ಪರೀಕ್ಷಾ ಭೀತಿಗೆ ದಕ್ಷಿಣ ಕನ್ನಡದಲ್ಲಿ ಮೊದಲ ಬಲಿ | ವಗ್ಗದ ದ್ವಿತೀಯ ಪಿಯುಸಿ ವಿದ್ಯಾರ್ಥಿ ನಂದನ್ ಆತ್ಮಹತ್ಯೆ
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯೋರ್ವ ಪರೀಕ್ಷೆ ಕಷ್ಟವಿತ್ತೆಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ವಗ್ಗದಲ್ಲಿ ಶನಿವಾರ ಸಂಭವಿಸಿದೆ.
ಬಂಟ್ವಾಳದ ಖಾಸಗಿ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ನಂದನ್ (17) ಆತ್ಮಹತ್ಯೆ ಮಾಡಿಕೊಂಡ ಯುವಕ.
ನಂದನ್ ವಗ್ಗದ ಕಾರಿಂಜಕೋಡಿ ನಿವಾಸಿ ಅರವಿಂದ ರಾವ್ ಅವರ ಪುತ್ರ.
ನಂದನ್ ಎಸೆಸ್ಸೆಲ್ಸಿಯಲ್ಲಿ ಪರೀಕ್ಷೆಯಲ್ಲಿ ಶೇ. 94 ಅಂಕ ಪಡೆದಿದ್ದ ಪ್ರತಿಭಾವಂತ. ಪ್ರಥಮ ಪಿಯುಸಿಯಲ್ಲೂ ಅಷ್ಟೇ ಚೆನ್ನಾಗಿ ಮಾರ್ಕು ಗಳಿಸಿದ್ದ. ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಭೌತಶಾಸ್ತ್ರ ಪರೀಕ್ಷೆ ಬರೆದಿದ್ದ. ಭೌತಶಾಸ್ತ್ರ ಪತ್ರಿಕೆ ಆತನ ಪಾಲಿಗೆ ಕಷ್ಟವಿತ್ತು. ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದ ಈತನು ತಾನು ನಿರೀಕ್ಷೆ ಮಾಡಿದ ಅಂಕಗಳು ಪರೀಕ್ಷೆಯಲ್ಲಿ ಬರುವುದಿಲ್ಲ ಎಂದು ಖಾತ್ರಿಯಾದ ಮೇಲೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾನೆ.
ರಾತ್ರಿ ಸುಮಾರು 12 ಗಂಟೆಯವರೆಗೂ ಈತ ಮನೆಯಲ್ಲಿ ಓದುತ್ತಿದ್ದ. ತಾಯಿ ಎದ್ದು ಮಗನನ್ನು ಮಲಗಲು ಹೇಳಲು ಆತನ ರೂಮಿಗೆ ಹೋದರೆ ಅಲ್ಲಿ ಮಗ ಇರಲಿಲ್ಲ. ತಕ್ಷಣ ಮನೆಯವರೆಲ್ಲ ಹುಡುಕಾಟ ನಡೆಸಿ, ಆತನ ಮೊಬೈಲ್ ಫೋನ್ ಗೆ ಕಾಲ್ ಕೊಟ್ಟಿದ್ದಾರೆ. ಆಗ ಆತನ ಮೊಬೈಲ್ ಫೋನ್ ತೋಟದಲ್ಲಿ ರಿಂಗ್ ಆಗಿದೆ. ಆಗ ಅಲ್ಲೇ ಸುತ್ತ ಮುತ್ತ ಹುಡುಕುವಾಗ ಪಕ್ಕದ ಬಾವಿಯಲ್ಲಿ ಈತನ ಮೃತದೇಹ ತೇಲುತ್ತಿದೆ. ಆಗ ಆತ ಆತ್ಮಹತ್ಯೆ ಮಾಡಿಕೊಂಡು ಕೆಲವೇ ನಿಮಿಷಗಳಷ್ಟೇ ಆಗಿದೆ.
ಘಟನಾಸಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಎಸ್.ಐ. ಪ್ರಸನ್ನ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.