ನಿರ್ಭಯಾ ಅತ್ಯಾಚಾರಿಯೊಬ್ಬ ಗಲ್ಲು ಶಿಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲು ಮಾಸ್ಟರ್ ಪ್ಲಾನ್ ಮಾಡಿದ್ದಾನೆ | ವಿಚ್ಛೇದನಕ್ಕೆ ಆತನ ಪತ್ನಿ ಅರ್ಜಿಹಾಕಿದ್ದಾಳೆ !

Share the Article

ನವದೆಹಲಿ (ಮಾ. 18): ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳೆಂದು ಘೋಷಿಸಲ್ಪಟ್ಟಿರುವ ನಾಲ್ವರಿಗೆ ಮಾರ್ಚ್​ 20 ರಂದು ಬೆಳಗ್ಗೆ 5.30 ಕ್ಕೆ ಗಲ್ಲುಶಿಕ್ಷೆ ವಿಧಿಸುವುದು ಎಂದು ನಿರ್ಧಾರವಾಗಿದೆ. ಇನ್ನೇನು ಗಲ್ಲಿಗೆ ಎರಡು ದಿನ ಇದೆ ಎನ್ನುವಷ್ಟರಲ್ಲಿ ಆ ನಾಲ್ವರಲ್ಲಿ ಓರ್ವ ಅಪರಾಧಿಯ ಹೆಂಡತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಕೊನೆಯ ಗಳಿಗೆಯಲ್ಲಿ ಈ ರೀತಿ ಹೆಂಡತಿಯ ಕೈಯಿಂದ ವಿಚ್ಛೇದನದ ಅರ್ಜಿ ಹಾಕಿರುವುದು ಗಲ್ಲು ಶಿಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲು ಎಂದೇ ವಿಶ್ಲೇಷಿಸಲಾಗುತ್ತಿದೆ.

2012 ರ ದೆಹಲಿಯ ನಿರ್ಭಯಾ ಪ್ರಕರಣದ ನಾಲ್ಕೂ ಜನ ಅಪರಾಧಿಗಳು ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಮತ್ತೊಬ್ಬ ಮುಖ್ಯ ಆರೋಪಿ ವಿಚಾರಣಾಧೀನ ಹಂತದಲ್ಲೇ ಜೈಲಿನಲ್ಲೇ ನೇಣು ಹಾಕಿಕೊಂಡು ಸಾವು ತಂದುಕೊಂಡಿದ್ದ. ಮತ್ತೊಬ್ಬ ಬಾಲಾಪರಾಧಿ ಆದ ಕಾರಣ ಬಚಾವಾಗಿದ್ದ. ಈಗ ಇರುವ ನಾಲ್ವರನ್ನು ಇದೇ ಮಾರ್ಚ್ 20 ರಂದು ಬೆಳಿಗ್ಗೆ 5.30 ಕ್ಕೆ ನೇಣಿಗೇರಿಸುವಂತೆ ಎಂದು ದೆಹಲಿ ನ್ಯಾಯಲಯ ಡೆತ್ ವಾರೆಂಟ್ ಜಾರಿಗೊಳಿಸಿದೆ.

ಅಪರಾಧಿಗಳಾದ ಮುಖೇಶ್ ಕುಮಾರ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ ಸಿಂಗ್ ಠಾಕೂರ್ (31)ರನ್ನು ನ್ಯಾಯಾಲಯ ಆದೇಶಿಸಿದೆ. ಅದರ ಮಧ್ಯೆ ಮೂರು ಜನ ಆರೋಪಿಗಳು ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ತಮ್ಮ ಗಲ್ಲು ಶಿಕ್ಷೆ ತಡೆಯುವಂತೆ ಕೊರಿಕೊಂಡಿದ್ದಾರೆ. ಇದೀಗ ಒಬ್ಬ ಆರೋಪಿ ಅಕ್ಷಯ್ ಸಿಂಗ್ ಠಾಕೂರ್ ನ ಹೆಂಡತಿ ಪುನೀತಾ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದಾಳೆ. ಔರಂಗಾಬಾದ್​ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್​ ಕೋರಿರುವ ಅಕ್ಷಯ್ ಸಿಂಗ್ ಠಾಕೂರ್ ನ ಪತ್ನಿ ಪುನೀತಾ ತನ್ನ ಗಂಡನ ಈ ಹೀನ ಕೃತ್ಯದ ನೆರಳಿನಿಂದ ಹೊರಬರಲು ತನಗೆ ಸಾಧ್ಯವಾಗುತ್ತಿಲ್ಲ.

ಆತ ಈ ಕೃತ್ಯ ಎಸಗಿಲ್ಲ ಎಂದು ಎಷ್ಟೇ ಸಮಜಾಯಿಷಿ ನೀಡಿದರೂ ಜೀವನಪೂರ್ತಿ ನಿರ್ಭಯಾ ಅತ್ಯಾಚಾರಿ ಅಕ್ಷಯ್ ಸಿಂಗ್ ಠಾಕೂರ್ ಹೆಂಡತಿ ಎಂಬ ಲೇಬಲ್ ನೊಂದಿಗೇ ಗುರುತಿಸಿಕೊಂಡು ವಿಧವೆಯಾಗಿ ಬದುಕುವುದು ನನಗೆ ಇಷ್ಟವಿಲ್ಲ. ಆತ ಗಲ್ಲಿಗೇರುವ ಮೊದಲು ತಮಗೆ ವಿಚ್ಛೇದನ ನೀಡಿ ಎಂದು ಅರ್ಜಿ ಸಲ್ಲಿಸಿದ್ದಾಳೆ.

ಈಗಾಗಲೇ ವಿನಯ್ ಶರ್ಮ, ಪವನ್ ಮತ್ತು ಮುಖೇಶ್​ ಸಿಂಗ್ ಕುಟುಂಬದವರ ಜೊತೆ ಅವರಿಗೆ ಮುಖಾಮುಖಿಯಾಗಿ ಕೊನೆಯ ಬಾರಿ ಮಾತನಾಡಲು ಅವಕಾಶ ನೀಡಲಾಗಿದೆ.

ಅಕ್ಷಯ್ ಸಿಂಗ್​ಗೆ ಕುಟುಂಬಸ್ಥರೊಂದಿಗೆ ಮಾತನಾಡಲು ಸಮಯವನ್ನು ಅಂತಿಮಗೊಳಿಸಬೇಕಾಗಿದೆ. ಈಗಾಗಲೇ ಮೂರು ಬಾರಿ ಗಲ್ಲುಶಿಕ್ಷೆಯಿಂದ ತಾತ್ಕಾಲಿಕವಾಗಿ ಈ ನಾಲ್ವರು ಪಾರಾಗಿ ಕೊನೆಗೆ ಇದೇ ಮಾರ್ಚ್ 20 ಕ್ಕೆ ಫೈನಲ್ ಡೇಟ್ ಫಿಕ್ಸ್ ಮಾಡಿತ್ತು.

ಮತ್ತೆ ನಾಲ್ಕನೆಯ ಬಾರಿ ಅವರು ಗಲ್ಲು ಕುಣಿಕೆಯಿಂದ ಪಾರಾಗುತ್ತಾರಾ ಎಂಬುದನ್ನು ಇಡೀ ದೇಶ ಕಾದು ನೋಡುತ್ತಿದೆ.

Leave A Reply

Your email address will not be published.