದ್ಯುತ್ನಲ್ಲಿ ಗ್ರಾಹಕರಿಗೆ ವಿನಾಯ್ತಿ ಕೊಟ್ಟರೇ ಮಾತ್ರ ಸಹಾಯಧನ.
20. ಸರ್ಕಾರಿ ಗುತ್ತಿಗೆದಾರರಿಗೆ ಬಿಗ್ ರೀಲಿಫ್, ಮುಂದಿನ 6 ತಿಂಗಳವರೆಗೂ ವಿಸ್ತರಣೆ.
21. ಗುತ್ತಿಗೆದಾರರ ಸಾಲಕ್ಕೆ ಕೇಂದ್ರ ಸರ್ಕಾರವೇ ಜವಾಬ್ದಾರಿ.
22. ನಾಳೆಯಿಂದ ಮಾರ್ಚ್ 31, 2021ರವೆಗೆ ಟಿಡಿಎಸ್/ಟಿಸಿಎಸ್ನಲ್ಲಿ ಶೇ.25ರಷ್ಟು ಕಡಿತ.
23. ಆದಾಯ ಮಾಹಿತಿ ತೆರಿಗೆ ಮಾಹಿತಿಗೆ ಅಕ್ಟೋಬರ್ 31ರ ವರೆಗೆ ಗಡುವು.
24. ಆದಾಯ ತೆರಿಗೆ ಮರುಪಾವತಿ ಅರ್ಜಿ ಸಲ್ಲಿಸಲು ನವೆಂಬರ್ ವರೆಗೂ ಕಾಲವಕಾಶ.