Breaking : ಚೀನಾದಿಂದ ಕಡಬಕ್ಕೆ ವಾಪಸ್ಸಾದ ವ್ಯಕ್ತಿ | ಕಡಬ ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿ
ಕಡಬ, ಮಾ.11 : ಕೋರೋನಾ ವೈರಸ್ ಜಗತ್ತಿನೆಲ್ಲೆಡೆ ತಲ್ಲಣಗಳನ್ನು ಉಂಟುಮಾಡುತ್ತಿರುವ ಈ ಸಂದರ್ಭದಲ್ಲಿ ಚೀನಾಕ್ಕೆ ತೆರಳಿ ವಾಪಸ್ಸಾದ ವ್ಯಕ್ತಿಯೊಬ್ಬರ ಬಗ್ಗೆ ಕಡಬ ಪರಿಸರದಲ್ಲಿ ಆತಂಕ ಸೃಷ್ಟಿಯಾಗಿದೆ.
ಈ ಹಿಂದೆ ಚೀನಾ ದೇಶಕ್ಕೆ ವೃತ್ತಿ ಸಂಬಂಧಿತ ಪ್ರವಾಸ ಕೈಗೊಂಡಿದ್ದ ಕಡಬದ ವ್ಯಕ್ತಿಯೋರ್ವರು ಎರಡು ದಿನಗಳ ಹಿಂದೆ ತಾಯ್ನಾಡಿಗೆ ಮರಳಿದ್ದರು. ಅವರು ಕಡಬಕ್ಕೆ ಆಗಮಿಸುತ್ತಿದ್ದ ಸುದ್ದಿ ಹಬ್ಬುತ್ತಿದ್ದಂತೆ ಕಡಬ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರಲ್ಲಿ ಒಂದು ರೀತಿಯ ಭಯದ ವಾತಾವರಣ ಸೃಷ್ಟಿಯಾಗಿದೆ.
ಆದರೆ ಚೀನಾದಿಂದ ಮರಳಿದ ಈ ವ್ಯಕ್ತಿಯ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆದಿದ್ದು ವಿಮಾನನಿಲ್ದಾಣದಲ್ಲಿ ಅವರಲ್ಲಿ ಯಾವುದೇ ರೀತಿಯ ಕೋರೋನಾ ಲಕ್ಷಣಗಳು ಕಂಡು ಬಾರದ ಹಿನ್ನೆಲೆಯಲ್ಲಿ ಅವರನ್ನು ಮನೆಗೆ ಹೋಗಲು ಅಧಿಕಾರಿಗಳು ಅನುಮತಿ ನೀಡಿದ್ದರು.
ಆದರೆ ಅವರ ಮನೆಯ ಪರಿಸರದಲ್ಲಿ ಕೆಲವರು ಆತಂಕ ವ್ಯಕ್ತಪಡಿಸಿದ್ದರಿಂದ ಬುಧವಾರದಂದು ಮತ್ತೆ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಕೊರೋನಾ ವೈರಸ್ ಲಕ್ಷಣಗಳು ಕಂಡುಬಾರದ ಹಿನ್ನೆಲೆಯಲ್ಲಿ ಕಳುಹಿಸಿಕೊಡಲಾಗಿದೆ. ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ತ್ರಿಮೂರ್ತಿ ಅವರು ತಿಳಿಸಿದ್ದಾರೆ.
ಆದರೆ ಈ ವ್ಯಕ್ತಿಯ ಬಳಿ ಕೋರೋನಾ ನೆಗೆಟಿವ್ ಸರ್ಟಿಫಿಕೇಟ್ ಇಲ್ಲದ ಕಾರಣದಿಂದ ಜನರಲ್ಲಿನ ಭಯ ಕಮ್ಮಿಯಾಗಿಲ್ಲ.
ಮೊದಮೊದಲು ಕೊರೋನಾ ಬಗ್ಗೆ ಅಸಡ್ಡೆ ಮಾಡಿದ ಜನರು, ಈಗೀಗ ಕರ್ನಾಟಕದಲ್ಲಿ ಕೊರೋನಾ ಭಾದಿತ ನಾಲ್ಕು ಜನ ಪತ್ತೆಯಾದ ಮೇಲೆ ಜಾಗ್ರತರಾಗಿದ್ದಾರೆ. ಕೆಮ್ಮು, ಕಫ, ಸೀನು ಮೂಲಕ ಹರಡುವ ರೋಗವಾದ್ದರಿಂದ ಜನರ ಆತಂಕ ಜಾಸ್ತಿಯಾಗಿದೆ. ಈವರೆಗಿನ ಜನಸಾಮಾನ್ಯರ ತಿಳುವಳಿಕೆಯಂತೆ ಒಂದು ಸಲ ಕೊರೋನಾ ಬಂದರೆ ಅದಕ್ಕೆ ಮದ್ದು ಇಲ್ಲ. ಈ ಅಂಶವೇ ಕಡಬ ಪರಿಸರದಲ್ಲಿ ಜನರನ್ನು ಭಯಕ್ಕೀಡು ಮಾಡುತ್ತಿರುವುದು.