ನೆಲ್ಲಿಗುಡ್ಡೆ ಈಗ ಶ್ರೀ ಕ್ಷೇತ್ರ ರುದ್ರಗಿರಿ । ಕಾರ್ಣಿಕ ಕ್ಷೇತ್ರದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಕ್ಷಣ ಎಣಿಕೆ | ಮಾ. 8 ರಿಂದ ಶುರು
2015 ರ ಪ್ರಾರಂಭದಲ್ಲಿ ಇತ್ತ ನೀವು ಹೋಗಿದ್ದರೆ, ಅದು ನೆಲ್ಲಿಗುಡ್ಡೆ. ಅಲ್ಲಿ ನೆಲ್ಲಿಮರವೂ ಇಲ್ಲ, ಏನೂ ಗಿಡ ಮರಗಳಿಲ್ಲದ ಖಾಲಿ ಭೂಮಿ.
ಇವತ್ತು ಅದು ಶ್ರೀ ಕ್ಷೇತ್ರ ರುದ್ರಗಿರಿ ! ಇವತ್ತು ಅದು ಶಿವನು ಪ್ರತಿಷ್ಠಾಪನೆಗೊಳ್ಳಲು ಕಾಯುತ್ತಿರುವ ಶ್ರೀ ಕ್ಷೇತ್ರ ರುದ್ರಗಿರಿ ಮೃತ್ಯುಂಜಯನ ದೇವಸ್ಥಾನ.
ದೇವಳದ ಪ್ರಾಂಗಣದಲ್ಲಿ ಕಾರ್ಯದರ್ಶಿ ದುಗ್ಗಪ್ಪ ಗೌಡ ಪೊಸಂದೋಡಿ ಕೆಲಸದ ಪರಿಶೀಲನೆಯಲ್ಲಿ
ಯುದ್ಧೋಪಾದಿಯಲ್ಲಿ ಸಾಗಿದೆ ಫಿನಿಶಿಂಗ್ ಕೆಲಸಗಳು
2014-2015 ರ ಸಮಯದಲ್ಲಿ ಊರಿನಲ್ಲಿ ಹತ್ತು ಹಲವು ಅಪಸವ್ಯಗಳು ನಡೆದಿದ್ದವು. ಜನರಲ್ಲಿ ಭಯ, ಕೆಲವು ಸಾವು, ರೋಗ ರುಜಿನ, ನೆಮ್ಮದಿಯಿಲ್ಲದ ಜೀವನ ಹೀಗೆ ಸುತ್ತ ಮುತ್ತಲ ಜನರ ಜೀವನ ಸಾಗಿತ್ತು. ಅಂತಹ ಸಂಧರ್ಭದಲ್ಲಿ ಊರ ಹಿರಿಯರು ಸೇರಿಕೊಂಡು ಪ್ರಶ್ನಾ ಚಿಂತನ ನಡೆಸಿದರು.
ಪ್ರಶ್ನಾ ಚಿಂತನದ ಫಲ ಶ್ರುತಿ :
ನೆಲ್ಲಿಗುಡ್ಡೆಯೆಂದು ಇಲ್ಲಿಯತನಕ ಯಾರೂ ಕೃಷಿ ಮಾಡದೆ, ಒತ್ತುವರಿ ಮಾಡದೆ, ರಬ್ಬರು ಹಾಕದೆ ಹಾಗೆಯೇ ಪಡೀಲ್ ಬಿಟ್ಟಿದ್ದ ಈ ಜಾಗ ಸಾಮಾನ್ಯ ಜಾಗವಾಗಿರಲಿಲ್ಲ. ಇದಕ್ಕೆ ಸುಮಾರು 500 ವರ್ಷಗಳ ಇತಿಹಾಸವಿದೆ. ಅದಕ್ಕೂ ಹಿಂದೆ ಇವತ್ತಿನಿಂದ 1000 ವರ್ಷಗಳಿಗೂ ಹಿಂದಕ್ಕೆ ಈ ಪ್ರದೇಶವು ಲಿಂಗಾಯತ ರಾಜರುಗಳ ಪ್ರಾಭಲ್ಯದ ಕ್ಷೇತ್ರ. ಇಲ್ಲಿ ಸಣ್ಣ ಗುಡಿಯನ್ನಿಟ್ಟು, ಧ್ವಜ ಹಾರಿಸಿ ಮೃತ್ಯುಭಯ ನಿವಾರಕ ಶಿವನನ್ನು ಆರಾಧನೆ ಮಾಡುತ್ತಿದ್ದರು. ಊರ ಮಂದಿ ಜಾತ್ರೋತ್ಸವ ನಡೆಸಿಕೊಂಡು ಬರುತ್ತಿದ್ದರು. ಆದರೆ ಆ ನಂತರ, ಈ ಊರಲ್ಲಿ ಲಿಂಗಾಯತ ಸಾಮಂತರ ಪ್ರಾಬಲ್ಯ ಕುಗ್ಗಿ ಜೈನ ರಾಜರುಗಳು ಈ ಪ್ರದೇಶವನ್ನು ಆಳಲು ಶುರುಮಾಡಿದರು. ಆಗ ಶಿವನ ಆರಾಧನೆ ನಿಂತು ಹೋಗಿ ಈ ಭೂಮಿ ಹಾಗೆಯೇ ಏನೂ ಬೆಳೆಯದೆ ಪಡೀಲ್ ಬಿದ್ದಿತು.
