ಅರಂತೋಡು ಗ್ರಾಮದಲ್ಲಿ ಬಡವಾಯ್ತು ಬಿಎಸ್ಎನ್ಎಲ್ ಬಿಲ್ಡಿಂಗ್…!!!

ಬಡವಾಗಿ ಬಿದ್ದ ಬಿಎಸ್ಎನ್ಎಲ್ ಟವರೊಂದು ಅದಕ್ಕೆ ಹೊಂದಿಕೊಂಡು ತಟಸ್ಥವಾಗಿ ನಿಂತ ಬ್ಯುಲ್ಡಿಂಗ್ ನೌಕರನಿಲ್ಲದೆ ಕಣ್ಣೀರಿಡುತ್ತಿದೆ.

ಹೌದು 21 ವರ್ಷಗಳ ಕಾಲ ತನ್ನ ಸ್ವಂತ ಮಗುವಿನಂತೆ ಆರೈಕೆ ಮಾಡಿ ನೋಡಿಕೊಂಡ ಅದೇ ಬಿಲ್ಡಿಂಗ್ ಹೇಳದೆ ಕೇಳದೇ ಮೌನವಾಗಿ ಬಿಟ್ಟಿದೆ. ಆ ಟವರ್ ಹಾಗೂ ಏಕಾಂಗಿಯಾಗಿ ನಿಂತ ಬ್ಯುಲ್ಡಿಂಗ್ ಇರೋದು ಸುಳ್ಯ ತಾಲೂಕಿನ ಅರಂತೋಡು ಎಂಬ ಪುಟ್ಟ ಗ್ರಾಮದಲ್ಲಿ. ಸ್ವಚ್ಚ ಪರಿಸರದಲ್ಲಿ ಎಲ್ಲಾ ಅಗತ್ಯತೆಗಳು ಕೈಗೆಟಕುವಂತೆ ಸ್ವತಂತ್ರವಾಗಿ ಗ್ರಾಮ ಅಭಿವೃದ್ಧಿಯಾಗುತ್ತಿದೆ.

ಈ ಮಧ್ಯೆ ಅನಾಥ ಶವವಾದದ್ದು ಮಾತ್ರ ಇಲ್ಲಿಯ ಬಿಎಸ್ಎನ್ಎಲ್ ಬ್ಯುಲ್ಡಿಂಗ್. ಊರ ಜನರು ಮೊದಲೆಲ್ಲಾ ಕರೆಂಟ್ ಇಲ್ಲದೇ ನೆಟ್ವರ್ಕ್ ತಪ್ಪಿತೆಂದರೆ ಸಾಕು ಆಗಾಗ್ಗೆ ಕರೆ ಮಾಡಿ ಬಿಎಸ್ಎನ್ಎಲ್ ಯಾವಾಗ ಸರಿ ಆಗೋದು ಅಂತ ತಲೆ ತಿನ್ನೋದು ಏನು… ತಲೆ ಪರಚಿಕೊಂಡು ರೇಂಜ್ ಗಾಗಿ ಪರದಾಡೋದು ಏನು… ಆದರೆ ಈಗ ಇದೇ ಬಿಎಸ್ಎನ್ಎಲ್ ಬಡ ಗ್ರಾಮಕ್ಕೆ ಬಡವಾಗಿ ಹೋಯ್ತಾ ?…

ಹೊಸ ರಿಯಾಯಿತಿಗಳಿಗೆ ಮಾರು ಹೋಗಿ ಕೈ ಹಿಡಿದು ಬೆಳೆಸಿದ ಆ ಒಂದು ಹುಟ್ಟು ನೆನಪನ್ನು ಮರೆಯುವಂತಾಯ್ತಾ ?… ಗೊತ್ತಿಲ್ಲ. ಆದರೆ ಹಳ್ಳಿಗರಿಗೆ ಮಾತ್ರ ಈ ಬಿಎಸ್ಎನ್ಎಲ್ ನೆಟ್ವರ್ಕ್ ನ್ನು ತಲುಪಿಸುವಲ್ಲಿ ಹಗಲು ರಾತ್ರಿ ಗುಡುಗು ಸಿಡಿಲಿಗೆ ಭಯ ಬೀಳದೆ ಕತ್ತಲಲ್ಲೂ ಎಚ್ಚೆತ್ತು ಕುಳಿತು ನೆಟ್ವರ್ಕ್ ಸರಿಪಡಿಸುತ್ತಿದ್ದ ಆ ನೌಕರರು…..?? ಯಾರು… ಆ ಶ್ರಮದ ಬೆವರನ್ನು ಕೇಳೋರು ಯಾರು..? ಪ್ರಶ್ನಿಸೋರು ಯಾರು…? ಕೆಲಸಕ್ಕೆ ಸರಿಯಾಗಿ ಸಂಬಳ ದೊರೆಯದೇ ಇದ್ದರೂ ಮತ್ತದೇ ಕೆಲಸದಲ್ಲಿ ಮಗ್ನರಾಗಿ ಬಿಡುವ ಆ ನೌಕರರ ಬದುಕನ್ನ ಯಾರಾದ್ರೂ ಯೋಚನೆ ಮಾಡಿದ್ರಾ..?

