ಸವಣೂರು | ಕೊರೊನಾ ಜಾಗೃತಿ ,ಆರೋಗ್ಯ ಇಲಾಖೆಯ ಸಿಬಂದಿಗಳ ಕರ್ತವ್ಯಕ್ಕೆ ಅಡ್ಡಿ
ಕಡಬ : ಕೊರೊನಾ ಜಾಗೃತಿಗಾಗಿ ಮನೆ ಮನೆ ಬೇಟಿ ನೀಡಿ ಜಾಗೃತಿ ಮೂಡಿಸುತ್ತಿರುವ ಆರೋಗ್ಯ ಇಲಾಖೆಯ ಸಿಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಕಡಬ ತಾಲೂಕಿನ ಸವಣೂರಿನಲ್ಲಿ ಮಾ.23ರಂದು ನಡೆದಿದೆ.
ಸವಣೂರು ರೈಲ್ವೇ ಗೇಟ್ ಸಮೀಪ ಇರುವ ವಸತಿ ಸಮುಚ್ಚಯದಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಕಡಬ ಮೂಲದ ವ್ಯಕ್ತಿಯೋರ್ವರು ವಿದೇಶದಿಂದ ಬಂದು ಸವಣೂರಿನಲ್ಲಿ ತಮ್ಮ ಸಂಬಂಧಿಕರ ಮನೆಗೆಂದು ಬಂದಿದ್ದರು ಎಂಬ ಮಾಹಿತಿ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿತ್ತು.
ಇದರಂತೆ ಆರೋಗ್ಯ ಇಲಾಖೆಯವರು ಆ ವ್ಯಕ್ತಿಯ ಕುರಿತಂತೆ ಮಾಹಿತಿ ಕೇಳಿದ್ದರು ಹಾಗೂ ಕೊರೊನಾ ಜಾಗೃತಿ ಕರ ಪತ್ರ ನೀಡಿ ಭಾವಚಿತ್ರ ತೆಗೆಯುವ ಸಂದರ್ಭದಲ್ಲಿ ಅಲ್ಲಿದ್ದ ವ್ಯಕ್ತಿಯೋರ್ವರು ಮಾಸ್ಕ್ ಹಾಕಿ ನಮ್ಮ ಮನೆ ಬಳಿಗೆ ಯಾಕೆ ಬಂದಿದ್ದಿರಿ ಎಂದು ಪ್ರಶ್ನಿಸಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ಆರೋಗ್ಯ ಕಾರ್ಯಕರ್ತೆಯರು ವೈದ್ಯಾಽಕಾರಿ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರು.ವೈದ್ಯಾಧಿಕಾರಿ ಸ್ಥಳಕ್ಕೆ ಬಂದು ಮಾಹಿತಿ ಪಡೆದುಕೊಂಡು ತಮ್ಮ ಉನ್ನತಾಧಿಕಾರಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಕ್ರಮಕ್ಕೆ ಆಗ್ರಹ
ದಿನೇ ದಿನೇ ಕೊರೊನಾ ವೈರಸ್ ಪ್ರಕರಣ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸುತ್ತಿರುವ ಆರೋಗ್ಯ ಇಲಾಖೆಯವರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.