ಆದರೆ ಪ್ರಶ್ನಾ ಚಿಂತನದ ಫಲಶ್ರುತಿಯಾಗಿ ಇಲ್ಲಿನ ಶಿವ ದೇಗುಲದ ಗರ್ಭ ಗುಡಿಯಂತೆ ಇದ್ದ ಹುತ್ತವೊಂದನ್ನು ಆವೃತ ಮಾಡಿಕೊಂಡ ಜಾಗವನ್ನು ಅಭಿವೃದ್ಧಿ ಮಾಡಬೇಕೆಂಬ ಸಂಕಲ್ಪ ಮಾಡಲಾಯಿತು. ಅಂತೆಯೇ, ನೆಲ್ಲಿಗುಡ್ಡೆಎಂದು ಕರೆಯಲ್ಪಡುತ್ತಿದ್ದ ಖಾಲಿ ಭೂಮಿಯನ್ನು ಶ್ರೀ ರುದ್ರಗಿರಿ ಕ್ಷೇತ್ರ ಎಂದು ನಾಮಕರಣ ಮಾಡಲಾಯಿತು.
ಆದರೆ ಅದಕ್ಕಿಂತಲೂ ಮೊದಲು, ಈಗ ದೇವಸ್ಥಾನ ಕಟ್ಟುತ್ತಿರುವ ರುದ್ರಗಿರಿ ಕ್ಷೇತ್ರದ ಆವರಣದಲ್ಲೇ ಒಂದು ಸ್ವಾಮಿಗಳ ಬೃಂದಾವನವಿರುವುದು ಪತ್ತೆಯಾಯಿತು. ಅಭಿವೃದ್ಧಿ ಕೆಲಸ ಮಾಡಲು ಅಗೆಯುವಾಗ ಕಲ್ಲು ಇಟ್ಟಿಗೆಗಳಿಂದ ಕಟ್ಟಿದ ಬೃಂದಾವನದ ಇರುವಿಕೆ ಪತ್ತೆಯಾಗಿ, ಅಲ್ಲಿಗೆ ಅಗೆತವನ್ನು ನಿಲ್ಲಿಸಲಾಯಿತು. ಆನಂತರ ವೈದಿಕ ಗುರುಗಳ ಸಲಹೆಯಂತೆ, ಎಲ್ಲದಕ್ಕಿಂತ ಮೊದಲು ಈ ಬೃಂದಾವನದ ಅಭಿವೃದ್ಧಿಗೆ ಕೈ ಹಾಕಲಾಯಿತು.
2015 ರಲ್ಲಿ ಖಾಲಿ ಗುಡ್ಡಿಯಾಗಿದ್ದ ನೆಲದಲ್ಲಿ ನೀವು ನಿಂತು ನೋಡಿದರೆ ಇಂದು ಅಲ್ಲಿ ಕಾಣಬರುವುದು ಭವ್ಯವಾಗಿ ಎದ್ದು ನಿಂತ ಶ್ರೀ ರುದ್ರಗಿರಿ ಮೃತ್ಯುಂಜಯನ ದೇವಸ್ಥಾನ.