ತಿಂಗಳಿಗೆ ಮೂರ್ನಾಲ್ಕು ದಿನ ದೂರದೂರಿಗೆ ಹೋಗಿ ಆ ಬಿಸಿಲಿಗೆ ಒಣಗಿಕೊಂಡು ಕೆಲಸದ ಉಳಿವಿಕೆಗಾಗಿ ಹೋರಾಟ ನಡೆಸುತ್ತಿದ್ದ ಅದೆಷ್ಟೋ ಬಿಎಸ್ಎನ್ಎಲ್ ನೌಕರರ ಕೂಗನ್ನು ಒಬ್ಬರಾದರೂ ಕೇಳಿಸಿಕೊಂಡವ್ರು ಇದ್ದಾರಾ ಸ್ವಾಮಿ!.. ನೆಟ್ವರ್ಕ್ ಹೋದಾಗ ಆಗಾಗ್ಗೆ ಕರೆ ಮಾಡಿ ಪರಚುತ್ತಿದ್ದವರೆಲ್ಲಿ ?..ಹೌದು ಯಾರೂ ಇಲ್ಲ ಉಳಿದದ್ದು ಏಕಾಂಗಿ ಬ್ಯುಲ್ಡಿಂಗ್ ಹಾಗೂ ಅದರ ಹತ್ತಿರದ ಬಿಎಸ್ಎನ್ಎಲ್ ಟವರ್, ಜೊತೆಗೆ ನೌಕರರ ನೋವಿನ ಆಕ್ರಂದನ ಮಾತ್ರ. ಧ್ವನಿ ಎತ್ತಿ ಕೇಳಲು ಒಂದೂ ಧೈರ್ಯದ ಮುಖಗಳಿಲ್ಲ. ಹಳ್ಳಿಗರೆಂದರೆ ಅಮಾಯಕರು ನಿಜ ಆದರೆ ಅಲ್ಲಿ ಕೆಲಸ ಮಾಡುವ ನೌಕರರೂ ಹಗಲು ರಾತ್ರಿಯೆನ್ನದೆ ನಿಷ್ಟೆಯಿಂದ ಕೆಲಸ ಮಾಡುತ್ತಿದ್ದಾರೆ ಅಂತ ಕಂಡೂ ಅವರ ಹೊಟ್ಟೆಗೆ ಮತ್ತೆ ತಣ್ಣೀರ ಬಟ್ಟೆಯೇ ಗತಿಯೆಂದು ಹಾಹಾಕರ ನಡೆಸುವ ಅಧಿಕಾರಿಗಳೆಲ್ಲಿ…?

ಭಾಷಣದಲ್ಲಿ ಧ್ವನಿ ಎತ್ತಿ ಮಾತಾಡಿ ಚಪ್ಪಾಳೆಗಿಟ್ಟಿಸಿಕೊಳ್ಳೊ ಕೆಲ ರಾಜಕಾರಣಿಗಳಿಗೆ ಈ ಒಂದು ಹಳ್ಳಿಯ ಟವರ್ ಬಡವಾಗಿ ಕಂಡಿತಾ…? ಯಾಕೆ ಸ್ವಾಮಿ….! ಪೆಟ್ಟು ತಿಂದವರಿಗೇ ಪೆಟ್ಟು ಕೊಡೋದು…. ಹೇಳೋರು ಕೇಳೋರು ಇಲ್ಲ ಅಂತ ನೌಕರರ ಹೊಟ್ಟೆಪಾಡನ್ನು ಯಾಕೆ ಕಸಿದುಕೊಳ್ಳೋದು ಅಂತ ಕೇಳಿಯೇ ಬಿಟ್ಟರೆಂದರೆ, ಇಲ್ಲ ಸಲ್ಲದ ಆರೋಪದಲ್ಲಿ ಒಳಗೆ ಹಾಕಿಸೋ ಪ್ಲಾನ್ ಬೇರೆ. ಇದು ಅರಂತೋಡಿನಂತಹ ಗ್ರಾಮದಲ್ಲಿ ಅಲ್ಲ ಇನ್ನು ಕೆಲ ಹಳ್ಳಿ ಪ್ರದೇಶದಲ್ಲೂ ಅಷ್ಟೇ ಬಿಎಸ್ಎನ್ಎಲ್ ನೆಟ್ವರ್ಕ್ ನ್ನೇ ನಂಬಿ ಬದುಕಿದವರಿಗೀಗ ಅದರ ಸೌಲಭ್ಯತೆಗಳೇ ಸಿಗುತ್ತಿಲ್ಲ.

ನೌಕರರು ಪಾಪ ಸಂಬಳವಿಲ್ಲದೆ ಉದ್ಯೋಗದಲ್ಲಿ ಆಸಕ್ತರಿದ್ದರೂ ಕೈ ಚೆಲ್ಲಿ ಕುಳಿತುಕೊಳ್ಳುವಂತಹಾ ಪರಿಸ್ಥಿತಿ ಬಂದೊದಗಿದೆ.

ಇಂತಹಾ ಅದೆಷ್ಟೋ ನೌಕರರ ಕೂಗನ್ನು ಕೇಳುವವರೂ ಇಲ್ಲ, ಕೇಳಿಸಿದರೂ ಅದಕ್ಕೆ ಪರಿಹಾರೋಪಾಯವನ್ನು ನೀಡುವವರು ಇಲ್ಲ. ಕಣ್ಣಿಗೆ ಬಟ್ಟೆ ಕಟ್ಟಿ ಕತ್ತಲ ಸಾಮ್ರಾಜ್ಯದಲ್ಲಿ ಆಡಿ ಉಳಿಯುವ ಪರಿಸ್ಥಿತಿ ಇದೀಗ ಹಳ್ಳಿಗಳಲ್ಲಿ ಅಳಿದುಳಿದ ಬಿಎಸ್ಎನ್ಎಲ್ ನದ್ದಾಗಿದೆ.

– ಲಿಖಿತಾ ಗುಡ್ಡೆಮನೆ.

Comments are closed.