ರೈತನನ್ನು ಲಾಕ್ ಡೌನ್ ಮಾಡುವ ಶಕ್ತಿ ಯಾರಿಗಿದೆ ? | ಕೃಷಿ ಚಟುವಟಿಕೆಗೆ ಲಾಕ್ ಡೌನ್ ಅನ್ವಯಿಸಲ್ಲ !

ಇದೀಗ ಬಂದ ಕೇಂದ್ರದ ನಿರ್ಧಾರ !

ಕೃಷಿ ಚಟುವಟಿಕೆಗೆ, ಅದಕ್ಕೆ ಸಂಬಂದಿಸಿದ ಎಲ್ಲ ವ್ಯವಹಾರಗಳಿಗೆ ಲಾಕ್ ಡೌನ್ ವಿನಾಯಿತಿ ಘೋಷಿಸಿದೆ. ಈ ಬಗ್ಗೆ ಕೇಂದ್ರ ಸರಕಾರ, ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿದೆ. ಅಗತ್ಯ ಕೃಷಿ ಉಪಕರಣ ಮಾರಾಟ, ಸಾಗಾಟ, ಗೊಬ್ಬರ ಮತ್ತು ಕೀಟನಾಶಕದ ಅಂಗಡಿಗಳು ಕಾರ್ಯನಿರ್ವಹಿಸಲಿವೆ.

ಸುಧಾಕರ್ ಸಂಕೇಶ ಎಂಬವರು ಬರೆದ ಕೃಷಿ ಸಂಬಂಧಿತ ಲೇಖನ – whats app ಮೂಲ

ಎಲ್ಲರೂ ಒದ್ದಾಡುತ್ತಿರುವಾಗ ನಾನು ಈ ಮಾತುಗಳನ್ನು ಹೇಳ್ತಿದೇನೆ. ತಪ್ಪು ಅನ್ನಿಸಿದರೆ ದಯಮಾಡಿ ಕ್ಷಮಿಸಿ. ಆದರೆ ಹೇಳದೇ ಇರಲಾರೆ.

ಈ ಕರೋನಾ ಮಾರಿ ಸಧ್ಯಕ್ಕೆ ನಮ್ಮ ಬದುಕಿನಲ್ಲಿ ಯಾವ ದೊಡ್ಡ ಬದಲಾವಣೆಯನ್ನೂ ತಂದಿಲ್ಲ. ನಾವು ಕೃಷಿಕರಿಗೆ ಮನೆ ಅಂದ್ರೆ ತೋಟದ ಗಡಿಯವರೆಗೂ ವಿಸ್ತರಿಸಿರುತ್ತದೆ. ಆದ್ದರಿಂದ ಮನೆ ಒಳಗೆ ಬಾಗಿಲು ಹಾಕಿ ಕೂರುವ ಅಗತ್ಯ ಬಂದಿಲ್ಲ. ಬಹುಶಃ ತೊಂದರೆ ಆಗೋದಿದ್ರೆ ನಾವು ಕೊನೆಯದಾಗಿ ಇರುತ್ತೇವೆ.

ಮಕ್ಕಳಿಗೆ ರಜೆ ಬೇಗ ಶುರು ಆಯ್ತು ಅಷ್ಟೇ. ಈಗ ದಿನಾ ಬೆಳಗ್ಗೆ ಮಕ್ಕಳನ್ನು ಕರೆದುಕೊಂಡು ಹೋಗಿ 5 ಚೀಲ ಧರ್ಗು ಮಾಡಿ ತೋಟಕ್ಕೆ ತಂದು ಹಾಕ್ತಾರೆ. ದನಗಳಿಗೆ ಹಾಳೆ, ಬಾಳೆಗಿಡ ತರ್ತಾರೆ. ಇದರ ಜೊತೆಗೆ ಮಕ್ಕಳು ಮನೆ ಗುಡಿಸಿ, ಒರೆಸಿ, ಪಾತ್ರೆ ತೊಳೆಯೋದು ಕೊಟ್ಟಿಗೆ ಕೆಲಸವನ್ನೂ ಮಾಡ್ತಾರೆ. ಮದ್ಯಾಹ್ನದ ನಂತರ ಅವರ ಸಮಯ. ಸಂಜೆ 1 ಗಂಟೆ ತರಕಾರಿ ಹಿತ್ತಲ ಕೆಲಸ ಮಾಡಿ ಆಟ ಆಡ್ತಾರೆ. ಈ ಥರದ ಕೃಷಿ ಬದುಕಲ್ಲಿ ಮನೆಯೊಳಗೆ ಬಂಧಿಯಾಗುವ ಕಷ್ಟವಿಲ್ಲ. ಮಕ್ಕಳಿಗೆ ಬೇಸರವಾಗುವ ಸಂದರ್ಭವೂ ಇಲ್ಲ.

