ಕೊಡಿನೀರು | ನೀರು ಕೊಡಿ ಎಂಬ ಪ್ರಾರ್ಥನೆಗೆ ಜಲಧಾರೆ ನೀಡಿದ ಕಟೀಲಾಂಬೆ | ಸೇವಾರ್ಥ ಇಂದು ಸಂಪೂರ್ಣ ಶ್ರೀ ದೇವಿ ಮಹಾತ್ಮೆ
ಪುತ್ತೂರು : ನೂತನವಾಗಿ ಖರೀದಿಸಿದ ಜಮೀನಿಗೆ ಜಲಧಾರೆ ಕೃಪೆ ನೀಡಿದ ಕಟೀಲು ಶ್ರೀ ದೇವಿಗೆ ಸೇವಾರ್ಥವಾಗಿ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಮಾಡುವ ವಿಶೇಷ ಕಾರ್ಯಕ್ರಮ ನರಿಮೊಗರು ಗ್ರಾಮದ ಕೊಡಿನೀರಿನಲ್ಲಿ ಜರುಗಲಿದೆ.
ಕೊಡಿನೀರಿನಲ್ಲಿ ಜಮೀನು ಖರೀದಿಸಿದ ಪುತ್ತೂರು ಬಾಲಾಜಿ ಪೈಂಟ್ಸ್ ನ ಮಾಲಕ ಕಳುವಾಜೆ ವೆಂಕಟರಮಣ ಗೌಡ ಅವರು ಕೊಡಿನೀರಿನಲ್ಲಿ ಖರೀದಿಸಿದ ಸೈಟ್ ನಲ್ಲಿ ನೀರಿನ ಸಮಸ್ಯೆ ಬಂದಾಗ ಕಟೀಲು ದೇವಿಗೆ ಹರಕೆ ಹೊತ್ತಂತೆ ಉತ್ತಮ ನೀರಿನ ಸಂಪನ್ಮೂಲ ಲಭ್ಯವಾಗಿದೆ.
ಈ ನಿಟ್ಟಿನಲ್ಲಿ ಕಟೀಲು ದೇವಿಯ ಸೇವಾರ್ಥವಾಗಿ ಮಾ.11 ರಂದು ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ನರಿಮೊಗರು ಗ್ರಾಮದ ಕೊಡಿನೀರು ಎಂಬಲ್ಲಿ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಲಿದೆ.
ಸಂಜೆ ಕೊಡಿನೀರು ಅಶ್ವತ್ಥಕಟ್ಟೆಯಲ್ಲಿ ಅಶ್ವತ್ಥ ಪೂಜೆ ಹಾಗೂ 42 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ಕಟೀಲು ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.
ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನ.ಸೀತಾರಾಮ ದೀಪ ಪ್ರಜ್ವಲನೆ ಮಾಡಲಿದ್ದು, ಶಾಸಕ ಸಂಜೀವ ಮಠಂದೂರು ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ.