ಕಾಣಿಯೂರು ಗ್ರಾ. ಪಂ. ಸಾಮಾನ್ಯ ಸಭೆ | ಕಾಣಿಯೂರಿನಲ್ಲಿ ಎಕ್ಸ್ಪ್ರೆಸ್ ರೈಲು ನಿಲುಗಡೆಗೆ ಕಾರಣರಾದ ಶೋಭಾ ಕರಂದ್ಲಾಜೆಗೆ ಅಭಿನಂದನಾ ನಿರ್ಣಯ
ಕಾಣಿಯೂರು : ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಅಧ್ಯಕ್ಷೆ ಮಾಧವಿ ಕೋಡಂದೂರು ರವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಗತವರದಿ ಮಂಡಿಸಿ,ಅರ್ಜಿ ಸುತ್ತೋಲೆಗಳನ್ನು ಮಂಡಿಸಿದರು.
ಸದಸ್ಯ ಸುರೇಶ್ ಓಡಬಾಯಿ ಮಾತನಾಡಿ ಕಳೆದ 24 ವರ್ಷಗಳ ಬಳಿಕ ಕಾಣಿಯೂರಿನಲ್ಲಿ ಎಕ್ಸ್ಪ್ರೆಸ್ ರೈಲು ನಿಲುಗಡೆಯಾಗಲು ಕಾರಣೀಕರ್ತರಾದ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಅಭಿನಂದನಾ ನಿರ್ಣಯ ಕೈಗೊಳ್ಳಬೇಕೆಂದು ಹೇಳಿದರು.ಅದರಂತೆ ಅಭಿನಂದನಾ ನಿರ್ಣಯವನ್ನು ಸಂಸದರಿಗೆ ಕಳುಹಿಸವಂತೆ ಸಭೆ ನಿರ್ಧರಿಸಿತು.
ಕಾಣಿಯೂರಿನಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ಕೇಂದ್ರ ಸರ್ಕಾರದ ಜನೌಷಧಿ ಕೇಂದ್ರ ಸ್ಥಾಪನೆ ಮಾಡಲು ನಿರ್ಣಯ ಮಾಡುವ ಬಗ್ಗೆ ಸದಸ್ಯ ಗಣೇಶ್ ಉದುನಡ್ಕ ಪ್ರಸ್ತಾಪಿಸಿದರು.
ಕಾಣಿಯೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 200 ವಿದ್ಯಾರ್ಥಿಗಳು ಕಲಿಯುತಿದ್ದು,ಕೊಠಡಿಗಳ ಸಮಸ್ಯೆ ಎದುರಾಗಿದೆ,ಸರಿಯಾದ ಶೌಚಾಲಯವೂ ಇಲ್ಲ,ಅಲ್ಲದೇ ಇಂಗ್ಲಿಷ್ ಮಾಧ್ಯಮ ತರಗತಿಗೆ ಶಿಕ್ಷಕರ ಸಮಸ್ಯೆಯೂ ಇದ್ದು ಮುಂದಿನ ಶೈಕ್ಷಣಿಕ ಅವಧಿಗೆ ಮುಂಚೆ ಈ ಸೌಲಭ್ಯ ಒದಗಿಸಿಕೊಡಬೇಕೆಂದು ಶಿಕ್ಷಣ ಇಲಾಖೆ ಮತ್ತು ಶಾಸಕರಿಗೆ ನಿರ್ಣಯ ಕಳುಹಿಸುವಂತೆ ಸದಸ್ಯ ಸುರೇಶ್ ಓಡಬಾಯಿ ಒತ್ತಾಯಿಸಿದರು.
ಈ ಶಾಲೆ ಕೇಂದ್ರ ಭಾಗದಲ್ಲಿ ಇದ್ದು, ಅಧಿಕ ವಿದ್ಯಾರ್ಥಿಗಳು ಇರುವ ಕಾರಣ ಮಾದರಿ ಶಾಲೆಯೆಂದು ಘೋಷಿಸಬೇಕೆಂದು ಸದಸ್ಯ ರಾಮಣ್ಣ ಗೌಡ ಮುಗರಂಜ ಹೇಳಿದರು.
ದೋಳ್ಪಾಡಿಯೂ ತೀರಾ ಗ್ರಾಮೀಣ ಭಾಗದಲ್ಲಿದ್ದು ಇಲ್ಲಿನ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮ ತರಗತಿ ಆರಂಭಿಸುವಂತೆ ಇಲಾಖೆಗೆ ಬರೆಯಲು ಸದಸ್ಯ ಉಮೇಶ್ ಆಚಾರ್ಯ ಸೂಚಿಸಿದರು.
ಕಾಣಿಯೂರು ಗ್ರಾಮದ ಪೆರ್ಲೋಡಿ ಭಾಗದ ಹಲವು ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದು,ಈ ಬಗ್ಗೆ ಕುಡಿಯುವ ನೀರಿನ ಯೋಜನೆ ಕೈಗೊಳ್ಳಲು ಜಿ.ಪಂ.ಗೆ ಬರೆಯಲು ಸುರೇಶ್ ಓಡಬಾಯಿ ಒತ್ತಾಯಿಸಿದರು.ಸ್ವಚ್ಛ ಭಾರತ್ ಯೋಜನೆಯಡಿ ಸಾರ್ವಜನಿಕ ಶೌಚಾಲಯದ ಅವಶ್ಯಕತೆ ಇರುವ ಬಗ್ಗೆ ಜಿ.ಪಂ.ಗೆ ನಿರ್ಣಯ ಕಳುಹಿಸಿಕೊಡುವ ಬಗ್ಗೆ ಸಭೆ ನಿರ್ಣಯ ಅಂಗೀಕರಿಸಲಾಯಿತು.
ಸಭೆಯಲ್ಲಿ ತಾ.ಪಂ.ಉಪಾಧ್ಯಕ್ಷೆ ಲಲಿತಾ ಈಶ್ವರ್,ಗ್ರಾ.ಪಂ.ಉಪಾಧ್ಯಕ್ಷೆ ಕಮಲಾಕ್ಷಿ ಬೆದ್ರಂಗಳ, ಸದಸ್ಯರಾದ ಬಾಬು ದರ್ಖಾಸ್,ರಾಮಣ್ಣ ಗೌಡ ಮುಗರಂಜ, ಸುರೇಶ್ ಓಡಬಾಯಿ, ಲಲಿತ ತೋಟ, ಗಣೇಶ್ ಉದುನಡ್ಕ, ರುಕ್ಮಿಣಿ ನಾಗಲೋಕ, ವೀರಪ್ಪ ಗೌಡ ಉದಲಡ್ಡ, ಪದ್ಮನಾಭ ಅಂಬುಲ, ಸೀತಮ್ಮ ಖಂಡಿಗ,ಕುಸುಮಾವತಿ ಕೊಪ್ಪ, ದಿನೇಶ್ ಇಡ್ಯಡ್ಕ,ಉಮೇಶ್ ಆಚಾರ್ಯ, ಬೇಬಿ ಕುಕ್ಕುಡೇಲು,ಸುಮಿತ್ರಾ ಕೂರೇಲು ಉಪಸ್ಥಿತರಿದ್ದರು. ಸಿಬ್ಬಂದಿ ತಿಮ್ಮಪ್ಪ ಗೌಡ ಬೀರುಕುಡಿಕೆ ಸಹಕರಿಸಿದರು.