ಅನ್ಯ ಧರ್ಮೀಯರ ಸಹಾಯ – ಇದು ಸ್ಥಳ ಕಾರ್ಣಿಕ ಎಂಬುದು ಊರವರ ಅಭಿಪ್ರಾಯ
ನೆಲ್ಲಿಗುಡ್ಡೆಯನ್ನು ಅಭಿವೃದ್ಧಿ ಮಾಡಿ ಶ್ರೀ ಕ್ಷೇತ್ರ ರುದ್ರಗಿರಿ ಮಾಡಲು ಹೊರಟಾಗ ದೇವಸ್ಥಾನದ ಪೂರ್ವ ಭಾಗಕ್ಕೆಕಲ್ಲೇರಿಯಲ್ಲಿ ಉಪ್ಪಿನಂಗಡಿ- ಗುರುವಾಯನಕೆರೆಗೆ ಹೋಗುವ ರಾಜ ರಸ್ತೆಯಿದೆ. ಆದರೆ ದೇವಸ್ಥಾನ ಮತ್ತು ಆ ರಸ್ತೆಯ ಮದ್ಯೆ ಅಡಿಕೆ ತೋಟವಿದೆ. ಆದುದರಿಂದ ರುದ್ರಗಿರಿಯಿಂದ ಆ ರಸ್ತೆಗೆ ಶಾರ್ಟ್ ಕಟ್ ರಸ್ತೆ ಕಲ್ಪಿಸುವುದು ಹೇಗೆಂದು ಯೋಚಿಸುವಾಗ ಸಹಾಯಕ್ಕೆ ಬಂದದ್ದು ಆ ತೋಟದ ಮಾಲೀಕ ಶ್ರೀ ಅಬ್ಬಾಸ್ ಅವರು. ಅವರು ತಮ್ಮ ಒಳ್ಳೆಯ ಫಸಲು ಬರುವ ಎಳೆಯ ಪ್ರಾಯದ 75 ಅಡಿಕೆ ಮರಗಳನ್ನು ಕಡಿದು ಜಾಗ ಕೊಟ್ಟದ್ದು ಮಾತ್ರವಲ್ಲ, ಸ್ವತಃ ರಸ್ತೆ ಮಾಡಿ ಕೊಟ್ಟಿದ್ದಾರೆ.
ದೇವಸ್ಥಾನದ ಉತ್ತರಭಾಗಕ್ಕೆ ಶ್ರೀ ಆಸಿಫ್ ಎನ್ನುವವರು ಸುಮಾರು 5 ಸೆಂಟ್ಸ್ ಜಾಗವನ್ನು ಮಾರ್ಗ ಮಾಡಲು ಕೊಟ್ಟರು. ಅಲ್ಲದೆ ತಮ್ಮ ಫಸಲು ಬರುತ್ತಿರುವ 20 ಮೂರ್ತೆಯ ರಬ್ಬರು ಗಿಡಗಳನ್ನು ದಾನವಾಗಿ ನೀಡಿ, ಸ್ವತಃ ಮುಂದೆ ನಿಂತು ರಸ್ತೆ ಮಾಡಿ ಕೊಟ್ಟಿದ್ದಾರೆ. ಅಲ್ಲದೆ, 5 ಸೆಂಟ್ಸ್ ಜಾಗವನ್ನು ರಿಯಾಯಿತಿ ದರದಲ್ಲಿ ಮಾರಿದ್ದಾರೆ.
ರಯಿಕುಡೆ ಉಸ್ಮಾನ್ ಅವರು ಸುಮಾರು 1.5 ಲಕ್ಷಕ್ಕೂ ಅಧಿಕ ಬೆಲೆಬಾಳುವ ಹೆಬ್ಬಲಸು ಮರವನ್ನು ಮೃತ್ಯುಂಜಯನ ದೇಗುಲ ಕಟ್ಟಲು ನೀಡಿದ್ದಾರೆ. ಮಡಂತ್ಯಾರ್ ನ ಎಂ ಆರ್ ಸುಪಾರಿಯ ಹೈದರ್ ಅವರು 25000 ರೂ. ಗಳನ್ನೂ, ದಿ. ಅಳಕೆ ಕಾಸಿಂ ಪುತ್ರ ಮಸೂದ್ ಅವರು ತಮ್ಮ ಶಕ್ತ್ಯಾನುಸಾರ 10000 ರೂ ಬೆಲೆಬಾಳುವ ವಸ್ತುವನ್ನು ದಾನವಾಗಿ ನೀಡಿದ್ದಾರೆ.
