ಪುಂಜಾಲಕಟ್ಟೆ|ಕಾರು ಪಲ್ಟಿ |ನಿವೃತ್ತ ಯೋಧಗೆ ಗಾಯ,ಪತ್ನಿ ಸಾವು|

ಬಂಟ್ವಾಳ: ಪುಂಜಾಲಕಟ್ಟೆ ತಿರುವಿನಲ್ಲಿ ಕಾರೊಂದು ಮಗುಚಿ ಬಿದ್ದು ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ಬಂಟ್ವಾಳ- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆ ಸಮೀಪ ಫೆ.24ರ ರಾತ್ರಿ ನಡೆದಿದೆ.
ಪುಂಜಾಲಕಟ್ಟೆ ಶ್ರೀ ರಾಮ ನಗರ ಭಜನಾ ಮಂದಿರದ ಪಕ್ಕ ತಿರುವಿನಲ್ಲಿ ಸ್ವಿಫ್ಟ್ ಡಿಸೈರ್ ಕಾರು ರಸ್ತೆಯಿಂದ ಕೆಳಕ್ಕೆ ಮಗುಚಿ ಬಿದ್ದಿದ್ದು, ಕಾರಿನಲ್ಲಿದ್ದ ನಿವೃತ್ತಯೋಧ ಸದಾನಂದ ಗಂಭೀರ ಗಾಯಗೊಂಡಿದ್ದು,ಅವರ ಪತ್ನಿ ಇಂದಿರಾ ಸಾವಿಗೀಡಾಗಿದ್ದಾರೆ.
ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಕರ್ಲ ನಿವಾಸಿ ನಿವೃತ್ತ ಯೋಧ, ನಿವೃತ್ತ ಸ್ಟೇಟ್ ಬ್ಯಾಂಕ್ ಉದ್ಯೋಗಿ ಸದಾನಂದ ಅವರು ಗಂಭೀರ ಗಾಯಗೊಂಡಿದ್ದು, ಅವರ ಪತ್ನಿ ಇಂದಿರಾ (58) ಮೃತ ಪಟ್ಟಿದ್ದಾರೆ.
ಇಬ್ಬರೂ ಕಾಶಿಪಟ್ನದಲ್ಲಿರುವ ಮಗಳ ಮೈದುನನ ವಿವಾಹ ಮದರಂಗಿ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿಂದ ಹಿಂತಿರುಗಿ ಬರುವಾಗ ರಾತ್ರಿ ಸುಮಾರು 11.30ರ ಹೊತ್ತಿಗೆ ಪುಂಜಾಲಕಟ್ಟೆ ಭಜನಾ ಮಂದಿರ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಕಾರು ಮುಖ್ಯ ರಸ್ತೆಯಿಂದ ಕೆಳಗೆ ಉರುಳಿ ಬಿದ್ದಿದ್ದು ಮೊದಲು ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ. ನಂತರ ಹತ್ತಿರದ ಮನೆಯವರು ಗಮನಿಸಿ ಊರವರನ್ನು ಸೇರಿಸಿ ಗಾಯಾಳುಗಳನ್ನು 108 ಅಂಬ್ಯುಲೆನ್ಸ್ ನಲ್ಲಿ ಬಂಟ್ವಾಳ ಆಸ್ಪತ್ರೆಗೆ ಸಾಗಿಸಿದ್ದಾರೆ. ದಾರಿ ಮಧ್ಯೆ ಇಂದಿರಾ ಅವರು ಮೃತ ಪಟ್ಟಿದ್ದಾರೆ.
ಸದಾನಂದ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆ ಗೆ ದಾಖಲಿಸಲಾಗಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.