ಚಟ್ಟೆ ತೋರಿಸುತ್ತೇನೆಂದು ಕಾಡಿಗೆ ಕರೆದುಕೊಂಡು ಹೋಗಿ ಬಲಾತ್ಕಾರ । ನೆಕ್ಕಿಲಾಡಿ ಆರೋಪಿಗೆ 10 ವರ್ಷ ಶಿಕ್ಷೆ
ನೆಕ್ಕಿಲಾಡಿ 34 ರಲ್ಲಿ, ನಾಲ್ಕು ವರ್ಷದ ಹಿಂದೆ ಮಾಡಿದ ಬಲಾತ್ಕಾರದ ಸಂಭೋಗಕ್ಕೆ ಪೋಕ್ಸೋ ನ್ಯಾಯಾಲಯದಿಂದ 10 ವರ್ಷಗಳ ಶಿಕ್ಷೆ ಪ್ರಕಟವಾಗಿದೆ.
ಪ್ರಕರಣದ ಸಂಕ್ಷಿಪ್ತ ವಿವರಣೆ
ಅದು 2016 ರ ಅಕ್ಟೊಬರ್ 21. ನೆಕ್ಕಿಲಾಡಿ ತಾಳೆ ಹಿತ್ಲು ನಿವಾಸಿ ನಾರಾಯಣ ನಾಯ್ಕ ಎಂಬವರ ಮಗ 33 ವರ್ಷದ ರವಿ ನಾಯ್ಕ ತನ್ನ ಮನೆ ಹತ್ತಿರದಲ್ಲಿರುವ ಅಪ್ರಾಪ್ತ ಬಾಲಕಿಯನ್ನು ಪಕ್ಕದ ಕಾಡಿಗೆ ಕರೆದಿದ್ದಾನೆ. ಕಾಡಿನಲ್ಲಿ ತಾನು ಚಟ್ಟೆಯನ್ನು ( ಉಡದ ಜಾತಿಯ ಪ್ರಾಣಿ )ನೋಡಿದ್ದಾಗಿಯೂ, ನಿನಗೂ ತೋರಿಸುತ್ತೇನೆಂದು ಆಮಿಷವೊಡ್ಡಿ ಕಾಡಿಗೆ ಕರಕೊಂಡು ಹೋಗಿದ್ದಾನೆ. ಆನಂತರ ಕಾಡಿನಲ್ಲಿ ಆಕೆಯ ಮೇಲೆ ಆಕ್ರಮ ಸಂಭೋಗ ಕ್ರಿಯೆ ನಡೆಸಲು ಪ್ರಯತ್ನಿಸಿದ್ದಾನೆ. ಬಾಲಕಿ ಕೂಗಿಕೊಳ್ಳಲು ಪ್ರಯತ್ನಿಸಿದ್ದಾಗ ಆಕೆಯ ಬಾಯಿಯನ್ನು ಮುಚ್ಚಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಸಂಭೋಗ ನಡೆಸಿದ್ದಾನೆ.
ಬಾಲಕಿಯು ಮನೆಗೆ ಹಿಂದಿರುಗಿದ ಮೇಲೆ ತನ್ನ ತಾಯಿಗೆ ಎಲ್ಲ ವಿಷಯವನ್ನು ತಿಳಿಸಿದ್ದಾಳೆ. ತಾಯಿಯು ತಕ್ಷಣ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲೆ ನಡೆದ ಅತ್ಯಾಚಾರ ಪರಿಗಣಿಸಿ ಪೋಕ್ಸೋ ಮತ್ತು ಇತರ ಐಪಿಸಿ ಕೇಸು ಹಾಕಿದ್ದಾರೆ. ಆ ನಂತರ ಈ ಕೇಸು ಮಂಗಳೂರಿನಲ್ಲಿರುವ ಪೋಕ್ಸೋ ನ್ಯಾಯಾಲಯಕ್ಕೆ ದೋಷಾರೋಪಣಾಪಟ್ಟಿಗಾಗಿ ಕಳುಹಿಸಲಾಗಿದೆ.
ಆ ನಂತರ ಪುತ್ತೂರಿನ ಪೋಕ್ಸೋ ನ್ಯಾಯಾಲವು ಕಾರ್ಯಾಚರಣೆಗೆ ಬಂದ ನಂತರ, ಸದರಿ ಕೇಸು ಮತ್ತೆ ಪುತ್ತೂರಿನ ಪೋಕ್ಸೋ ನ್ಯಾಯಾಲಯದ ವ್ಯಾಪ್ತಿಗೆ ಬಂದಿದೆ. ಕೇಸಿನ ಸಮಗ್ರ ತನಿಖೆ ನಡೆದು ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಆಪಾದಿತ ರವಿ ನಾಯ್ಕನನ್ನು ಅಪರಾಧಿ ಎಂದು ನಿನ್ನೆ, ಮಾರ್ಚ್ 6 ಕ್ಕೆ ಘೋಷಿಸಿದ್ದಾರೆ. ಅಪರಾಧಿಗೆ 10 ವರ್ಷದ ಕಠಿಣ ಕಾರಾಗ್ರಹ ಶಿಕ್ಷೆಯನ್ನು ವಿಧಿಸಿದೆ ಮತ್ತು ಬಾಲಕಿಗೆ ಪರಿಹಾರಾರ್ಥವಾಗಿ 35000 ದಂಡ ವಿಧಿಸಿದೆ.
ಶಿಕ್ಷೆ ಖಚಿತವಾಗುತ್ತಿದ್ದಂತೆಯೇ ಎಸ್ಕೇಪ್
ಅಪರಾಧಿ ಎಂದು ಘೋಷಣೆಯಾಗುವ ದಿನವೂ ಕೋರ್ಟಿನಲ್ಲಿದ್ದ ಅಪರಾಧಿ, ಶಿಕ್ಷೆಯ ಪ್ರಮಾಣ ಪ್ರಕಟವಾಗುವಷ್ಟರಲ್ಲಿ ತಲೆಮರೆಸಿಕೊಂಡಿದ್ದಾನೆ. ಇನ್ನು ಶಿಕ್ಷೆ ಖಚಿತ ಎಂದು ತಿಳಿದು ಆತ ಎಸ್ಕೇಪ್ ಆಗಿದ್ದ. ಆತನ ಪತ್ತೆಗಾಗಿ ಹುಡುಕಾಟ ನಡೆಸಿದ್ದರೂ ಆತ ಸಿಕ್ಕಿರಲಿಲ್ಲ. ಕೊನೆಗೆ ಉಪ್ಪಿನಂಗಡಿ ಎಸ್ ಐ ಈರಯ್ಯ ಅವರ ನೇತೃತ್ವದ ತಂಡ ಹಲವು ಪ್ರಯತ್ನಗಳ ನಂತರ ಆರೋಪಿಯನ್ನು ಹೊತ್ತುಕೊಂಡು ಬಂದು ಜೈಲು ಬಾಗಿಲಿನಲ್ಲಿ ತಂದು ಬಿಟ್ಟಿದೆ.