ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದ ಜಿಲ್ಲಾಡಳಿತಕ್ಕೆ ಮನವಿ

ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ ದ.ಕ, ಉಡುಪಿ ಜಿಲ್ಲೆಗಳ ಹಾಲಿನ ಡಿಪೋಗಳಲ್ಲಿ ಇಂದು ಸಂಜೆಯಿಂದ ಹಾಲು ಖರೀದಿಯನ್ನು ನಿಲ್ಲಿಸಲಾಗಿದೆ. ಹಾಲು ಉತ್ಪಾದಿಸುವ ರೈತರು ಆತಂಕಿತರಾಗಿದ್ದಾರೆ. ಜಿಲ್ಲಾಡಳಿತ ಇತ್ತ ಗಮನಹರಿಸಬೇಕಾಗಿದೆ.

ಜಿಲ್ಲಾಡಳಿತಕ್ಕೆ ಹಾಲು ಉತ್ಪಾದಕರ ಒಕ್ಕೂಟದಿಂದ ಪತ್ರ

ಮಾನ್ಯರೇ,
ಕೋವಿಡ್ 19 ವೈರಾಣು ಪ್ರಕರಣ ತೀವೃಗೊಂಡ ಈ ವಿಷಮ ಪರಿಸ್ಥಿತಿಯಲ್ಲೂ ಕೂಡ ದಕ್ಷಿಣ ಕನ್ನಡ ಹಾಲು ಒಕ್ಕೂಟವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ರೈತರಿಂದ ಹಾಲನ್ನು ಸ‍ಂಗ್ರಹಿಸಿ ಎರಡೂ ಜಿಲ್ಲೆಗಳ ಗ್ರಾಹಕರಿಗೆ ವಿತರಿಸುತ್ತಿದ್ದು, ಕೋವಿಡ್ 19ನ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಕಾರ್ಯ ನಿರ್ವಹಿಸುತ್ತಿದೆ.

ಹಾಲು ಮತ್ತು ಹಾಲಿನ ಉತ್ಪನ್ನಗಳು ಅತ್ಯಗತ್ಯ ವಸ್ತುಗಳ ಅಡಿಯಲ್ಲಿ ಬರುವದರಿಂದ ನಂದಿನಿ ಬಳಗದ ನಾವೆಲ್ಲರೂ ಕೂಡ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದೇವೆ. ಆದರೆ ದಿನಾಂಕ 27-03-2020ರ ರಾತ್ರಿ ಟಿ.ವಿ. ಮಾಧ್ಯಮಗಳಲ್ಲಿ ದಿನಾಂಕ 28-03-2020 ರಂದು ಅತ್ಯಗತ್ಯ ವಸ್ತುಗಳನ್ನೂ ಒಳಗೊಂಡಂತೆ ದಕ್ಷಿಣ ಕನ್ನಡ ಜಿಲ್ಲೆಯು ಸಂಪೂರ್ಣ ಬಂದ್ ಎಂಬ ವರದಿ ಬಿತ್ತರವಾಗಿರುವುದರಿಂದ ಹಾಗೂ ಪೋಲೀಸ್ ಇಲಾಖೆಯಿಂದ ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯಬಾರದೆಂಬ ಕಟ್ಟು ನಿಟ್ಟಿನ ಸಂದೇಶ ರವಾನೆಯಾಗಿರುವುದರಿಂದ ನಮ್ಮ ನಂದಿನಿ ಡೀಲರ್ ಗಳು ಅಂಗಡಿ ತೆರೆಯಲಾರದೆ ಹಾಲನ್ನು ಸ್ವೀಕರಿಸದಿರುವುದರಿಂದ ಮಾರುಕಟ್ಟೆಗೆ ರವಾನಿಸಿದ ಸಂಪೂರ್ಣ ಹಾಲು ಡೇರಿಗೆ ಹಿಂತಿರುಗಿ ಬಂದಿರುತ್ತದೆ.

ದ.ಕ.ಹಾಲು ಒಕ್ಕೂಟದಲ್ಲಿ ಈಗಾಗಲೇ ಹಾಲಿನ ಶೇಖರಣೆ ದಾಸ್ತಾನು ಸುಮಾರು 9 ಲಕ್ಷದಷ್ಟಿದ್ದು, ಹಿಂತಿರುಗಿ ಬಂದಿರುವ ಹಾಲು ಸೇರಿ ದಾಸ್ತಾನು ಇನ್ನಷ್ಟು ಹೆಚ್ಚಾಗಲಿದೆ. ಹಾಗೂ ಇವತ್ತು ರೈತರಿಂದ ಹಾಲು ಶೇಖರಣೆ ಮುಂದುವರಿದಲ್ಲಿ ಹಾಲು ಮತ್ತಷ್ಟು ಹೆಚ್ಚಾಗಲಿದೆ. ಇದಲ್ಲದೆ ಹೆಚ್ಚಾದ ಹಾಲನ್ನು ಪೌಡರ್‍ ಆಗಿ ಪರಿವರ್ತಿಸಲು, ಚನ್ನರಾಯ ಪಟ್ಟಣ, ಧಾರವಾಡ, ಮದರ್‍ ಡೇರಿ, ಮಂಡ್ಯ ಮುಂತಾದ ಎಲ್ಲಾ ಕಡೆಯ ಪರಿವರ್ತನಾ ಘಟಕಗಳಲ್ಲಿ ಈಗಾಗಲೇ ತುಂಬಾ ದಾಸ್ತಾನು ಬಾಕಿ ಇರುವುದರಿಂದ ಪರಿವರ್ತನೆ ಕೂಡಾ ಅಸಾಧ್ಯ.

ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ನಮ್ಮ ಹಾಲು ಒಕ್ಕೂಟದ ಸ್ಥಿತಿ ಚಿಂತಾಜನಕವಾಗಲಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಇಲ್ಲದಿದ್ದಲ್ಲಿ ಒಂದೋ ರೈತರಿಂದ ಹಾಲು ಖರೀದಿ ಸ್ಥಗಿತಗೊಳಿಸಲು ಅವಕಾಶ ಕೊಡುವುದು, ಇಲ್ಲವೇ ಹಾಲು ಮಾರಾಟಕ್ಕೆ ಅಂಗಡಿ ಮುಂಗಟ್ಟುಗಳ ತೆರೆಯುವಿಕೆಗೆ ಅವಕಾಶ ಕೊಡಿಸುವುದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷನಾದ ನಾನು ತಮ್ಮಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ.

  • ಇತಿ ತಮ್ಮ ವಿಶ್ವಾಸಿ, ರವಿರಾಜ ಹೆಗ್ಡೆ, ಅಧ್ಯಕ್ಷರು ದ.ಕ.ಹಾಲು ಒಕ್ಕೂಟ. ಕುಲಶೇಖರ, ಮಂಗಳೂರು.

Leave A Reply

Your email address will not be published.