2nd PUC ವಾರ್ಷಿಕ ಪರೀಕ್ಷೆ|ಅಕ್ರಮ ತಡೆಗಟ್ಟಲು ನೂತನ ವ್ಯವಸ್ಥೆ!
ಬೆಂಗಳೂರು: ಮಾರ್ಚ್ 4 ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಲಿವೆ. ಪರೀಕ್ಷೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸಕಲ ಸಿದ್ದತೆಗಳನ್ನ ಮಾಡಿಕೊಂಡಿದೆ. ಪರೀಕ್ಷಾ ಸಮಯದಲ್ಲಿ ಯಾವುದೇ ಅಕ್ರಮ ನಡೆಯಬಾರದು ಅಂತ ಹೊಸ ಹೊಸ ನಿಯಮಗಳನ್ನ ಜಾರಿಗೆ ತರುತ್ತಿದೆ.
ಈ ವರ್ಷವೂ ಪರೀಕ್ಷೆಯಲ್ಲಿ ಹೊಸ ನಿಯಮ ಜಾರಿಗೆ ನಿರ್ಧಾರ ಮಾಡಿದ್ದು, ಉತ್ತರ ಪತ್ರಿಕೆಗೆ ಮುಕ್ತಾಯದ ಸೀಲ್(THE END) ಹಾಕೋ ನಿಯಮ ಜಾರಿಗೆ ತರುತ್ತಿದೆ.
ವಿದ್ಯಾರ್ಥಿಗಳಿಗೆ 40 ಪುಟಗಳ ಉತ್ತರ ಪತ್ರಿಕೆಯನ್ನ ಪರೀಕ್ಷೆ ಬರೆಯಲು ನೀಡಲಾಗುತ್ತೆ. ವಿದ್ಯಾರ್ಥಿಯು ಪರೀಕ್ಷೆ ಬರೆದು ಮುಗಿಸಿದ ಬಳಿಕ ವಿದ್ಯಾರ್ಥಿ ಬರೆದ ಕೊನೆಯ ಪುಟದಲ್ಲಿ ಇಲಾಖೆಯ ಹೆಸರುಳ್ಳ ಮುಕ್ತಾಯದ(THE END) ಸೀಲ್ ಹಾಕಲು ಇಲಾಖೆ ನಿರ್ಧಾರ ಮಾಡಿದೆ.
ಈ ಮೂಲಕ ಪರೀಕ್ಷೆ ನಂತರವೂ ಅಕ್ರಮ ನಡೆಯೋ ಸಾಧ್ಯತೆಗೆ ಕೊಕ್ಕೆ ಹಾಕಿದೆ. ಈ ಹಿಂದೆ ವಿದ್ಯಾರ್ಥಿಗಳ ಪರೀಕ್ಷೆ ಬರೆದ ಬಳಿಕ ಉತ್ತರ ಪತ್ರಿಕೆಗಳನ್ನು ಹಾಗೆ ಪಡೆದು ಪ್ಯಾಕ್ ಮಾಡಲಾಗ್ತಿತ್ತು. ಹೀಗಾಗಿ ಖಾಲಿಯಿದ್ದ ಪುಟದಲ್ಲಿ ಮೌಲ್ಯಮಾಪನ ವೇಳೆ, ನಂತರ ಏನಾದ್ರು ಅಕ್ರಮ ಮಾಡೋ ಸಾಧ್ಯತೆ ಇತ್ತು. ಈಗ ಅದಕ್ಕೂ ಪಿಯುಸಿ ಬೋರ್ಡ್ ಅಂತ್ಯ ಹಾಡಿದೆ. ವಿದ್ಯಾರ್ಥಿ ಬರೆದ ಕೊನೆಯ ಪುಟಕ್ಕೆ ಮುಕ್ತಾಯದ ಸೀಲ್ ಜೊತೆ ಮೇಲ್ವಿಚಾರಕರ ಸಹಿ ಹಾಕೋ ನಿಯಮ ಕಡ್ಡಾಯ ಮಾಡಿದೆ.
ಈಗಾಗಲೇ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಒಂದೇ ಮಾದರಿ ಸೀಲ್ ಗಳನ್ನ ರವಾನೆ ಮಾಡಿದೆ. ಹೊಸ ನಿಯಮದಿಂದ ಅಕ್ರಮ ತಡೆ ಸಾಧ್ಯನಾ ಕಾದು ನೋಡಬೇಕು.