ಕತ್ತಲೆ ದೂರ ಮಾಡಿದ ಗ್ರಾಪಂ ಸದಸ್ಯ..! ಕೊಯಿಲತ್ತಡ್ಕ- ಡಿಂಬ್ರಿ ರಸ್ತೆಗೆ ದಾರಿದೀಪ
ಪುತ್ತೂರು: ಆರ್ಯಾಪು ಗ್ರಾಮದ ಡಿಂಬ್ರಿ ಒಂದು ಕಾಲದಲ್ಲಿ ಕುಗ್ರಾಮವಾಗಿತ್ತು. ಮಣ್ಣಿನ ಸಂಪರ್ಕ ರಸ್ತೆ ಇದ್ದರೂ ಅದರಲ್ಲಿ ಸಂಚಾರ ಮಾಡುವಂತಿರಲಿಲ್ಲ, ಹೊಂಡಗುಂಡಿಗಳಿಂದ ತುಂಬಿದ ಈ ರಸ್ತೆಯಲ್ಲಿ ಮಳೆಗಾಲದಲ್ಲಿ ನಡೆದಾಡಲೂ ಸಾಧ್ಯವಾಗುತ್ತಿರಲಿಲ್ಲ.
ಸುಮಾರು 50 ವರ್ಷಗಳ ಬಳಿಕ ಈ ರಸ್ತೆಗೆ ಕಾಂಕ್ರೀಟ್ ಭಾಗ್ಯ ಬಂತು. ಅರ್ಧ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ನಡೆಸಲಾಗಿದೆ. ಅತೀ ಅಗತ್ಯ ವಿದ್ದ ರಸ್ತೆಯಲ್ಲಿ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡುರವರ ಅನುದಾನದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸಲಾಗಿದೆ.
ಕೊಯಿಲತ್ತಡ್ಕದ ಮುಖ್ಯ ರಸ್ತೆಯಿಂದ ಸುಮಾರು 12 ವರ್ಷಗಳ ಹಿಂದೆ ಅಂದಿನ ಜಿಪಂ ಸದಸ್ಯರಾಗಿದ್ದ ಪೆರ್ವೋಡಿಯವರ ಕಾಲದಲ್ಲಿ ಡಾಮಾರು ಹಾಕಲಾಗಿತ್ತು. ಇದೀಗ ಸುಮಾರು ಒಂದು ಕಿ ಮೀ ನಷ್ಟು ವ್ಯಾಪ್ತಿಗೆ ಕಾಂಕ್ರೀಟ್ ಮಾಡಲಾಗಿದೆ. ಮಾಜಿ ಶಾಸಕಿ ಶಂಕುಂತಳಾ ಶೆಟ್ಟಿಯವರು ಸ್ವಲ್ಪ ಅನುದಾನವನ್ನು ಕೊನೇ ಕ್ಷಣದಲ್ಲಿ ಬಿಡುಗಡೆ ಮಾಡಿದ್ದರು. ರಸ್ತೆ ಹೇಗೋ ಅಲ್ಲಿಂದಲ್ಲಿಂಗೆ ಕಾಂಕ್ರೀಟ್ ಮುಗಿದಿದೆ.
ದಾರಿದೀಪ ಬೆಳಗಿತು
ಇದೇ ರಸ್ತೆಗೆ ಆರ್ಯಾಪು ಗ್ರಾಪಂ ಸದಸ್ಯ ರಮೇಶ್ ರೈ ಡಿಂಬ್ರಿ ಯವರು ದಾರಿದೀಪದ ವ್ಯವಸ್ಥೆಯನ್ನು ಮಾಡುವುದಾಗಿ ಗ್ರಾಪಂ ಚುನಾವಣೆ ವೇಳೆ ಭರವಸೆ ನೀಡಿದ್ದರು. ಅದರಂತೆ ಡಿಂಬ್ರಿಗೆ ದಾರಿದೀಪದ ವ್ಯವಸ್ಥೆ ಪೂರ್ಣಗೊಂಡಿದೆ. ಅದೆಷ್ಟೋ ವರ್ಷಗಳ ಬಳಿಕ ಡಿಂಬ್ರಿಯ ಜನರು ತಮ್ಮ ರಸ್ತೆಗೆ ದಾರಿದೀಪವನ್ನು ಕಂಡಿದ್ದಾರೆ. ಕೊಟ್ಟ ಭರವಸೆಯನ್ನು ಈಡೇರಿಸಿದ ಗ್ರಾಪಂ ಸದಸ್ಯಗೆ ಗ್ರಾಮಸ್ಥರು ಅಭಿನಂದನೆಯನ್ನು ಸಲ್ಲಿಸಿದ್ದಾರೆ. ರಾಜಕೀಯ ಅಂದ್ರೆ ಹೀಗಿರಬೇಕು. ಅಭಿವೃದ್ದಿಯಲ್ಲಿ ರಾಜಕೀಯ ಇಲ್ಲ ಎಂಬುದನ್ನು ಗ್ರಾಪಂ ಸದಸ್ಯ ರಮೇಶ್ ರೈ ತೋರಿಸಿಕೊಟ್ಟು ಎಲ್ಲರಿಗೂ ಮಾದರಿಯಾಗಿದ್ದಾರೆ.
ಹಲವು ವರ್ಷಗಳ ನಮ್ಮ ಕನಸು ನನಸಾಗಿದೆ
ದಾರಿದೀಪದ ವ್ಯವಸ್ಥೆಯನ್ನು ಮಾಡಿಕೊಟ್ಟ ಗ್ರಾಪಂ ಸದಸ್ಯ ರಮೇಶ್ ರೈ ಡಿಂಬ್ರಿಯವರಿಗೆ ಅನಂತ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆ. ದೇವರು ಅವರನ್ನು ಉತ್ತುಂಗಕ್ಕೆ ಏರಿಸಲಿ, ರಜಕೀಯದಲ್ಲಿ ಇನ್ನಷ್ಟು ಸ್ಥಾನ ಮಾನ ಸಿಗುವಂತಾಗಲಿ
– ಮಹಮ್ಮದ್ ಮುಸ್ಲಿಯಾರ್, ಡಿಂಬ್ರಿ