ಮತ್ತಷ್ಟು ವಿಶೇಷ ರುದ್ರಗಿರಿಯದ್ದು :
ನಮ್ಮ ಹೆಚ್ಚಿನ ದೇವಸ್ಥಾನಗಳಲ್ಲಿ ಈ ಅಭಿವೃದ್ಧಿ ಕಾರ್ಯಗಳು, ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಪುನರ್ ಪ್ರತಿಷ್ಠೆ ಮುಂತಾದ ಕಾರ್ಯಕ್ರಮಗಳು ನಡೆಯುತ್ತಲೇ ಇದೆ. ಅಂತಹ ಎಲ್ಲ ಕಡೆಯೂ ಒಂದು ಸಣ್ಣ ಮಟ್ಟದ ದೇಗುಲವಾದರೂ ಇದ್ದೆ ಇರುತ್ತದೆ. ಅದರ ವಿಸ್ತರಣೆ, ಅಭಿವೃದ್ಧಿ ಮುಂತಾದವುಗಳನ್ನು ಈಗ ಮಾಡುತ್ತಿದ್ದಾರೆ. ಆದರೆ ಶ್ರೀ ಕ್ಷೇತ್ರ ರುದ್ರಗಿರಿ ಇವೆಲ್ಲಕ್ಕಿಂತ ಭಿನ್ನ. ಇಲ್ಲಿ 2015 ರಲ್ಲಿ ಏನೊಂದೂ ಇರಲಿಲ್ಲ : ಹಿಂದೆ ದೇಗುಲವಿದ್ದ ಕುರುಹು ಮಾತ್ರ ಇತ್ತು.
ಬೇರೆ ಎಲ್ಲ ಕಡೆ ದೇಗುಲಗಳನ್ನು ಒಂದೋ ರಾಜರುಗಳು ಕಟ್ಟಿದರು. ಅಥವಾ ಉದ್ಯಮಿಗಳು, ಋಷಿಗಳು, ಸನ್ಯಾಸಿಗಳು ನಿರ್ಮಿಸಿದರು. ಆದರೆ ಶ್ರೀ ರುದ್ರಗಿರಿ ಕ್ಷೇತ್ರ ಕೇವಲ ಊರಿನವರು ನಿರ್ಮಿಸುತ್ತಿರುವ ಕ್ಷೇತ್ರ. ಇಲ್ಲಿ ಊರಿನವರ ಶ್ರಮ ಮತ್ತು ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇನೆಂಬ ಪ್ರಯತ್ನ ಎದ್ದು ಕಾಣುತ್ತಿದೆ. ಒಟ್ಟು 3.5 ಕೋಟಿ ಬಜೆಟ್ನಲ್ಲಿ ಇವತ್ತು ಜನಾಕರ್ಷಿಸುತ್ತಿರುವ ಶ್ರೀ ರುದ್ರಗಿರಿ ಕ್ಷೇತ್ರ ಊರವರ ನಿರಂತರ 5 ವರ್ಷಗಳ ಶ್ರಮದ ಫಲ. ಅವರ ಹಣೆಯಿಂದ ಕೊಡಗಟ್ಟಲೆ ಶ್ರಮದಾನದ ಬೆವರು ಹರಿದಿದೆ. ಇಷ್ಟೆಲ್ಲ ಪ್ರಯತ್ನ ಮೂಲಕ ಒಂದೊಂದಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದು ಇವತ್ತು ಬ್ರಹ್ಮಕಲಶೋತ್ಸವಕ್ಕೆ ಇನ್ನೊಂದೇ ದಿನ ಬಾಕಿ ಉಳಿದುಕೊಂಡಿದೆ.
ನಾಳಿದ್ದು, 08/03/2020 ರಿಂದ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು ನಿನ್ನೆ, 05/03/2020 ರಂದು ಬಿಂಬ ಆಗಮನವಾಗಿದೆ. ಬಿಂಬ ಆಗಮನದ ಕೆಲವು ಫೋಟೋಗಳು ಇಲ್ಲಿವೆ ನೋಡಿ.