ಕುಡಿಯಲು ಫಿಡ್ಕ ಸಿಗದೆ ಪರದಾಡಿ ಕೊನೆಗೆ ಮದ್ಯವ್ಯಸನಿ ಆತ್ಮಹತ್ಯೆ
ಕೇರಳ, ತ್ರಿಶೂರ್ : ಕೊರೋನಾವೈರಸ್ ಹಾವಳಿಯಿಂದ ಭಾರತ ಲಾಕ್ ಡೌನ್ ಆಗಿರುವ ಕಾರಣ ಕಳ್ಳು, ವೈನ್ ಶಾಪ್, ಬಾರ್, ಪಬ್ ಗಳು ಮುಚ್ಚಿದ್ದು ಯಾವುದೇ ಲಿಕ್ಕರ್ ಕುಡಿಯಲು ಸಿಗದ ಕಾರಣ ಬೇಸರಗೊಂಡ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಕುನ್ನಮಕುಳಂ ನ ಸಮೀಪದ ತವನೂರಿನಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು. ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ಸನೋಜ್ ನೆ ನೇಣು ಬಿಗಿದುಕೊಂಡ ವ್ಯಕ್ತಿ.
ಕಳೆದ ಎರಡು ದಿನಗಳಿಂದ ಕುಡಿಯಲು ಮದ್ಯ ಸಿಗದೆ ಆತ ಪಡಿಪಾಟಲು ಪಡುತ್ತಿದ್ದ. ಅದಕ್ಕಾಗಿ ಪೊಲೀಸರ ಕಣ್ಣು ತಪ್ಪಿಸಿ ಊರೂರು ಅಲೆದಿದ್ದ. ಆದರೂ ಆತನಿಗೆ ಒಂದು ಹನಿ ದ್ರವ ಸಿಕ್ಕಿರಲಿಲ್ಲ. ಅದರಿಂದ ಆತ ಬಹಳ ನಿರಾಶನಾಗಿದ್ದ. ಏನೂ ಮಾಡಲಾಗದೆ ಆತ ಎರಡು ದಿನದಿಂದ ಪರಿತಪಿಸುತ್ತಿದ್ದ. ಬೆಳಿಗ್ಗೆ ಎದ್ದು ನೋಡಿದರೆ, ಆತ ನೇಣಿನಲ್ಲಿ ನೇತಾಡುತ್ತಿದ್ದ.
ಈ ರೀತಿ ಹಠಾತ್ ಆಗಿ ಲಿಕ್ಕರ್ ಬಂದ್ ಮಾಡುವುದರಿಂದ ಮದ್ಯವ್ಯಸನಿಗಳು ಬಾಧೆಪಡುತ್ತಾರೆ. ದಿನನಿತ್ಯ ಕುಡಿದು ಅದಕ್ಕೆ ಅಭ್ಯಾಸ ಗೊಂಡ ಮನಸ್ಸು ಮತ್ತು ದೇಹ ಮದ್ಯವಿಲ್ಲದೇ ಥರಗುಟ್ಟುತ್ತದೆ. ದೇಶದಲ್ಲಿಯೇ ಅತ್ಯಂತ ಅಧಿಕ ಮದ್ಯಪಾನ ಸೇವನೆಯನ್ನು ಮಾಡುವ ಕೇರಳದಲ್ಲಿ ಮದ್ಯ ವ್ಯಸನಿಗಳ ಸಂಖ್ಯೆ ಅತಿ ಹೆಚ್ಚಾಗಿದೆ. ಒಂದು ಅಂದಾಜಿನ ಪ್ರಕಾರ ಕೇರಳದ 30% ಪುರುಷರು ಮದ್ಯದ ಮಲ್ಲರು. ಅಂತಹವರು ಹಠಾತ್ತನೆ ಮದ್ಯಸೇವನೆ ನಿಲ್ಲಿಸುವುದು ಮನೋ ದೈಹಿಕ ಸಮಸ್ಯೆ ತಂದೊಡ್ಡುತ್ತದೆ. ಹಠಾತ್ತಾಗಿ ಮದ್ಯದ ಸೇವನೆ ನಿಲ್ಲಿಸುವುದು ವ್ಯಕ್ತಿಯ ಸಾವಿಗೂ ಕಾರಣ ಆಗಬಹುದು. ಅಲ್ಲದೆ ಮದ್ಯವಿಲ್ಲದ ವ್ಯಕ್ತಿ ಸೌಮ್ಯ ಸ್ವಭಾವದವನಾದರೆ ಆತ್ಮಹತ್ಯೆಗೂ, ಅದೇ ಅಗ್ರೆಸ್ಸಿವ್ ವ್ಯಕ್ತಿತ್ವದವನು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಬಹುದು. ಅದು ಕೌಟುಂಬಿಕ ಕಲಹಕ್ಕೂ ದಾರಿ ಮಾಡಬಹುದು.
ಈ ಮಧ್ಯೆ ಕೇರಳದ ಸರಕಾರ ‘ವಿಮುಕ್ತಿ’ ಎಂಬ ರಿಹ್ಯಬಿಲಿಟೇಶನ್ ಸೆಂಟರ್ ಅನ್ನು ತೆರೆದಿದ್ದು ಅವುಗಳಲ್ಲಿ ಈ ಮದ್ಯವ್ಯಸನಿಗಳನ್ನು ‘ಟ್ರೀಟ್’ ಮಾಡುವ ಪ್ರಯತ್ನ ಸಾಗಿದೆ.