ನಂಗೆ “ಏನಿದೆ ಕೃಷಿಯಲ್ಲಿ ಅಂತ ಬಂದೆ ಇಲ್ಲಿಗೆ, ನನಗಂತೂ ಇಷ್ಟವಿಲ್ಲಪ್ಪ, ಸೆಗಣಿ ವಾಸನೆ ಅಂದ್ರೆ ಆಗಲ್ಲಪ್ಪ” ಅಂತ ಹೇಳಿದವರು ತುಂಬಾ ಜನ ಇದ್ದಾರೆ. ಆವತ್ತೂ ಇವತ್ತು ಮುಂದೆನೂ ನನ್ನದು ಒಂದೇ ಮಾತು ” ನನಗೆ ಕೃಷಿ ಬದುಕೇ ಸ್ವರ್ಗ. ಇದು ನನ್ನ ಸ್ವಂತ ನಿರ್ಧಾರದ ಆಯ್ಕೆ”. ಬಹುಶಃ ಇವತ್ತು ಆ ಹಲವರು 30×40, 40×60 ಜಾಗದಲ್ಲಿ ಬಂಧಿಯಾಗಿದ್ದಾರೆ. ನಾನು ಇಲ್ಲಿ ಆರಾಮವಾಗಿದ್ದೇನೆ. 2 ತಿಂಗಳ ಅಕ್ಕಿ ಇದ್ದೇ ಇರುತ್ತೆ. ತೋಟದಲ್ಲಿ ಸೊಪ್ಪು ಸಿಗುತ್ತೆ, ಹಿತ್ತಲಲ್ಲಿ ತರಕಾರಿ ಇದೆ, ಕೊಟ್ಟಿಗೆಯಲ್ಲಿ ಹಾಲು ಕರೆಯುವ 2 ದನಗಳಿವೆ, ತೆಂಗಿನ ಮರದಲ್ಲಿ ಕಾಯಿಗಳಿವೆ. ಪಪ್ಪಾಯ, ಚಿಕ್ಕು, ಬಾಳೆ ಹಣ್ಣುಗಳಿವೆ. ಬದುಕು ನಿರಂತವಾಗಿ ಸಾಗುತ್ತಿದೆ. ಇನ್ನು 3-4 ತಿಂಗಳು ಪೇಟೆಗೆ ಹೋಗದೇನೂ ನಾವು ಆರಾಮವಾಗಿ ಇರುವಷ್ಟು ಸೌಲಭ್ಯವಿದೆ.

ಕೃಷಿ ಬದುಕನ್ನು ಅಸಡ್ಡೆ ಮಾಡುವವರು ಈಗಲಾದರೂ ಸ್ವಲ್ಪವಾದರೂ ಅರಿತುಕೊಳ್ಳಿ. ಎಲ್ಲದರ ಕೊನೆಗೆ ಆಸರೆ ಸಿಗುವುದು ತಾಯಿಯ ಮಡಿಲಲ್ಲೇ. ಬೇರೆಲ್ಲೂ ಇಲ್ಲ. ಇನ್ನಾದರೂ ಹುಡುಗಿಯರು ಕೃಷಿ ಬದುಕಿಗೆ ಬನ್ನಿ. ಕೃಷಿಕರನ್ನು ಮದುವೆಯಾಗಿ. ತೋಟವಿದ್ದೂ ಪೇಟೆಗೆ ಹೋದವರು ಮತ್ತೆ ಮರಳಿ ಬನ್ನಿ. ಶ್ರಮ ಪಟ್ಟು ಕೃಷಿ ಮಾಡಿ. ಪೇಟೆಗಳಲ್ಲಿ ಮೂರು ನಾಲ್ಕು ಸೈಟು, ಕಾಷ್ಟ್ಲಿ ಕಾರು ತಗೊಳೋದು ಬಿಟ್ಟು ಕೃಷಿ ಭೂಮಿ ಖರೀದಿಸಿ.ಇದ್ಯಾವುದೂ ಆಗದೇ ಇದ್ರೆ ಕಡೇಪಕ್ಷ ಕೃಷಿಯ ಬಗ್ಗೆ ಅಸಡ್ಡೆ, ಹೇಸಿಗೆ ಎನ್ನುವ ಮನಸ್ಥಿತಿಯನ್ನಾದರೂ ಬದಲಾಯಿಸಿಕೊಳ್ಳಿ.

ಮರಳಿ ತಾಯಿಯ ಮಡಿಲಿಗೆ ಬನ್ನಿ. ನೆಮ್ಮದಿ ಇಲ್ಲೇ ಇದೆ.

  • ಇಂತಿ, ಸುಧಾಕರ್ ಸಂಕೇಶ

Leave A Reply

Your email address will not be published.