ಉಪ್ಪಿನಂಗಡಿ ಪೊಲೀಸರ ಛೇಸ್ ಅಂಡ್ ಕ್ಯಾಚ್ | ಉರುಳಿ ಬಿದ್ದ ಟೆಂಪೋದಲ್ಲಿತ್ತು ಅಕ್ರಮ ಗೋಮಾಂಸ
ಉಪ್ಪಿನಂಗಡಿ, ಮಾ.17: ಉಪ್ಪಿನಂಗಡಿ ಪೊಲೀಸರು ಬೆನ್ನಟ್ಟಿದ ಟೆಂಪೊ ಟ್ರಾವೆಲ್ಲರ್ ವೊಂದು ರಾಷ್ಟ್ರೀಯ ಹೆದ್ದಾರಿ 75 ರ ಲಾವತ್ತಡ್ಕ ಎಂಬಲ್ಲಿ ಉರುಳಿಬಿದ್ದ ಘಟನೆ ಇಂದು, ಮಂಗಳವಾರ ಬೆಳಿಗ್ಗೆ ನಡೆದಿದೆ. ಉರುಳಿಬಿದ್ದ ಟೆಂಪೊದಲ್ಲಿ ಅಕ್ರಮ ಗೋಮಾಂಸ ಪತ್ತೆಯಾಗಿದೆ.
ಉಪ್ಪಿನಂಗಡಿಯ ಡೈನಮಿಕ್ ಸಬ್ ಇನ್ಸ್ಪೆಕ್ಟರ್ ವೀರಯ್ಯನವರು ಲಾ ಅಂಡ್ ಆರ್ಡರ್ ನಿಯಂತ್ರಿಸುವಲ್ಲಿ ಮತ್ತು ಪ್ರಕರಣವನ್ನು ಭೇದಿಸುವಲ್ಲಿ ನಿಸ್ಸೀಮರು ಎಂದು ಪ್ರತಿಯೊಬ್ಬರಿಗೂ ಗೊತ್ತು. ಈಗ ಅವರ ಟೀಮು ಚೇಸಿಂಗ್ ಮಾಡಿ ಅಪರಾಧಿಗಳನ್ನು ಹಿಡಿಯುವುದರಲ್ಲೂ ನಿಸ್ಸೀಮರು ಎಂದು ಸಾಬೀತು ಮಾಡಿದ್ದಾರೆ.
ಇಂದು ಬೆಳಗ್ಗಿನ ಜಾವ 5 ರ ಸುಮಾರಿಗೆ ಹಾಸನ ಕಡೆಯಿಂದ ವೇಗವಾಗಿ ಬರುತ್ತಿದ್ದ ಟೆಂಪೊ ಟ್ರಾವೆಲರ್ ನ್ನು ಗುಂಡ್ಯ ಚೆಕ್ ಪೋಸ್ಟ್‌ನಲ್ಲಿ ನಿಲ್ಲಿಸುವಂತೆ ಪೊಲೀಸರು ಕೈ ಅಡ್ಡ ಹಾಕಿದ್ದಾರೆ. ಆದರೆ ಪೊಲೀಸ್ ಸೂಚನೆಯನ್ನು ಧಿಕ್ಕರಿಸಿ ಟೆಂಪೊ ವೇಗವಾಗಿ ನೆಲ್ಯಾಡಿಯತ್ತ ಮುನ್ನುಗ್ಗಿದೆ. ಆಗ ಗಸ್ತಿನಲ್ಲಿದ್ದ ಪೊಲೀಸರು ತಮ್ಮ ಗಾಡಿ ಹತ್ತಿ ಅದರ ಬೆನ್ನು ಬಿದ್ದಿದ್ದಾರೆ. ಸುಮಾರು 18 ಕಿ.ಮೀ.ದೂರ ಟೆಂಪೋ ಸಾಗಿದೆ. ಆದರೂ ಪೊಲೀಸರು ನಿರಂತರ ಅಕ್ಷೆಲೇರೇಟರ್ ಒತ್ತುವುದನ್ನು ನಿಲ್ಲಿಸಿಲ್ಲ. ಆ ಗಾಬರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಉರುಳಿ ಬಿದ್ದಿದೆ. ಉರುಳಿಬಿದ್ದರೂ ಟೆಂಪೋ ದಿಂದ ಚಾಲಕ ಮತ್ತು ಇತರ ಸಹವರ್ತಿಗಳು ಪರಾರಿಯಾಗಿದ್ದಾರೆ.
ಉರುಳಿ ಬಿದ್ದ ಟೆಂಪೊದಲ್ಲಿ ಸುಮಾರು ಗೋಮಾಂಸ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಾಹನ ಸಮೇತ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಬೆಂಗಳೂರು ರಿಜಿಸ್ಟ್ರೇಷನ್ ನ ವಾಹನದ ಓನರ್ ನನ್ನು ಸಂಪರ್ಕಿಸಿ ಆ ಮೂಲಕ ಶೋಧ ಕಾರ್ಯಾಚರಣೆಗೆ ಇಳಿದಿದ್ದಾರೆ.